ಉಡುಪಿ, ನ.7: ವಿದ್ಯಾರ್ಥಿಗಳಲ್ಲಿ ಕನ್ನಡ ಭಾಷಾಭಿಮಾನ ಬೆಳೆಸುವುದರ ಜತೆಗೆ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಶ್ರೀಮಂತಿಕೆಯ ಕುರಿತು ಅರಿವು ಮೂಡಿಸುವ ಮಹತ್ತರ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಾಪಕರ ಸಂಘದ ಅಧ್ಯಕ್ಷ ಡಾ.ಚಿನ್ನಸ್ವಾಮಿ ಹೇಳಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಡಾ. ಶಿವರಾಮ ಕಾರಂತ ಟ್ರಸ್ಟ್ ಸಹಯೋಗದಲ್ಲಿ ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಕನ್ನಡ ವಿಭಾಗ ಹಾಗೂ ಸಾಂಸ್ಕೃತಿಕ ಸಂಘದ ಆಶ್ರಯದಲ್ಲಿ ಶುಕ್ರವಾರ ಆಯೋಜಿಸಲಾದ ಕನ್ನಡ ರಾಜ್ಯೋತ್ಸವ ಮತ್ತು ಕಲಾಪ್ರತಿಭೋ ತ್ಸವದ ಅಂಗವಾಗಿ ಅರಿವಿನ ಬೆಳಕು ಉಪನ್ಯಾಸ-20’ ಹಾಗೂ ಜಿಲ್ಲಾ ಮಟ್ಟದ ಆಶುಭಾಷಣ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಆಶಯ ಭಾಷಣ ಮಾಡಿದ ಡಾ.ಶಿವರಾಮ ಕಾರಂತ ಟ್ರಸ್ಟ್, ಅಧ್ಯಕ್ಷ ಡಾ.ಗಣನಾಥ ಶೆಟ್ಟಿ, ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಭವ್ಯ ಇತಿಹಾಸವನ್ನು ಜನಸಾಮಾನ್ಯರಿಗೆ ತಲುಪಿಸುವ ಕಾರ್ಯ ರಾಜ್ಯೋತ್ಸವ ಆಚರಣೆಗಳ ಮೂಲಕ ನಡೆಯಬೇಕು. ಇಂತಹ ಕಾರ್ಯಕ್ರಮಗಳು ಕನ್ನಡ ಪ್ರತಿಭೆಗಳ ಸೃಷ್ಟಿಗೆ ಪ್ರೇರಣೆಯಾಗಲಿವೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ.ನಿಕೇತನ ಮಾತನಾಡಿ, ಕನ್ನಡ ನಾಡು-ನುಡಿಯ ಹಬ್ಬವನ್ನು ಆಚರಿಸುವುದು ಶಿವರಾಮ ಕಾರಂತರಿಗೆ ಸಲ್ಲಿಸುವ ಗೌರವವಾಗಿದೆ ಎಂದರು.

ಕಾಲೇಜಿನ ಐಕ್ಯೂಎಸಿ ಸಂಚಾಲಕಿ ಪ್ರೊ.ಶ್ರೀಮತಿ ಅಡಿಗ, ನಿವೃತ್ತ ಪ್ರಾಧ್ಯಾಪಕ ದಯಾನಂದ ಡಿ, ರೇಡಿಯೋ ಕುಂದಾಪುರ ಆರ್‌ಜೆ ಜ್ಯೋತಿ ಸಾಲಿಗ್ರಾಮ, ಡಾ.ಶಿವರಾಮ ಕಾರಂತ ಟ್ರಸ್ಟ್‌ನ ಸದಸ್ಯೆ ಭಾರತಿ ಮರವಂತೆ ಉಪಸ್ಥಿತರಿದ್ದರು.

ಕನ್ನಡ ವಿಭಾಗದ ಉಪನ್ಯಾಸಕಿ ಅರ್ಚನಾ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಡಾ.ಶಿವರಾಮ ಕಾರಂತ ಟ್ರಸ್ಟ್‌ನ ಕಾರ್ಯದರ್ಶಿ ಪೂರ್ಣಿಮಾ ಸ್ವಾಗತಿಸಿದರು. ಸಾಂಸ್ಕೃತಿಕ ಸಂಚಾಲಕಿ ಆಶಾ ವಂದಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor