ಕ್ರೀಡಾಕೂಟ: ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆ
ಕುಂದಾಪುರ, ನ.7: ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಮಟ್ಟದ 17ರ ವಯೋಮಿತಿಯ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ 1,500ಮೀ. ಓಟದಲ್ಲಿ ವಡೇರಹೋಬಳಿಯ ಪಿಎಂಶ್ರೀ ಕೆಪಿಎಸ್ ಸರಕಾರಿ ಪ್ರೌಢಶಾಲೆಯ ಎಸೆಸೆಲ್ಸಿ ವಿದ್ಯಾರ್ಥಿ ವಿಠ್ಠಲ ಬಾಳಪ್ಪ ಮನವಳ್ಳಿ ದ್ವಿತೀಯ ಸ್ಥಾನ ಗಳಿಸಿ, ರಾಜಸ್ಥಾನದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಸ್ಪರ್ಧೆಯಲ್ಲಿ ಗೆದ್ದು, ಬೆಂಗಳೂರಿನಿಂದ ಊರಿಗೆ ಗುರುವಾರ ಆಗಮಿಸಿದ ವಿಠ್ಠಲ ಬಾಳಪ್ಪ ಅವರನ್ನು ಶಾಲೆಯ ವತಿಯಿಂದ ಸ್ವಾಗತಿಸಿ, ಬಳಿಕ ತೆರೆದ ವಾಹನದಲ್ಲಿ ಶಾಲಾ ಮಕ್ಕಳೊಂದಿಗೆ ಕುಂದಾಪುರದ ಮುಖ್ಯ ರಸ್ತೆಯಲ್ಲಿ ಪುರ ಮೆರವಣಿಗೆ ನಡೆಸಿ ಅಭಿನಂದನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಗ್ರೇಡ್ -1 ಅಧ್ಯಕ್ಷ ಕುಸುಮಾಕರ ಶೆಟ್ಟಿ, ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಅಶ್ವಥ್ ಕುರ್ಮಾ, ಮಾಜಿ ಅಧ್ಯಕ್ಷ ಕೃಷ್ಣಾನಂದ ಶಾನುಭಾಗ್, ಸದಸ್ಯರು, ಮುಖ್ಯೋಪಾಧ್ಯಾಯ ಬಾಲಚಂದ್ರ ಹೆಬ್ಬಾರ್, ಆತನ ಪೋಷಕರಾದ ಮೂಲತಃ ಮಲ್ಲಾಪುರ ಗ್ರಾಮದ ಬಾಳಪ್ಪ ಹಾಗೂ ಯಲ್ಲವ್ವ ಉಪಸ್ಥಿತರಿದ್ದರು.