ಕುಂದಾಪುರ, ನ.14: ಎಸ್‌ಐ.ಆರ್ ಹಾಗೂ ವೋಟ್ ಬಚಾವೋ -ದೇಶ್ ಬಚಾವೋ ಅಭಿಯಾನದ ಪ್ರಯುಕ್ತ ಪ್ರಜಾಪ್ರಭುತ್ವದ ಮೌಲ್ಯಗಳ ರಕ್ಷಣೆ, ಮತದಾರರ ಹಕ್ಕುಗಳ ಸಂರಕ್ಷಣೆ ಹಾಗೂ ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆಗಾಗಿ ಆಗ್ರಹಿಸಿ ಬೈಂದೂರು ವಿಧಾನಸಭಾ ಕ್ಷೇತ್ರದ ವಂಡ್ಸೆ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ವಂಡ್ಸೆಯ ಪೇಟೆಯಲ್ಲಿ ಶನಿವಾರ ಪಾದಯಾತ್ರೆ ಹಾಗೂ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.

ಪ್ರತಿಭಟನಾ ಸಭೆಯನ್ನುದ್ದೇಶಿಸಿ ಬೈಂದೂರು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಮಾತನಾಡಿ, ಇಡೀ ರಾಷ್ಟ್ರದಲ್ಲಿ 13 ಕೋಟಿ ಮತ ಗಳ್ಳತನವನ್ನು ಬಿಜೆಪಿ ಪಕ್ಷ, ಚುನಾವಣಾ ಆಯುಕ್ತರ ಮೂಲಕ ನಡೆಸಿದ್ದು, ಸ್ವಾತಂತ್ರ್ಯ ನಂತರದ ಬಹಳ ದೊಡ್ಡ ದುರಂತ ಇದಾಗಿದೆ. ರಾಜ್ಯದಲ್ಲಿ ಸುಮಾರು 95 ಲಕ್ಷ ಮತ ಕಳ್ಳತನ ಮಾಡಲಾಗಿದ್ದು ಸಂವಿಧಾನವನ್ನು ಗಾಳಿಗೆ ತೂರಲಾಗಿದೆ. ಬೈಂದೂರು ಕ್ಷೇತ್ರದಲ್ಲಿ 45 ಸಾವಿರ ಓಟು ತೆಗೆದುಹಾಕಿ ಕಾಂಗ್ರೆಸ್‌ಗೆ ತೊಂದರೆ ಕೊಡಲಾಗುತ್ತಿದೆ ಎಂದು ಆರೋಪಿಸಿದರು.

ಕೆಪಿಸಿಸಿ ಸಂಯೋಜಕ ಕೆ.ವಿಕಾಸ್ ಹೆಗ್ಡೆ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದೇ ಒಬ್ಬ ವ್ಯಕ್ತಿ ಅಧಿಕಾರಕ್ಕೆ ಬರಬೇಕಾದರೆ ಆತ ಮತದಾರನ ಮೇಲೆ ನಂಬಿಕೆ ಇಡಬೇಕು. ಅಧಿಕಾರಕ್ಕೋಸ್ಕರ ಅರ್ಹ ಮತದಾರ ರನ್ನು ಹೊರಹಾಕುವ ಹುನ್ನಾರವನ್ನು ಬಿಜೆಪಿ ಪಕ್ಷ ಮಾಡಿದೆ. ದೇಶದ ನ್ಯಾಯಾಲಯ, ಚುನಾವಣಾ ಆಯೋಗದ ಮೇಲೆ ಅಪಾರ ನಂಬಿಕೆಯಿದೆ. ಆದರೆ ಯಾರದ್ದೇ ಪರವಾಗಿ ಕೆಲಸ ಮಾಡುವ ಆಯೋಗದ ಕಾರ್ಯ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದು ಟೀಕಿಸಿದರು.

ಚುನಾವಣಾ ಆಯೋಗವನ್ನು ದುರುಪಯೋಗಪಡಿಸಿಕೊಂಡು ಬಿಜೆಪಿ ಕೆಲವೆಡೆ ಅಧಿಕಾರಕ್ಕೆ ಬಂದಿದೆ. ವಾಮಮಾರ್ಗದಿಂದ ಅಧಿಕಾರಕ್ಕೇರುವ ಹಪಾಹಪಿಯ ಬಿಜೆಪಿ ಪಕ್ಷವನ್ನು ಅಧಿಕಾರದಿಂದ ದೂರವುಳಿಯುವಂತೆ ಮಾಡಬೇಕು ಎಂದು ಅವರು ತಿಳಿಸಿದರು.

ಇದಕ್ಕೂ ಮೊದಲು ವಂಡ್ಸೆ ಪೇಟೆಯಲ್ಲಿ ಜರಗಿದ ಪ್ರತಿಭಟನಾ ಮೆರವಣಿಗೆಗೆ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು ಚಾಲನೆ ನೀಡಿದರು. ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು ಪ್ರಾಸ್ತಾವಿಸಿದರು.

ಕಾಂಗ್ರೆಸ್ ಮುಖಂಡರಾದ ಎಸ್.ರಾಜು ಪೂಜಾರಿ, ಸಂಪಿಗೇಡಿ ಸಂಜೀವ ಶೆಟ್ಟಿ, ವಂಡಬಳ್ಳಿ ಜಯರಾಮ ಶೆಟ್ಟಿ, ಮೀನುಗಾರ ಮುಖಂಡ ಮದನ್ ಕುಮಾರ್, ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಪೂಜಾರಿ, ಶರತ್ ಕುಮಾರ್ ಶೆಟ್ಟಿ ಬಾಳಿಕೆರಿ, ಶೇಖರ್ ಬಳೆಗಾರ, ಅನಂತ್ ಮೋವಾಡಿ, ಉದಯ್ ಜಿ.ಪೂಜಾರಿ, ಸಂತೋಷ್ ಶೆಟ್ಟಿ ಬಲಾಡಿ, ಜ್ಯೋತಿ ಪುತ್ರನ್, ಜ್ಯೋತಿ ಕಾವ್ರಾಡಿ, ಹನೀಫ್, ತಮ್ಮಯ್ಯ ದೇವಾಡಿಗ, ಸದಾಶಿವ ಶೆಟ್ಟಿ ಶಂಕರ ನಾರಾಯಣ, ನಾಗಪ್ಪ ಕೊಠಾರಿ, ಸುಧೀಶ್ ಕುಮಾರ್ ಶೆಟ್ಟಿ ಗುಲ್ವಾಡಿ, ಆನಂದ ಬಿಲ್ಲವ, ಶೇಖರ್ ಪೂಜಾರಿ, ಜಗದೀಶ್ ದೇವಾಡಿಗ, ಹರೀಶ್ ಕೊಡಪಾಡಿ, ರೋಶನ್ ಕುಮಾರ್ ಶೆಟ್ಟಿ, ಅಬ್ದುಲ್ ಮುನಾಫ್, ನೌಷಾದ್, ಯಾಸೀನ್, ಪ್ರಶಾಂತ್ ಪೂಜಾರಿ ಕರ್ಕಿ, ಗೋವಿಂದ ಶೆಟ್ಟಿ, ಜುಡಿತಾ ಮೆಂಡೊನ್ಸಾ, ಚಂದ್ರಮತಿ ಹೆಗ್ಡೆ, ಸತೀಶ್ ಶೆಟ್ಟಿ ಹಕ್ಲಾಡಿ, ಸತೀಶ್ ಶೆಟ್ಟಿ ಅಲೂರು, ಬಾಲಚಂದ್ರ ಕುಲಾಲ್, ಮಂಜುನಾಥ ಕುಲಾಲ್, ಸದಾನಂದ ಭಂಡಾರಿ, ಸುಧಾಕರ ಶೆಟ್ಟಿ ಉಳ್ಳೂರು, ಹರ್ಷ, ಯೂತ್ ಕಾಂಗ್ರೆಸ್ನ ಸುಕೇತ್ ಕುಲಾಲ್, ಫಝಲ್ ಕರ್ಕುಂಜೆ, ಅರಾಟೆ ಚಂದ್ರ ಪೂಜಾರಿ ಮೊದಲಾದವರಿದ್ದರು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಸನ್ನ ಕುಮಾರ್ ಶೆಟ್ಟಿ ಕೆರಾಡಿ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor