ಮಹಾನ್ ನಾಯಕರ ದೇಶ ಕಟ್ಟುವ ಕೆಲಸವನ್ನೇ ತಿರಸ್ಕರಿಸುವುದು ದೇಶದ ಬೆಳವಣಿಗೆಗೆ ಮಾರಕ: ಡಾ.ಎಕ್ಕಾರು
ಉಡುಪಿ, ನ.22: ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಭಾರತದಲ್ಲಿ ಶ್ರೀಮಂತರು ಮಾತ್ರ ಶಿಕ್ಷಣ ಪಡೆದುಕೊಳ್ಳು ತ್ತಿರುವ ಪರಿಸ್ಥಿತಿ ಇತ್ತು. ಬಡವರು, ಹೆಣ್ಣುಮಕ್ಕಳು ದಲಿತರ ಪಾಲಿಗೆ ಶಿಕ್ಷಣ ಗಗನ ಕುಸುಮವಾಗಿತ್ತು. ಇದನ್ನು ಮನಗೊಂಡು ಪ್ರಧಾನಿ ನೆಹರೂ 1950ರಲ್ಲಿ ಸಾರ್ವತ್ರಿಕ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೆ ತಂದರು. ಇದರಿಂದ ಇಂದು ದೇಶದಲ್ಲಿ ಯಾವುದೇ ಬೇಧ ಇಲ್ಲದೆ 75 ಪ್ರತಿಶತಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆಯುವಂತಾ ಗಿದೆ ಎಂದು ಡಾ.ಕೆ.ಶಿವರಾಮ ಕಾರಂತ ಟ್ರಸ್ಟ್ ಅಧ್ಯಕ್ಷ ಹಾಗೂ ಚಿಂತಕ ಡಾ.ಗಣನಾಥ ಶೆಟ್ಡಿ ಎಕ್ಕಾರು ಹೇಳಿದ್ದಾರೆ.
ಉದ್ಯಾವರ ಫ್ರೆಂಡ್ಸ್ ಸರ್ಕಲ್ ಆಶ್ರಯದಲ್ಲಿ ನೆಹರು ಜಯಂತಿ - ಮಕ್ಕಳ ದಿನಾಚರಣೆಯ ಪ್ರಯುಕ್ತ ಉದ್ಯಾವರ ಸೈಂಟ್ ಫ್ರಾನ್ಸಿಸ್ ಕ್ಸೇವಿಯರ್ ಆಂಗ್ಲ ಮಾಧ್ಯಮ ಶಾಲಾ ಸಭಾಂಗಣದಲ್ಲಿ ಜರಗಿದ ಗ್ರಾಮದ ಪ್ರೌಢ ಮತ್ತು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ನೆಹರು ಚಿತ್ರ ಬಿಡಿಸುವ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡುತಿದ್ದರು.
ದೇಶ ಕಟ್ಟುವ ಕೆಲಸ ಮಾಡಿದ ಮಹಾನ್ ನಾಯಕರನ್ನೇ ಹೀಗಳೆಯು ವಂತಹ ಪರಿಪಾಠ ಇಂದು ಬೆಳೆಯುತ್ತಿದೆ. ಗಾಂಧಿ, ಅಂಬೇಡ್ಕರ್, ನೆಹರು ಮೊದಲಾದ ದೇಶ ಕಟ್ಟಿದ ಮಹಾನ್ ನಾಯಕರನ್ನು ವಿಮರ್ಶಿಸುವುದರಲ್ಲಿ ಅಭ್ಯಂತ ರವಿಲ್ಲ. ಆದರೆ ಅವರ ದೇಶ ಕಟ್ಟುವ ಕೆಲಸವನ್ನೇ ತಿರಸ್ಕರಿಸುವುದು ಈ ದೇಶದ ಬೆಳವಣಿಗೆಗೆ ಮಾರಕ. ಈ ಬಗ್ಗೆ ವಿದ್ಯಾರ್ಥಿಗಳು ಎಚ್ಚರ ವಹಿಸಬೇಕು ಎಂದರು.
ವಿದ್ಯಾರ್ಥಿಗಳು ನಮ್ಮ ದೇಶ ಕಟ್ಟಿದ ನಾಯಕರ ಬಗ್ಗೆ ಒಂದು ತೀರ್ಮಾನಕ್ಕೆ ಬರಬೇಕಾದರೆ ಯಾರು ಯಾರೋ ಹೇಳಿದ ಹೇಳಿಕೆಗಳು, ಸೋಶಿಯಲ್ ಮೀಡಿಯಾದಲ್ಲಿ ಬರುವ ಒಂದು ವಾಕ್ಯದ ಹೇಳಿಕೆಗಳಿಂದ ಅಲ್ಲ. ಅಂತಹ ನಾಯಕರ ಜೀವನ ,ಅವರು ಬದುಕಿದ ರೀತಿ, ಕೆಲಸಗಳನ್ನು ಓದುವ ಮೂಲಕ ಅವರ ವ್ಯಕ್ತಿತ್ವವನ್ನು ನಾವು ನಿರ್ಧರಿ ಸಬೇಕು. ಆಗ ನಿಮಗೆ ಅವರ ನೈಜ್ಯ ಚಿತ್ರಣದ ಅರಿವಾಗುತ್ತದೆ ಎಂದು ಅವರು ತಿಳಿಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಗೌರವಾಧ್ಯಕ್ಷ ಮತ್ತು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ಉದ್ಯಾವರ ನಾಗೇಶ್ ಕುಮಾರ್ ಮಾತನಾಡಿ, ದೇಶದ ನಿರ್ಮಾತೃಗಳನ್ನು ಅವಮಾನ ಮಾಡುವ ಟ್ರೆಂಡ್ ಸುಮಾರು 10-12 ವರ್ಷಗಳಿಂದ ವ್ಯಾಪಕವಾಗಿ ಹರಡುತ್ತಿದೆ. ಇದಕ್ಕೆ ಮುಖ್ಯ ಕಾರಣ ಸೋಶಿಯಲ್ ಮೀಡಿಯಾ. ಈ ಬಗ್ಗೆ ವಿದ್ಯಾರ್ಥಿಗಳು ಸತ್ಯಾಸತ್ಯತೆಯನ್ನು ಮನಗಂಡು ನಿರ್ಧಾರಕ್ಕೆ ಬರಬೇಕು. ಹಾಗಾಗಿ ವಿದ್ಯಾರ್ಥಿಗಳೇ ನಮ್ಮ ನಾಯಕರ ಬಗ್ಗೆ ನಿಜ ಚರಿತ್ರೆ ತಿಳಿಯುವುದು ಈ ಕಾಲಘಟ್ಟದಲ್ಲಿ ಅತ್ಯಂತ ಮಹತ್ತರವಾದುದು ಎಂದರು.
ಕಾರ್ಯಕ್ರಮವನ್ನು ಶಾಲಾ ಮುಖ್ಯೋಪಾಧ್ಯಾಯಿನಿ ಪುಷ್ಪಾ ತಾವ್ರೋ ಉದ್ಘಾಟಿಸಿದರು. ತೀರ್ಪುಗಾರರಾದ ಕಲಾವಿದ ವಿಶ್ವೇಶ್ವರ ಪರ್ಕಳ ಮಾತನಾಡಿದರು. ಸಂಸ್ಥೆಯ ನಿರ್ದೇಶಕಿ ಚಂದ್ರಾವತಿ ಎಸ್. ಭಂಡಾರಿ, ಕೋಶಾಧಿಕಾರಿ ಸತೀಶ್ ಡಿ.ಸಾಲಿಯಾನ್, ಉದ್ಯಾವರ ಗ್ರಾಪಂ ಮಾಜಿ ಅಧ್ಯಕ್ಷೆ ಸುಗಂಧಿ ಶೇಖರ್, ಮಾಜಿ ಉಪಾಧ್ಯಕ್ಷ ರಿಯಾಜ್ ಪಳ್ಳಿ, ಸಂಸ್ಥೆಯ ಕಾರ್ಯದರ್ಶಿ ಆಶಾವಾಸು, ಸದಸ್ಯರಾದ ಆನ್ಸರ್ ಸತ್ತಾರ್, ಮಹಮ್ಮದ್ ಆಲಿ, ಅಜಿತ್ ಮೆಂಡನ್ ಸೋಮಶೇಖರ ಸುರತ್ಕಲ್ ಮೊದಲಾದವರು ಹಾಜರಿದ್ದರು.
ಸಂಸ್ಥೆಯ ಅಧ್ಯಕ್ಷರಾದ ಗಿರೀಶ್ ಗುಡ್ಡೆಯಂಗಡಿ ಸ್ವಾಗತಿಸಿದರು. ಕಾರ್ಯಕ್ರಮದ ಸಂಚಾಲಕರಾದ ತಿಲಕರಾಜ್ ಸಾಲಿಯಾನ್ ಸ್ಪರ್ಧಾ ವಿಜೇತರ ಹೆಸರನ್ನು ವಾಚಿಸಿದರು. ಪ್ರಧಾನ ಕಾರ್ಯದರ್ಶಿ ಸುಹೇಲ್ ರಹಮತುಲ್ಲ ವಂದಿಸಿದರು. ಮಾಜಿ ಅಧ್ಯಕ್ಷ ಅನೂಪ್ ಕುಮಾರ್ ಕಾರ್ಯ ಕ್ರಮ ನಿರ್ವಹಿಸಿದರು.