ಉಡುಪಿ, ನ.14: ಕಟ್ಟಡ ನಿರ್ಮಾಣ ವಲಯದಲ್ಲಿ ಕೆಲಸಮಾಡುತ್ತಿರುವ ಲಕ್ಷಾಂತರ ಕಾರ್ಮಿಕರು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನ.16ರಂದು ದೇಶಾದ್ಯಂತ ಪ್ರತಿಭಟನೆಗಳನ್ನು ನಡೆಸಲು ನಿರ್ಧರಿಸಿದ್ದಾರೆ.

ಕನ್ಸಸ್ಟ್ರಕ್ಷನ್ ವರ್ಕರ್ಸ್ ಫೆಡರೇಶನ್ ಆಫ್ ಇಂಡಿಯಾ(ಸಿಡಬ್ಲ್ಯುಎಫ್‌ಐ) ನೇತೃತ್ವದಲ್ಲಿ ಕೇಂದ್ರ ಸರಕಾರ ಜಾರಿಗೊಳಿ ಸುತ್ತಿರುವ ನಾಲ್ಕು ಲೇಬರ್ ಕೋಡ್ ಗಳ ಅಡಿಯಲ್ಲಿ ರದ್ದಾಗಿರುವ 1996ರ ಕಟ್ಟಡ ಕಾರ್ಮಿಕ ಕಾನೂನು ಮತ್ತು ಸೆಸ್ ಕಾನೂನುಗಳು ಪುನರ್ ಸ್ಥಾಪನೆಗೊಳ್ಳಬೇಕು. ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಗಳನ್ನು ಅವುಗಳಲ್ಲಿ ಶೇಖರಣೆಗೊಂಡಿರುವ ಸಾವಿರಾರು ಕೋಟಿ ನಿಧಿಯನ್ನು ಸಂರಕ್ಷಿಸಬೇಕೆಂದು ಆಗ್ರಹಿಸಿ ಈ ಹೋರಾಟಕ್ಕೆ ಕರೆ ನೀಡಲಾಗಿದೆ.

ರಾಜ್ಯದಲ್ಲಿ ಬಾಕಿ ಉಳಿಸಿಕೊಂಡಿರುವ ಶೈಕ್ಷಣಿಕ ಸಹಾಯಧನ ಪಾವತಿ ಮಾಡಬೇಕು ಮತ್ತು ಸಹಾಯಧನ ಮೊತ್ತ ಹೆಚ್ಚಿಸಬೇಕು. ಮಾಸಿಕ ಪಿಂಚಣಿಯನ್ನು 5000ರೂ.ಗೆ ಹೆಚ್ಚಿಸಿ ’ವೈದ್ಯಕೀಯ ತಪಾಸಣೆ’ ಹೆಸರಲ್ಲಿ ನಡೆದಿರುವ ಭ್ರಷ್ಟಾಚಾರ ತನಿಖೆಯಾಗಲಿ ದುಬಾರಿ ವೆಚ್ಚದ ಕೌಶಲ್ಯ ಕೇಂದ್ರ ಮತ್ತು ವಸತಿ ಶಾಲೆ ನಿರ್ಮಾಣ ಯೋಜನೆ ಕೈಬಿಡ ಬೇಕು. ಕಲ್ಯಾಣ ಯೋಜನೆಗಳ ಜಾರಿಗಾಗಿ ಮಾಡಿರುವ ಗುತ್ತಿಗೆ ಆಧಾರಿತ ಖಾಸಗಿ ಏಜೆನ್ಸಿ ಕಾರ್ಮಿಕ ಸೇವಾ ಕೇಂದ್ರಗಳನ್ನು ನಡೆಸುವುದನ್ನು ರದ್ದು ಮಾಡಬೇಕು ಎಂದು ಸಂಘಟನೆ ಆಗ್ರಹಿಸಿದೆ.

ಈ ಬಗ್ಗೆ ಉಡುಪಿ ಜಿಲ್ಲೆಯಲ್ಲಿಯೂ ಹೋರಾಟ ನಡೆಯಲಿದ್ದು ಮರಳು ಹಾಗೂ 9/11 ಸೇರಿದಂತೆ ಸ್ಥಳೀಯ ಸಮಸ್ಯೆ ಒಳಗೊಂಡು ಜಿಲ್ಲಾಧಿಕಾರಿ ಕಚೇರಿ ಎದುರು ನ.16ರಂದು ಬೆಳಿಗ್ಗೆ 10.30 ಗಂಟೆಗೆ ಪ್ರತಿಭಟನೆ ಹಮ್ಮಿಕೊಳ್ಳಲಾ ಗಿದೆ. ಇದರಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳ ಕಟ್ಟಡ ಕಾರ್ಮಿಕರು ಭಾಗವಹಿಸಲಿದ್ದಾರೆ ಎಂದು ಉಡುಪಿ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘಗಳ ಸಮನ್ವಯ ಸಮಿತಿ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor