ಕುಂದಾಪುರ, ಅ 30: ಶಾಲೆಯ ಮಧ್ಯ ವಾರ್ಷಿಕ ಪರೀಕ್ಷೆಯಲ್ಲಿ ನಾಲ್ಕು ವಿಷಯಗಳಲ್ಲಿ ಅನುತ್ತೀರ್ಣಳಾಗಿದ್ದ ವಿಚಾರ ಹಾಗೂ ಪೋಷಕರ ಸಭೆಗೆ ತಾಯಿ ಹಾಜರಾಗದ ಹಿನ್ನೆಲೆಯಲ್ಲಿ ಮನನೊಂದ ಬಾಲಕಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಸ್ರೂರು ಗ್ರಾಮದಲ್ಲಿ ಅ.30ರ ಬೆಳಗ್ಗೆ ನಡೆದಿದೆ.

ಬಸ್ರೂರು ಗ್ರಾಮದ ಫಾತಿಮಾ ಅಕ್ಸಾ (15) ಮೃತಪಟ್ಟ ಬಾಲಕಿ. ಈಕೆ ಬಸ್ರೂರು ಸರಕಾರಿ ಪ್ರೌಢಶಾಲೆಯಲ್ಲಿ ಎಸೆಸೆಲ್ಸಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಮಧ್ಯ ವಾರ್ಷಿಕ ಪರೀಕ್ಷೆಯಲ್ಲಿ ನಾಲ್ಕು ವಿಷಯಗಳಲ್ಲಿ ಅನುತ್ತೀರ್ಣ ಳಾಗಿದ್ದಳು. ಅ.30ರಂದು ಶಾಲೆಯಲ್ಲಿ ಪೋಷಕರ ಸಭೆ ನಿಗದಿಯಾಗಿತ್ತು. ಆದರೆ, ಬಾಲಕಿಯ ತಾಯಿ ಅಮ್ರೀನ್ ಸಭೆಗೆ ಹಾಜರಾಗಲು ನಿರಾಕರಿಸಿದ್ದರು ಎನ್ನಲಾಗಿದೆ.

ಇದರಿಂದ ಮನನೊಂದ ಫಾತಿಮಾ ಅಕ್ಸಾ ಮನೆಯ ಕೋಣೆಗೆ ತೆರಳಿ ಬಾಗಿಲು ಹಾಕಿಕೊಂಡಿದ್ದಳು. ಸ್ವಲ್ಪ ಸಮಯದ ಬಳಿಕ ತಂದೆ ವೈ. ಫೈರೋಜ್ ಕೋಣೆಗೆ ತೆರಳಿ ಬಾಗಿಲು ತೆರೆದಾಗ, ಫಾತಿಮಾ ಅಕ್ಸಾ ನೈಲಾನ್ ಶಾಲಿನಿಂದ ಫ್ಯಾನ್‌ಗೆ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ. ತಕ್ಷಣ ಆಕೆಯನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಬಳಿಕ ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಈ ಬಗ್ಗೆ ಮೃತಳ ತಂದೆ ವೈ ಫೈರೋಜ್ ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor