ರಾಷ್ಟ್ರೀಯ ಗ್ರಂಥಾಲಯ ಸಪ್ತಾಹಕ್ಕೆ ಚಾಲನೆ: ಸದಸ್ಯತ್ವ ನೋಂದಣಿ ಅಭಿಯಾನ
ಉಡುಪಿ : ನಗರದ ಕವಿ ಮುದ್ದಣ ಮಾರ್ಗದಲ್ಲಿರುವ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಗರ ಕೇಂದ್ರದ ಶಾಖಾ ಗ್ರಂಥಾಲಯದ ವತಿಯಿಂದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಸಮಾಜಸೇವಕ ನಿತ್ಯಾನಂದ ಒಳಕಾಡು ಮಾತನಾಡಿ, ಇಂದಿನ ಕಾಲಘಟ್ಟದಲ್ಲಿ ಗ್ರಂಥಾಲಯಗಳು ಸಾಕಷ್ಟು ಅಗತ್ಯ ಇದ್ದು, ಓದುವ ಹವ್ಯಾಸ ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು. ಜ್ಞಾನ ಸಂಪಾದನೆಗೆ ಗ್ರಂಥಾಲಯಗಳು ಮಹತ್ವದ ಕೇಂದ್ರಗಳಾಗಿವೆ ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಯುವ ಸಾಹಿತಿ ತಾರಾನಾಥ್ ಮೇಸ್ತ ಶಿರೂರು ಮಾತನಾಡಿ, ಪುಸ್ತಕ ಓದುವ ಹವ್ಯಾಸವು ಮನುಷ್ಯನ ಜ್ಞಾನವಿಸ್ತಾರಕ್ಕೆ ಮಾತ್ರವಲ್ಲದೆ, ಚಿಂತನಾ ಶಕ್ತಿ, ಭಾಷಾ ಕೌಶಲ ಹಾಗೂ ವ್ಯಕ್ತಿತ್ವ ವಿಕಸನಕ್ಕೂ ಸಹಕಾರಿಯಾಗಿದೆ. ಮೊಬೈಲ್ ಮತ್ತು ಅಂತರ್ಜಾಲದ ಬಳಕೆ ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ಯುವಜನತೆ ಪುಸ್ತಕ ಓದುವ ಅಭಿರುಚಿಯನ್ನು ಬೆಳೆಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ಗ್ರಂಥಾಲಯ ಸಹಾಯಕಿ ಸುನೀತಾ ಬಿ.ಎಸ್. ಪ್ರಾಸ್ತಾವಿಕವಾಗಿ ಮಾತನಾಡಿ, ನ.14ರಿಂದ 20ರವರೆಗೆ ನಡೆಯ ಲಿರುವ ಪುಸ್ತಕ ಪ್ರದರ್ಶನ ಹಾಗೂ ಗ್ರಂಥಾಲಯ ಸದಸ್ಯತ್ವ ನೋಂದಣಿ ಅಭಿಯಾನದ ಕುರಿತು ಮಾಹಿತಿ ನೀಡಿ ದರು. ಈ ಸಂದರ್ಭದಲ್ಲಿ ಭಾರತದ ಗ್ರಂಥಾಲಯ ಚಳವಳಿಯ ಪಿತಾಮಹ, ಪದ್ಮಶ್ರೀ ಪುರಸ್ಕೃತ ಡಾ.ಎಸ್.ಆರ್. ರಂಗನಾಥನ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.
ಗ್ರಂಥಾಲಯ ಸಿಬ್ಬಂದಿ ಆಶಾ, ಸಾಧನಾ ಅಂಚನ್, ವಿದ್ಯಾವಾಣಿ, ಕಾಲೇಜು ವಿದ್ಯಾರ್ಥಿಗಳು ಹಾಗೂ ಓದುಗರು ಉಪಸ್ಥಿತರಿದ್ದರು. ಗ್ರಂಥಾಲಯ ಸಹಾಯಕಿ ಸುನೀತಾ ಬಿ.ಎಸ್. ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.