ಕುಂದಾಪುರ, ನ.21: ಗ್ರಾಮ ಪಂಚಾಯತ್ ದಾರಿದೀಪ ದುರಸ್ಥಿ, ಅಧಿಕಾರಿ ಗೈರು ಹಾಜರಿ, ಕುಡಿಯುವ ನೀರಿನ ಸಮಸ್ಯೆ, ಅನುದಾನ ಕೊರತೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಗುಜ್ಜಾಡಿ ಗ್ರಾಮ ಪಂಚಾಯತ್ ಸಭಾಭವನ ದಲ್ಲಿ ಗುರುವಾರ ನಡೆದ ಗುಜ್ಜಾಡಿ ಗ್ರಾಮ ಪಂಚಾಯತ್‌ನ 2026-27ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮ ಸಭೆಯಲ್ಲಿ ಚರ್ಚೆ, ಗದ್ದಲ ಆಕ್ರೋಶ ವ್ಯಕ್ತವಾಯಿತು.

ಗ್ರಾಮ ಪಂಚಾಯತ್ ಸಿಬ್ಬಂದಿಯೊಬ್ಬರು ವಿದ್ಯುತ್ ಕಂಬ ಹತ್ತಿ ದಾರಿ ದೀಪ ದುರಸ್ಥಿ ಮಾಡುತ್ತಿದ್ದು, ಇದಕ್ಕೆ ಗ್ರಾಪಂ ಅಥವಾ ಮೆಸ್ಕಾಂ ಅನುಮತಿ ನೀಡಿದೆಯೇ?, ಏನಾದರೂ ಅವಘಡ ನಡೆದರೆ ಯಾರು ಹೊಣೆ ಎಂದು ದಾಮೋದರ ಮೊಗವೀರ, ಅಕ್ಷಯ್ ಮತ್ತು ಮಂಜುನಾಥ ಪ್ರಶ್ನಿಸಿ ಗ್ರಾಪಂ. ಅಧಿಕಾರಿಗಳನ್ನು ತರಾಟೆಗೆ ತೆಗದುಕೊಂಡರು. ದಾರಿದೀಪ ದುರಸ್ಥಿಗೆ ಟೆಂಡರ್ ಕರೆಯಲಾಗುತ್ತಿದ್ದು, ಈ ವರ್ಷ ಯಾಕೆ ಟೆಂಡರ್ ಕರೆದಿಲ್ಲ. ಗ್ರಾಪಂ ಸಿಬ್ಬಂದಿ ಮೂಲಕ ದಾರಿದೀಪ ದುರಸ್ಥಿ ಮಾಡುವುದು ಸರಿಯಲ್ಲ ಎಂದರು.

ಇದಕ್ಕೆ ಉತ್ತರಿಸಿದ ಪಿಡಿಒ ಶೋಭಾ ಮತ್ತು ಆಡಳಿತ ಅಧಿಕಾರಿ ಸಂಜೀವ ಅರಕೇರಿ, ಗ್ರಾಪಂ ಸಿಬ್ಬಂದಿಗಳು ವಿದ್ಯುತ್ ಕಂಬ ಹತ್ತುವಂತಿಲ್ಲ ಎಂದು ಸ್ಪಷ್ಟವಾಗಿ ಸಿಬ್ಬಂದಿಗಳಿಗೆ ಸೂಚಿಸಲಾಗಿದೆ. ಗ್ರಾಪಂ.ನಲ್ಲಿ ಅನುದಾನ ಇಲ್ಲದೆ ಇರುವುದರಿಂದ ಹೊಸ ದಾರಿದೀಪ ಅಳವಡಿಕೆ ಸಾಧ್ಯವಿಲ್ಲ. ಈಗ ಅಳವಡಿಸಿರುವ ದಾರಿದೀಪಗಳನ್ನು ದುರಸ್ಥಿ ಮಾಡಲಾಗುತ್ತಿದೆ. ಅನುದಾನದ ಕೊರತೆ ಇರುವುದರಿಂದ ಟೆಂಡರ್ ಕರೆದಿಲ್ಲ ಎಂದು ಹೇಳಿದರು.

ಗ್ರಾಮದ ಮಡಿ-ಬೆಣ್ಗೇರೆ ಎಂಬಲ್ಲಿ ಕಳೆದ ಅನೇಕ ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿದೆ. ಗ್ರಾಮದ ಬೇರೆ ಕಡೆಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದ್ದರೂ ಮಡಿ-ಬೆಣ್ಗೆರೆ ಪ್ರದೇಶಕ್ಕೆ ಮಾತ್ರ ನೀರು ಸರಬರಾಜು ಮಾಡುತ್ತಿಲ್ಲ. ಜನರು ನೀರಿಗೋಸ್ಕರ 2 ಕಿ.ಮೀ. ದೂರ ನಡೆದುಕೊಂಡು ಹೋಗ ಬೇಕಿದೆ. ಸ್ಥಳಿಯಾಡಳಿತ ಈ ಪ್ರದೇಶವನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡುತ್ತಿದೆ ಎಂದು ದೇವದಾಸ ಖಾರ್ವಿ ಆಕ್ರೋಶ ವ್ಯಕ್ತಪಡಿಸಿದರು.

ಇದೇ ವಿಚಾರದಲ್ಲಿ ಸ್ಥಳೀಯ ಮಹಿಳೆಯರು ಗ್ರಾಪಂ ಅಧಿಕಾರಿಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡು ಬಾಟಲಿಯಲ್ಲಿ ತಂದ ಕಲುಷಿತ ನೀರಿನ್ನು ತೋರಿಸಿ ಆಕ್ರೋಶ ವ್ಯಕ್ತಪಡಿಸಿದರು. ಮಡಿ-ಬೆಣ್ಗೇರೆ ಪ್ರದೇಶಕ್ಕೆ ಹೊಸ ಪೈಪ್‌ಲೈನ್ ಮಾಡಲಾಗಿದ್ದರೂ ನೀರು ಹೋಗುತ್ತಿಲ್ಲ. ಪಂಚಾಯತ್ ರಾಜ್ ಇಂಜಿನಿಯರ್ ಅವರನ್ನು ಸ್ಥಳಕ್ಕೆ ಕರೆದುಕೊಂಡು ಬಂದು ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಲಾಗುವುದು ಎಂದು ಪಿಡಿಒ ಶೋಭಾ ಹೇಳಿದರು.

ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಸಭೆಗೆ ಗೈರು ಹಾಜರಾಗಿರುವು ದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅಕ್ಷಯ್, ಮುಂದಿನ ಸಭೆಗೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಕಡ್ಡಾಯವಾಗಿ ಹಾಜರಾಗುವಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾುಸಿದರು. ಎಸ್‌ಸಿ ಎಸ್‌ಟಿ ಗ್ರಾಮಸಭೆಗೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಬರುವಂತೆ ಕ್ರಮಕೈಗೊಳ್ಳಲಾಗುವುದು ಎಂದು ಪಿಡಿಒ ಭರವಸೆ ನೀಡಿದರು.

ಗುಜ್ಜಾಡಿ ಗ್ರಾಪಂ. ಆಡಳಿತಾಧಿಕಾರಿ, ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಸಂಜೀವ ಅರಕೇರಿ ಅಧ್ಯಕ್ಷತೆ ವಸಿದ್ದರು. ಬೈಂದೂರು ತಾಪಂ. ಕಾರ್ಯನಿರ್ವಹಣಾಧಿಕಾರಿ ನಾಗಶಯನ ನೋಡೆಲ್ ಅಧಿಕಾರಿಯಾಗಿದ್ದರು.

ಬೈಂದೂರು ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ ನಾಯ್ಕ್, ಮೆಸ್ಕಾಂ ಗಂಗೊಳ್ಳಿ ಶಾಖೆಯ ಜೆಇ ದಿನೇಶ ಶೆಟ್ಟಿ, ಗುಜ್ಜಾಡಿ ಪಶು ಚಿಕಿತ್ಸಾಲಯದ ವೈದ್ಯಾಧಿಕಾರಿ ಡಾ.ಅರುಣ್ ಕೆ.ಪಿ., ಗಂಗೊಳ್ಳಿ ಪೊಲೀಸ್ ಠಾಣೆಯ ಎಎಸ್ಸೈ ನವೀನ್, ಗಂಗೊಳ್ಳಿ ವಲಯ ಅಂಗನವಾಡಿ ಮೇಲ್ವಿಚಾರಕಿ ರೇಖಾ ಕೆ., ಆರೋಗ್ಯ ಇಲಾಖೆಯ ಹುಲಿಯಪ್ಪ ಗೌಡ, ಗ್ರಾಮ ಆಡಳಿತ ಅಧಿಕಾರಿ ಸೋಮಪ್ಪ, ಕೆಸಿಡಿಸಿ ಅಧಿಕಾರಿ ಗಣಪತಿ ಭಟ್, ಗ್ರಾಪಂ ಪಿಡಿಒ ಶೋಭಾ, ಕಾರ್ಯದರ್ಶಿ ಶಕುಂತಲಾ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor