ಬಿಗಿ ಭದ್ರತೆಯಲ್ಲಿ ತಾಯಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ಭೂಗತ ಪಾತಕಿ ರವಿ ಪೂಜಾರಿ
ಉಡುಪಿ : ನ್ಯಾಯಾಲಯದ ಅನುಮತಿಯಂತೆ ಬೆಂಗಳೂರಿನ ಜೈಲಿನಲ್ಲಿರುವ ಭೂಗತ ಪಾತಕಿ ರವಿ ಪೂಜಾರಿ ಶನಿವಾರ ಮಲ್ಪೆಯ ನೆರ್ಗಿಗೆ ಆಗಮಿಸಿ ತನ್ನ ತಾಯಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿರುವ ಬಗ್ಗೆ ವರದಿಯಾಗಿದೆ.
ರವಿ ಪೂಜಾರಿ ತಾಯಿ ಸುಶೀಲ ಪೂಜಾರ್ತಿ(86) ನ.12ರಂದು ರಾತ್ರಿ ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾಗಿದ್ದರು. ಇವರಿಗೆ ಐವರು ಮಕ್ಕಳಿದ್ದು, ಇಬ್ಬರು ಹೆಣ್ಣು ಮಕ್ಕಳು ಹಾಗೂ ರವಿ ಪೂಜಾರಿ ಸೇರಿದಂತೆ ಮೂವರು ಗಂಡು ಮಕ್ಕಳಿದ್ದಾರೆ.
ತಾಯಿ ಅಂತ್ಯಕ್ರಿಯೆ ಪಾಲ್ಗೊಳ್ಳಲು ಅನುಮತಿ ಕೋರಿ ರವಿ ಪೂಜಾರಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ ರವಿ ಪೂಜಾರಿಗೆ ತನ್ನ ತಾಯಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಅನುಮತಿ ನೀಡಿ ಆದೇಶಿಸಿತ್ತು. ಅದರಂತೆ ಪೊಲೀಸರು ಬಿಗಿ ಭದ್ರತೆಯಲ್ಲಿ ರವಿ ಪೂಜಾರಿಯನ್ನು ಇಂದು ಬೆಳಗ್ಗೆ ಮಲ್ಪೆಗೆ ಕರೆ ತಂದರು.
ತನ್ನ ತಾಯಿಯ ಪಾರ್ಥಿವ ಶರೀರದ ಮುಂದೆ ಕಣ್ಣೀರಿಟ್ಟ ರವಿ ಪೂಜಾರಿ, ಬಳಿಕ ಮಲ್ಪೆ ರುದ್ರಭೂಮಿಯಲ್ಲಿ ನಡೆದ ಅಂತ್ಯಕ್ರಿಯೆ ಹಾಗೂ ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಂಡರು. ಸಂಜೆ ವೇಳೆ ಅವರನ್ನು ಬಿಗಿ ಪೊಲೀಸ್ ಭದ್ರತೆಯಲ್ಲಿ ವಾಪಾಸ್ಸು ಬೆಂಗಳೂರು ಜೈಲಿಗೆ ಕರೆದುಕೊಂಡು ಹೋಗಲಾಯಿತು. ಈ ಸಂದರ್ಭದಲ್ಲಿ ಬೆಂಗಳೂರಿನ ಬಂಧಿಖಾನೆ ಇಲಾಖೆಯ ವತಿಯಿಂದ ಭದ್ರತಾ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ಹೆಚ್ಚುವರಿ ಯಾಗಿ ಉಡುಪಿ ಜಿಲ್ಲಾ ಪೊಲೀಸರಿಂದ ಸ್ಥಳೀಯವಾಗಿಯೂ ಭದ್ರತೆ ಒದಗಿಸಲಾಗಿತ್ತು.
ಭೂಗತನಾಗಿದ್ದ ರವಿ ಪೂಜಾರಿಯನ್ನು 2019ರ ಜ.19ರಂದು ಪೊಲೀಸರು ಪಶ್ಚಿಮ ಆಫ್ರಿಕಾದ ಸೆನೆಗಲ್ ಬಂಧಿಸಿದ್ದರು. ರವಿ ಪೂಜಾರಿ ವಿರುದ್ಧ ಉಡುಪಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಯಲ್ಲಿ ಒಟ್ಟು 10 ಪ್ರಕರಣಗಳು ದಾಖಲಾಗಿವೆ. ಈತನ ವಿರುದ್ಧ 2006ರಲ್ಲಿ ಮೊದಲ ಪ್ರಕರಣವು ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಕಾರ್ಕಳ, ಬ್ರಹ್ಮಾವರ, ಉಡುಪಿ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಬಹುತೇಕ ಬೆದರಿಕೆ ಹಾಗೂ ಹಫ್ತಾ ವಸೂಲಿಗೆ ಸಂಬಂಧಿಸಿದ ಪ್ರಕರಣಗಳಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.