ಕುಂದಾಪುರ | ಗುಲ್ವಾಡಿ ಮಸೀದಿಯ ಆಸ್ತಿ ವಕ್ಫ್ಗೆ ಹಸ್ತಾಂತರಿಸಿರುವುದಕ್ಕೆ ವಿರೋಧ: ಜಮಾತಿನವರಿಂದ ಪ್ರತಿಭಟನೆ
ಕುಂದಾಪುರ: ಗುಲ್ವಾಡಿ ಮೆಹರಾಜ್ ಜುಮಾ ಮಸೀದಿಗೆ ಸೇರಿದ 2.68 ಎಕರೆ ಜಾಗವನ್ನು ಅಕ್ರಮ ದಾಖಲೆಗಳ ಮೂಲಕ ಕಬಳಿಸಿ ಜಮಾತಿನವರ ಗಮನಕ್ಕೆ ತಾರದೇ ವಕ್ಫ್ ಮಂಡಳಿಗೆ ನೀಡಿದ್ದಾರೆಂದು ಆರೋಪಿಸಿ ಜಮಾತಿನವರು ಶುಕ್ರವಾರ ಮಸೀದಿ ಬಳಿ ಪ್ರತಿಭಟನೆ ನಡೆಸಿದರು.
ಎರಡು ವರ್ಷಗಳ ಹಿಂದೆ ಕೇವಲ 11 ಜನರ ಆಡಳಿತ ಸಮಿತಿ ಸಭೆ ನಡೆಸಿ, 240 ಮನೆಗಳ ಜಮಾತಿಗೆ ತಿಳಿಸದೆ, ಜಾಗವನ್ನು ಮಹಿಳಾ ಕಾಲೇಜಿಗೆ ಕೊಡುವ ನಿರ್ಣಯ ಮಾಡಲಾಗಿದೆ ಎಂದು ಪ್ರತಿಭಟನಕಾರರು ಆರೋಪಿಸಿದ್ದಾರೆ.
ಈ ಜಾಗ ಕಾಲೇಜು ನಿರ್ಮಿಸಲು ಸೂಕ್ತವೇ ಎಂದು ಪರಿಶೀಲಿಸಲು ಉಡುಪಿ ಜಿಲ್ಲಾ ಅಲ್ಪಸಂಖ್ಯಾತ ಇಲಾಖೆಯು ನೇಮಿಸಿದ್ದ ಇಬ್ಬರು ಅಧಿಕಾರಿಗಳು ಸ್ಥಳಕ್ಕೆ ಬಂದು ಈ ಜಾಗ, ಜಿಲ್ಲಾ ಕೇಂದ್ರ ಹಾಗೂ ತಾಲೂಕಿನಿಂದ ತುಂಬಾ ದೂರ ಇದ್ದು ಸರಿಯಾದ ರಸ್ತೆಯೇ ಇಲ್ಲ ಎಂದು ಲಿಖಿತ ವರದಿ ನೀಡಿದ್ದು ಆ ವರದಿಯನ್ನು ಜಿಲ್ಲಾ ವಕ್ಫ್ ಮಂಡಳಿ ಈವರೆಗೆ ನೀಡದೆ ಮುಚ್ಚಿಟ್ಟಿದೆ ಎಂದು ಹೋರಾಟದ ಪ್ರಮುಖರಾದ ಯಾಕೂಬ್ ಖಾದರ್ ಗುಲ್ವಾಡಿ ಆರೋಪಿಸಿದ್ದಾರೆ.
ಬೆವರಿನ ಹಣ ಕೊಟ್ಟು ಈ ಜಾಗ ಖರೀದಿ ಮಾಡಿದ್ದು ವರ್ಷಕ್ಕೆ 25-30 ಲಕ್ಷ ರೂ. ಜಮಾತ್‌ನಿಂದ ಮಸೀದಿಗೆ ಖರ್ಚು ಮಾಡುತ್ತೇವೆ. ಯಾರ ಗಮನಕ್ಕೂ ತಾರದೇ ಜಾಗ ಹಸ್ತಾಂತರಿಸಿದ್ದು ಸರಿಯಲ್ಲ. ನಾವು ವಿದ್ಯಾಲಯ ನಿರ್ಮಾಣದ ವಿರೋಧಿಗಳಲ್ಲ ಎಂದು ಯಾಕೂಬ್ ಸ್ಪಷ್ಟಪಡಿಸಿದರು.
ಜಮಾತ್ ಮಾಜಿ ಕಾರ್ಯದರ್ಶಿ ಜಿ. ಮಹಮ್ಮದ್ ಮಾತನಾಡಿ, ಕನ್ವರ್ಷನ್, 9 &11 ಇಲ್ಲದೆ ಗುಲ್ವಾಡಿ ಗ್ರಾಮ ಪಂಚಾಯಿತಿಯಿಂದ ನಿರಪೇಕ್ಷಣ ಪತ್ರ ಪಡೆದು, ಪೊಲೀಸ್ ರಕ್ಷಣೆಯಲ್ಲಿ ಕೆಲವು ದಿನಗಳಿಂದ ಕೆಲಸ ಮಾಡಲಾಗು ತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ಅಧೀಕ್ಷಕರು, ಪೊಲೀಸ್ ಮಹಾನಿರ್ದೇಶಕರು, ಸಚಿವ ಯು.ಟಿ. ಖಾದರ್ ಮತ್ತು ಲೋಕಾಯುಕ್ತರಿಗೆ ದೂರು ನೀಡಲಿದ್ದು ಸಂಬಂದಪಟ್ಟವರ ಮೇಲೆ ಕಾನೂನು ಕ್ರಮವಾಗಬೇಕು. ಶೀಘ್ರ ಕಾಮಗಾರಿ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜಮಾತ್ ಕಮಿಟಿ ಸದಸ್ಯ ಜಿ.ಇಸ್ಮಾಯಿಲ್, ಅಲಿ ಅಕ್ಬರ್, ಮಾಜಿ ಅಧ್ಯಕ್ಷ ಹಂಜಾ, ಸ್ಥಳೀಯ ಹೋರಾಟಗಾರರಾದ ರಫೀಕ್, ಆರೀಫ್, ಉಸ್ತಾದ್ ಮಹಮ್ಮದ್ ಹನೀಫ್, ಅಮೀರ್ ಹಂಝಾ ಮಾತನಾಡಿದರು. ಜಮಾತ್‌ನ ಸುಲೈಮಾನ್ ತೋಟ, ಇಕ್ಬಾಲ್, ಅಲ್ ಫಾಝ್, ಕಲಂದರ್ ಉಸ್ಮಾನ್, ಅಮಾನುಲ್ಲಾ, ಸಮದ್, ಪಕೀರ್ ಸಲಾಂ, ಜಿ.ಎಂ.ಮುನೀರ್ ಹಾಗೂ ಜಮಾತಿನವರು ಉಪಸ್ಥಿತರಿದ್ದರು.