ಕುಂದಾಪುರ, ನ.7: ಕುಂದಾಪುರ ಪುರಸಭೆ ವ್ಯಾಪ್ತಿಯ ವಡೇರಹೋಬಳಿ ಪ್ರದೇಶದ ಬಿಟಿಆರ್ ರಸ್ತೆ ಕಳೆದ ಹಲವು ವರ್ಷಗಳಿಂದ ದುರಸ್ತಿ ಕಾಣದೆ ಹೊಂಡ ಗುಂಡಿಗಳಿಂದ ತುಂಬಿದ್ದು ಜನಸಾಮಾನ್ಯರು ನಡೆದಾಡುವುದು ಕಷ್ಟ ವಾಗಿದೆ. ಪುರಸಭೆ ಶೀಘ್ರವೇ ರಸ್ತೆಯನ್ನು ದುರಸ್ತಿ ಮಾಡಬೇಕೆಂದು ಒತ್ತಾಯಿಸಿ ಡಿವೈಎಫ್‌ಐ ವಡೆರಹೋಬಳಿ ಘಟಕದ ವತಿಯಿಂದ ಸಾರ್ವಜನಿಕವಾಗಿ ರಸ್ತೆಯ ಮುಂಭಾಗದಲ್ಲಿ ಪ್ರತಿಭಟನೆ ಇಂದು ನಡೆಸಲಾಯಿತು.

ಪ್ರತಿಭಟನಾಕಾರರನ್ನುದ್ದೇಶಿಸಿ ಡಿವೈಎಫ್‌ಐ ಮಾಜಿ ಮುಖಂಡ ಚಂದ್ರಶೇಖರ್ ವಿ. ಮಾತನಾಡಿ, ನಾಗರೀಕರಿಂದ ಪುರಸಭೆಯು ಹಲವು ರೀತಿಯಲ್ಲಿ ತೆರಿಗೆ ಇಲಾಖೆ ವಸೂಲಿ ಮಾಡುತ್ತಿದ್ದರೂ ಕೂಡ ಆ ಹಣವನ್ನು ರಸ್ತೆ ಅಭಿವೃದ್ಧಿ ಗಾಗಿ ಖರ್ಚು ಮಾಡದಿರುವುದು ಖಂಡನೀಯ. ರಸ್ತೆ ಪ್ರಾರಂಭದ ತಿರುವು ಅಗಲಗೊಳಿಸಲು ಹಾಗೂ ರಸ್ತೆಗೆ ತಾಗಿಕೊಂಡಿರುವ ವಿದ್ಯುತ್ ಕಂಬವನ್ನು ಸ್ಥಳಾಂತರಿಸಬೇಕು. ತಕ್ಷಣವೇ ರಸ್ತೆ ರಿಪೇರಿ ಆಗದಿದ್ದಲ್ಲಿ ಮುಂದಿನ ದಿನದಲ್ಲಿ ಪುರಸಭೆ ಎದುರು ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.

ಅನ್ನಿ ಡಯಾಸ್ ಸೇರಿದಂತೆ ಸ್ಥಳೀಯ ನಾಗರೀಕರು ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು. ಪ್ರತಿಭಟನೆಯ ನೇತೃತ್ವವನ್ನು ತಾಲೂಕು ಅಧ್ಯಕ್ಷ ವಿಶ್ವನಾಥ್ ಕಾರ್ಯದರ್ಶಿ ಗಣೇಶ್ ದಾಸ್, ಘಟಕದ ಕಾರ್ಯದರ್ಶಿ ರಾಜ ಬಿಟಿಆರ್, ಸಂತೋಷ್ ಬಿಟಿಆರ್, ರಾಜು ದೇವಾಡಿಗ ಹಾಗೂ ಗೋಲ್ಡನ್ ಮಿಲ್ಲರ್ ಕ್ಲಬ್ ಮುಖಂಡರು ವಹಿಸಿದ್ದರು. ಗಣೇಶದಾಸ್ ಸ್ವಾಗತಿಸಿ, ರಮೇಶ್ ವಿ. ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor