ಉಡುಪಿ, ನ.21: ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಉಡುಪಿ ಪತ್ರಿಕಾ ಭವನ ಸಮಿತಿಯ ಸಹಯೋಗದಲ್ಲಿ ಮೈಸೂರಿನ ಗಣೇಶ್ ಅಮೀನಗಡ ಬರೆದ ‘ಪತ್ರಕರ್ತನ ಅನುಭವಗಳು’ ಕೃತಿ ಬಿಡುಗಡೆ ಕಾರ್ಯಕ್ರಮ ಶನಿವಾರ ಉಡುಪಿ ಪತ್ರಿಕಾ ಭವನದಲ್ಲಿ ಜರಗಿತು.

ಕೃತಿ ಬಿಡುಗಡೆ ಮಾಡಿದ ಹಿರಿಯ ಪತ್ರಕರ್ತ ಡಾ.ರಾಘವ ನಂಬಿಯಾರ್ ಮಾತನಾಡಿ, ಯಾವುದೇ ಬರವಣಿಗೆಯಲ್ಲಿ ಬಳಸುವ ಭಾಷೆ, ಕೌತುಕವಿದ್ದರೆ ಓದುಗರನ್ನು ಸೆಳೆಯಲು, ಮನಮುಟ್ಟಲು ಸಾಧ್ಯ. ನಾನಾ ವಿಷಯಗಳ ವಿಸ್ತಾರದ ಅವಲೋಕನ ಮಾಡಬೇಕು. ಗಾಂಧಿ, ಅಂಬೇಡ್ಕರ್, ನೆಹರೂ ಕಾಪಾಡಿಕೊಂಡು ಬಂದ ಪತ್ರಿಕಾ ಧರ್ಮ ದುಡ್ಡು ಹಾಕಿ ದುಡ್ಡು ತೆಗೆವ ಬಂಡವಾಳದ ದಂಧೆಯಾಗುತ್ತಿದೆ. ಜನ ಸಾಮಾನ್ಯರ ಧೋರಣೆ ಕೂಡ ಬದಲಾಗುತ್ತಿದೆ. ವ್ಯಾವಹಾರಿಕ ಸತ್ಯ ಹೇಳುವವರ ನಡುವೆ ನೈಜ ಸತ್ಯ ಹೇಳುವವರು ಬೇಕು ಎಂದರು.

ನಾವು ಗಳಿಸಿದ ಜ್ಞಾನ ವ್ಯಕ್ತಿ, ಸಮಾಜದ ಒಳಿತಿಗೆ ವಿನಿಯೋಗವಾಗಬೇಕು. ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗದ ಬಳಿಕ ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾದ ಪತ್ರಿಕಾ ರಂಗದಲ್ಲಿ ಸಮಾನತೆ, ಸಂಸ್ಕೃತಿಯ ಉನ್ನತಿ, ವಿಸ್ತರಣೆಗೆ ಕೊಡುಗೆ ನೀಡಬೇಕು. ಉತ್ಪಾದನೆಯ ಪಾಲು-ಲಾಭ ದುಡಿವ ವರ್ಗಕ್ಕೂ ಸಿಗಬೇಕು ಎಂದರು.

ಕೃತಿಕಾರ ಗಣೇಶ್ ಅಮೀನಗಡ ಕೃತಿ ಕುರಿತು ಮಾತನಾಡಿದರು. ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ವಹಿಸಿದ್ದರು. ವಾರ್ತಾಧಿಕಾರಿ ಮಂಜುನಾಥ್, ರಾಜ್ಯ ಸಮಿತಿ ಸದಸ್ಯ ಆಸ್ಟ್ರೋ ಮೋಹನ್, ಸಂಘದ ಕೋಶಾಕಾರಿ ಹರೀಶ್ ಕುಂದರ್ ಉಪಸ್ಥಿತರಿದ್ದರು. ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಸ್ವಾಗತಿಸಿದರು. ರಹೀಂ ಉಜಿರೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor