ಮಲ್ಯರಬೆಟ್ಟು ಅಂಗನವಾಡಿ ಕೇಂದ್ರ ತೆರವಿಗೆ ಗ್ರಾಮಸ್ಥರ ವಿರೋಧ
ಕುಂದಾಪುರ, ನ.14: ಗಂಗೊಳ್ಳಿ ಚರ್ಚ್ ರಸ್ತೆಯ ಸಂತ ಜೋಸೆಫರ ಹಿರಿಯ ಪ್ರಾಥಮಿಕ ಶಾಲೆಯ ವಠಾರದಲ್ಲಿ ಕಳೆದ 10 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಮಲ್ಯರಬೆಟ್ಟು ಅಂಗನವಾಡಿ ಕೇಂದ್ರವನ್ನು ಬೇರೆ ಬೇರೆ ಕಾರಣ ನೀಡಿ ಅಂಗನವಾಡಿ ಕಟ್ಟಡ ಬಿಟ್ಟು ಕೊಡುವಂತೆ ಹೇಳುತ್ತಿರುವುದು ಸರಿಯಲ್ಲ. ಅಂಗನವಾಡಿ ಕಟ್ಟಡ ನಿರ್ಮಿಸಲು ಬದಲಿ ವ್ಯವಸ್ಥೆ ಆಗುವವರೆಗೆ ಈಗ ಇರುವ ಕಟ್ಟಡವನ್ನು ತೆರವುಗೊಳಿಸುವ ಪ್ರಶ್ನೆಯೇ ಇಲ್ಲ ಎಂದು ಗಂಗೊಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ರಾಮಪ್ಪ ಖಾರ್ವಿ ಎಚ್ಚರಿಸಿದರು.
ಮಲ್ಯರಬೆಟ್ಟು ಅಂಗನವಾಡಿ ಕೇಂದ್ರವನ್ನು ತೆರವುಗೊಳಿಸುವಂತೆ ಶಾಲಾ ಆಡಳಿತ ಮಂಡಳಿ ನೀಡುತ್ತಿರುವ ತೊಂದರೆ ಗಳನ್ನು ಖಂಡಿಸಿ ಮಲ್ಯರಬೆಟ್ಟು ಅಂಗನವಾಡಿ ವಠಾರದಲ್ಲಿ ಶುಕ್ರವಾರ ಸಂಜೆ ಜರಗಿದ ಪಾಲಕರ ಹಾಗೂ ಸ್ಥಳೀಯ ಗ್ರಾಮಸ್ಥರ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ಸರಕಾರ ಹಾಗೂ ಜನಪ್ರತಿನಿಧಿಗಳ ಅನುದಾನದಿಂದ ನಿರ್ಮಾಣ ಗೊಂಡಿರುವ ಶಾಲಾ ಕಟ್ಟಡದಲ್ಲಿ ನಡೆಯುತ್ತಿರುವ ಅಂಗನವಾಡಿಯನ್ನು ಈ ಶಾಲೆಯ ವಠಾರದಿಂದ ತೆರವುಗೊಳಿಸುವ ಸಂಬಂಧಪಟ್ಟ ಶಾಲಾ ಆಡಳಿತ ಮಂಡಳಿ ನೀಡುತ್ತಿರುವ ತೊಂದರೆಗಳು ಖಂಡನೀಯ. ಅಂಗನವಾಡಿ ಮಕ್ಕಳ ಆರೋಗ್ಯ ಹಾಗೂ ರಕ್ಷಣೆ ಬಗ್ಗೆ ಯಾವುದೇ ಹೋರಾಟಕ್ಕೂ ಸಿದ್ಧ ಎಂದರು.
ಮಲ್ಯರಬೆಟ್ಟು ಅಂಗನವಾಡಿ ಕೇಂದ್ರವನ್ನು ಸ್ಥಳಾಂತರಿಸಲು ಬದಲಿ ವ್ಯವಸ್ಥೆ ಆಗುವವರೆಗೆ ಹಾಲಿ ಕಟ್ಟಡದಲ್ಲೇ ಕಾರ್ಯಾಚರಿಸಬೇಕು. ಕಟ್ಟಡವನ್ನು ತೆರವುಗೊಳಿಸುವ ಸಂಬಂಧ ಶಾಲಾ ಆಡಳಿತ ಮಂಡಳಿ ನೀಡುತ್ತಿರುವ ತೊಂದರೆಗಳ ಬಗ್ಗೆ ತಹಶೀಲ್ದಾರ್, ಸಂಬಂಧಪಟ್ಟ ಇಲಾಖೆ ಹಾಗೂ ಪೊಲೀಸ್ ಇಲಾಖೆ ಲಿಖಿತ ದೂರು ನೀಡಲು ಮತ್ತು ಅಂಗನವಾಡಿ ಕೇಂದ್ರವನ್ನು ಉಳಿಸಿಕೊಳ್ಳಲು ಒಗ್ಗಟ್ಟಿನ ಹೋರಾಟ ನಡೆಸಲು ಹಾಗೂ ಅಂಗನವಾಡಿ ಕೇಂದ್ರಕ್ಕೆ ಸೂಕ್ತ ನಿವೇಶನ ಹುಡುಕಲು ಸಭೆಯಲ್ಲಿ ನಿರ್ಣಯಕೈಗೊಳ್ಳಲಾಯಿತು.
ಗಂಗೊಳ್ಳಿ ಗ್ರಾಪಂ ಅಧ್ಯಕ್ಷೆ ಜಯಂತಿ ಖಾರ್ವಿ, ಉಪಾಧ್ಯಕ್ಷ ತಬ್ರೇಜ್, ಸದಸ್ಯರಾದ ಜಮೀಲಾ, ಸಮೀರ್, ಪಿಡಿಒ ರವಿ, ಗ್ರಾಮ ಲೆಕ್ಕಾಧಿಕಾರಿ ಶಿವರಾಯ, ಅಂಗನವಾಡಿ ಮೇಲ್ವಿಚಾರಕಿ ರೇಖಾ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಜಹೀರ್ ಅಹಮ್ಮದ್, ಗ್ರಾಪಂ. ಮಾಜಿ ಸದಸ್ಯರಾದ ಬಿ.ಲಕ್ಷ್ಮೀಕಾಂತ ಮಡಿವಾಳ, ಬಿ.ರಾಘವೇಂದ್ರ ಪೈ, ಬಾಲಕಾಸ ಸಮಿತಿ ಅಧ್ಯಕ್ಷೆ ಅನಿತಾ ಖಾರ್ವಿ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಘದ ಜಿಲ್ಲಾಧ್ಯಕ್ಷೆ ಫಿಲೋಮಿನಾ ಫೆರ್ನಾಂಡಿಸ್, ಮಕ್ಕಳ ಪೋಷಕರು, ಗ್ರಾಮಸ್ಥರು ಉಪಸ್ಥಿತರಿದ್ದರು.