ಉಡುಪಿ, ನ.14: ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್‌ನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಸಾನ್ವಿಯ ಬಡ ಕುಟುಂಬಕ್ಕೆ ಬ್ರಹ್ಮಾವರ ತಾಲೂಕಿನ ಸಾಸ್ತಾನದ ಗುಂಡ್ಮಿಯಲ್ಲಿ, ಅಮೇರಿಕಾದ ಡಾ.ದಿನೇಶ್ ರಾವ್ ಪೇಜಾವರ ಮತ್ತು ವೃಂದಾ ರಾವ್ ಪೇಜಾವರ ದಂಪತಿ ತಮ್ಮ ಪುತ್ರ ನವೀನ್ ಪೇಜಾವರ್ ಸ್ಮರಣೆಯಲ್ಲಿ ನಿರ್ಮಿಸಿದ ನೂತನ ಮನೆ ‘ನವೀನ್ ನಿಲಯ’ದ ಹಸ್ತಾಂತರ ಇತ್ತೀಚೆಗೆ ನಡೆಯಿತು.

ಜ್ಯೋತಿ ಬೆಳಗಿಸುವ ಮೂಲಕ ಮನೆಯನ್ನು ಉದ್ಘಾಟಿಸಿ ಮನೆಯನ್ನು ಸಾನ್ವಿ ಹಾಗೂ ತಾಯಿ ಯಶೋಧ ರವಿ ಪೂಜಾರಿ ಅವರಿಗೆ ಹಸ್ತಾಂತರಿಸಿ ಮಾತನಾಡಿದ ಡಾ.ದಿನೇಶ್ ರಾವ್, ದಾನ ಮಾಡುವುದು ಸುಲಭ, ಆದರೆ ಅದನ್ನು ಯೋಜಿಸಿ ಸತ್ಪಾತ್ರರಿಗೆ ತಲುಪುವಂತೆ ವ್ಯವಸ್ಥೆ ಮಾಡುವುದು ಸುಲಭವಲ್ಲ. ಅಂತಹ ಕಷ್ಟಕರ ಕೆಲಸವನ್ನು ಯಕ್ಷಗಾನ ಕಲಾರಂಗ ಬಹಳ ಸಮರ್ಪಕವಾಗಿ ನಿರ್ವಹಿಸಿದೆ ಎಂದು ಶ್ಲಾಘಿಸಿದರು.

ಅಧ್ಯಕ್ಷತೆ ವಹಿಸಿದ್ದ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಯಕ್ಷಗಾನ ಕಲಾರಂಗ ಯಾರ ಶಿಫಾರಸು ಮತ್ತು ಪ್ರಭಾವಕ್ಕೆ ಒಳಗಾಗದೆ ಫಲಾನುಭವಿಗಳನ್ನು ಆಯ್ಕೆ ಮಾಡಿ ಅವರಿಗೆ ಬೇಕಾದ ಅಗತ್ಯಗಳನ್ನು ಪೂರೈಸುತ್ತಾ ಸಮಾಜಮುಖಿಯಾಗಿ ಕೆಲಸ ಮಾಡುವ ಉತ್ತಮ ಸಂಸ್ಥೆ ಎಂದರು.

ಅತಿಥಿಗಳಾಗಿ ಉಪಸ್ಥಿತರಿದ್ದ ಪಣಂಬೂರು ವಾಸುದೇವ ಐತಾಳ್ ಹಾಗೂ ಸುಜ್ಞಾನ ಎಜುಕೇಶನಲ್ ಟ್ರಸ್ಟ್‌ನ ಅಧ್ಯಕ್ಷ ರಮೇಶ್ ಶೆಟ್ಟಿ, ವಿದ್ಯಾಪೋಷಕ್ ಪ್ರತಿಭಾವಂತ ಬಡವಿದ್ಯಾರ್ಥಿಗಳಿಗೆ ಆಸರೆಯಾಗಿದೆ ಎಂದರು. ಕಾರ್ಯಕ್ರಮ ದಲ್ಲಿ ಮಾಲತಿ ಕರ್ನಲ್ ರಾಮಚಂದ್ರ ರಾವ್, ಸಂಜಯ ರಾವ್, ಹೇಮಾ ರಾವ್, ಶ್ಯಾಮಲಾ ಪ್ರಸಾದ್, ಡಾ. ಅಶೋಕ್ ವಾಸನ್, ನಿರ್ಮಲಾ ವಾಸನ್, ಪೃಥ್ವಿರಾಜ್, ವಿಮಲಾ ರಮೇಶ್, ಸಹನಾ ಭಾರದ್ವಾಜ್ ಉಪಸ್ಥಿತರಿದ್ದರು.

ಸಂಸ್ಥೆಯ ಕೋಶಾಧಿಕಾರಿ ಪ್ರೊ. ಕೆ. ಸದಾಶಿವ ರಾವ್, ಸದಸ್ಯರಾದ ಯು. ವಿಶ್ವನಾಥ್ ಶೆಣೈ, ಭುವನಪ್ರಸಾದ್ ಹೆಗ್ಡೆ, ಯು. ಅನಂತರಾಜ್ ಉಪಾಧ್ಯ, ಮರ್ಣೆ ಉಮೇಶ್ ಭಟ್, ಅಜಿತ್ ಅಂಬಲಪಾಡಿ ಡಾ. ಪ್ರತಿಮಾ ಜೆ. ಆಚಾರ್ಯ, ಜಯರಾಮ್ ಪಡಿಯಾರ್ ಭಾಗವಹಿಸಿದ್ದರು.

ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿ, ನಾರಾಯಣ ಎಂ.ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು.



 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor