ಉಡುಪಿ, ನ.22: ಉಡುಪಿ ಕಥೊಲಿಕ್ ಧರ್ಮಪ್ರಾಂತ್ಯದ ವಾರ್ಷಿಕ ಪವಿತ್ರ ಪರಮ ಪ್ರಸಾದದೊಂದಿಗೆ ಮೆರವಣಿಗೆ ಹಾಗೂ ಕ್ರಿಸ್ತರಾಜರ ಮಹೋತ್ಸವ ಭಕ್ತಿ ಪೂರಕವಾಗಿ ರವಿವಾರ ನಡೆಯಿತು.

ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್‌ನಲ್ಲಿ ವಿಶೇಷ ಬಲಿಪೂಜೆಯ ನೇತೃತ್ವವನ್ನು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ರಾದ ಅತಿ ವಂ.ಡಾ.ಲೆಸ್ಲಿ ಕ್ಲಿಫರ್ಡ್ ಡಿಸೋಜ ವಹಿಸಿದ್ದರು. ಬಲಿಪೂಜೆಯ ಬಳಿಕ ಮಿಲಾಗ್ರಿಸ್ ಕ್ಯಾಥೆಡ್ರಲ್‌ನಿಂದ ಆರಂಭಿಸಿ ಸಂತೆಕಟ್ಟೆ ಮೌಂಟ್ ರೋಸರಿ ಚರ್ಚಿನವರೆಗೆ ಪವಿತ್ರ ಪರಮ ಪ್ರಸಾದವನ್ನು ಮೆರವಣಿಗೆ ಮೂಲಕ ಕೊಂಡೊಯ್ದು ಸಾರ್ವಜನಿಕ ಗೌರವ ಸಲ್ಲಿಸಲಾಯಿತು.

ಮೂರು ಸಾವಿರಕ್ಕೂ ಅಧಿಕ ಕ್ರೆಸ್ತ ವಿಶ್ವಾಸಿಗಳು ಸೇರಿದಂತೆ 70ಕ್ಕೂ ಅಧಿಕ ಧರ್ಮಗುರುಗಳು, 200ಕ್ಕೂ ಅಧಿಕ ಧರ್ಮಭಗಿನಿಯರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ವಿಶೇಷ ಅಲಂಕೃತ ವಾಹನದಲ್ಲಿ ಪವಿತ್ರ ಪರಮ ಪ್ರಸಾದ ವನ್ನು ಹಿಡಿದುಕೊಂಡು ಧರ್ಮಾಧ್ಯಕ್ಷ ಅತಿ ವಂ.ಡಾ.ಲೆಸ್ಲಿ ಕ್ಲಿಫರ್ಡ್ ಡಿಸೋಜಾ ಸಾಗಿದರು.

ಬಳಿಕ ಪ್ರವಚನ ನೀಡಿದ ಧರ್ಮಾಧ್ಯಕ್ಷ ಅತಿ ವಂ.ಡಾ.ಲೆಸ್ಲಿ ಕ್ಲಿಫರ್ಡ್ ಡಿಸೋಜ, ಹಸಿದವರಿಗೆ ಅನ್ನ ನೀಡುವುದು, ನೊಂದವರಿಗೆ ಸಾಂತ್ವನ ಹೇಳುವುದು ಕೇವಲ ಸಹಾಯವಲ್ಲ, ಅದು ನೇರವಾಗಿ ದೇವರಿಗೆ ಸಲ್ಲಿಸುವ ಪೂಜೆಯಾ ಗಿದೆ. ಕಷ್ಟದಲ್ಲಿರುವವರಿಗೆ ದಯೆ ತೋರದಿದ್ದರೆ ನಾವು ಮಾಡುವ ಯಾವುದೇ ಪೂಜೆ, ಪುನಸ್ಕಾರಗಳಿಗೆ ಅರ್ಥವಿರು ವುದಿಲ್ಲ. ಅಸಹಾಯಕರ ಕಣ್ಣೀರು ಒರೆಸುವುದರಿಂದ ಸಿಗುವ ಆತ್ಮತೃಪ್ತಿ ಮತ್ತು ದೇವರ ಆಶೀರ್ವಾದ ಎಂದಿಗೂ ಶಾಶ್ವತವಾಗಿರುತ್ತದೆ ಎಂದರು.

ಪ್ರೀತಿ ಮತ್ತು ಸೇವೆ ಕ್ರೆಸ್ತ ಧರ್ಮದ ಮೂಲ ತತ್ತ್ವವಾಗಿದ್ದು, ಅದನ್ನು ನಮ್ಮ ನೆರೆಹೊರೆಯವರಲ್ಲಿ ತೋರ್ಪಡಿಸಲು ಹಿಂಜರಿಯಬಾರದು. ನಮ್ಮ ಜೀವನದಲ್ಲಿ ಕ್ಷಮೆ ಪ್ರಿತಿ, ಸೇವೆಯ ಮೂಲಕ ದೈವ ಸಾಮ್ರಾಜ್ಯವನ್ನು ಕಟ್ಟುವಲ್ಲಿ ಪಣತೊಡುವಂತಾಗಬೇಕು ಎಂದು ಧರ್ಮಾಧ್ಯಕ್ಷರು ಕರೆ ನೀಡಿದರು.

ಪರಮಪ್ರಸಾದ ಮೆರವಣಿಗೆ ಸಂತೆಕಟ್ಟೆ ಮೌಂಟ್ ರೋಸರಿ ಚರ್ಚಿಗೆ ತಲುಪಿದ ಬಳಿಕ ಪವಿತ್ರ ಬೈಬಲ್ ವಾಚನದ ಮೂಲಕ ಪ್ರವಚನ ನೀಡಿದ ಪಾಂಬೂರು ಹೋಲಿ ಕ್ರಾಸ್ ಚರ್ಚಿನ ಧರ್ಮಗುರು ವಂ.ಡಾ.ರೋಶನ್ ಡಿಸೋಜ, ನಮ್ಮ ಜೀವನದಲ್ಲಿ ಕ್ರಿಸ್ತರಂತೆ ಬಾಳಿದರೆ ನಾವು ಅರ್ಪಿಸುವ ಪರಮಪ್ರಸಾದ ಬಲಿಪೂಜೆಗೆ ನಿಜವಾದ ಅರ್ಥ ಬರುತ್ತದೆ. ಇತರರಿಗೆ ಸಹಾಯ ಮಾಡಿ ಅವರ ಅಗತ್ಯಗಳಿಗೆ ಸ್ಪಂದಿಸಿ, ಇತರರೊಡನೆ ಶಾಂತಿ ಸಮಾಧಾನದಿಂದ ಜೀವಿಸಿ ಪರರನ್ನು ಕ್ಷಮಿಸಿದಾಗ ದೇವರ ಕೃಪಾವರಗಳು ನಮ್ಮ ಮೇಲೆ ಇರಲು ಸಾಧ್ಯವಿದೆ ಎಂದರು.

ಉಡುಪಿ ಧರ್ಮಪ್ರಾಂತ್ಯದ ವಿಕಾರ್ ಜನರಲ್ ಹಾಗೂ ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ ರೆರ್ಕ್ಟ ಮೊನ್ಸಿಂಜ್ಞೊರ್ ಫ್ರಾನ್ಸಿಸ್ ಲೂವಿಸ್, ಸಹಾಯಕ ಧರ್ಮಗುರು ವಂ.ಕೆವಿನ್ ಡಿಸೋಜ, ಕುಲಪತಿ ವಂ.ಸ್ಟೀವನ್ ಡಿಸೋಜ, ಶಿರ್ವ, ಕಾರ್ಕಳ, ಉಡುಪಿ ವಲಯಗಳ ಪ್ರಧಾನ ಧರ್ಮಗುರು ಗಳಾದ ವಂ.ಚಾರ್ಲ್ಸ್ ಮಿನೇಜಸ್, ವಂ.ಆಲ್ಬನ್ ಡಿಸೋಜ, ವಂ.ಡೆನಿಸ್ ಡೆಸಾ, ಮೌಂಟ್ ರೋಸರಿ ಚರ್ಚಿನ ಧರ್ಮಗುರು ವಂ.ರೋಕ್ ಡೇಸಾ, ಸಹಾಯಕ ಧರ್ಮಗುರು ವಂ.ರೋಹನ್ ಮಸ್ಕರೇನ್ಹಸ್, ಧಾರ್ಮಿಕ ಸಭೆಗಳ ಎಪಿಸ್ಕೋಪಲ್ ವಿಕಾರ್ ವಂ.ಜ್ಯೋ ತಾವ್ರೊ ಉಪಸ್ಥಿತರಿದ್ದರು.

ವಂ.ವಿಲ್ಸನ್ ಡಿಸೋಜ ಧಾರ್ಮಿಕ ವಿಧಿಯ ಕಾರ್ಯಕ್ರಮ ನಿರೂಪಿಸಿದರು. ವಂ.ಶೋನ್ ಸಾವಿಯೊ ಅಂದ್ರಾದೆ ಜಪಸರ ಪ್ರಾರ್ಥನೆ ನೆರವೇರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor