ಮಣಿಪಾಲ, ನ.22: ಮಣಿಪಾಲ್ ಅಕಾಡೆಮಿ ಆಫ್ ಹೆಯರ್ ಎಜುಕೇಶನ್(ಮಾಹೆ)ನ 34ನೇ ಘಟಿಕೋತ್ಸವದ ನಾಲ್ಕನೇ ದಿನವಾದ ರವಿವಾರ ಮಣಿಪಾಲದಲ್ಲಿ ಜರಗಿದ ಸಮಾರಂಭದಲ್ಲಿ ಒಟ್ಟು 42 ಮಂದಿ ಪಿಎಚ್‌ಡಿ ಪದವೀಧರರೂ ಸೇರಿದಂತೆ 1,439 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

ಮಾಹೆ ಹಾಗೂ ಕೆನಡಾದ ನ್ಯೂಬ್ರನ್ಸ್‌ವಿಕ್ ವಿಶ್ವವಿದ್ಯಾಲಯ ಜೊತೆಗೂಡಿ ರೂಪಿಸಿರುವ ನರ್ಸಿಂಗ್ ದ್ವಿ ಪದವಿ (ಡ್ಯೂಯಲ್ ಡಿಗ್ರಿ) ಮೊದಲ ಬ್ಯಾಚಿನ 25 ವಿದ್ಯಾರ್ಥಿಗಳಿಗೆ ಪದವಿಯನ್ನು ನೀಡಲಾಯಿತು. ಮುಖ್ಯ ಅತಿಥಿಯಾಗಿ ಕೆನಡಾ ವಿವಿ ಅಧ್ಯಕ್ಷ ಮತ್ತು ಕುಲಪತಿ ಡಾ.ಕ್ಯಾಥಿ ವಿಲ್ಸನ್ ಮಾತನಾಡಿ, ಪದವೀಧರರು ಅವಕಾಶಗಳಿಗೆ, ಪ್ರಯತ್ನಗಳಿಗೆ ಮಿತಿಗಳನ್ನು ಹಾಕಿ ಕೊಳ್ಳಬಾರದು. ಹೊಸ ಅವಕಾಶಗಳನ್ನು ಸ್ವಾಗತಿಸಬೇಕು, ಕಲಿಕೆಗೆ ಸದಾ ಮುಕ್ತರಾಗಿರಬೇಕು ಎಂದು ಹೇಳಿದರು.

ವೃತ್ತಿಜೀವನದ ಯಶಸ್ಸು ಮಾತ್ರ ಶಿಕ್ಷಣದ ಉದ್ದೇಶವಲ್ಲ. ಯಶಸ್ಸನ್ನು ಮೀರಿದ ಹೊಣೆಗಾರಿಕೆಯನ್ನು ಅದು ಹೊಂದಿದೆ. ಜಗತ್ತಿಗೆ ನಿಮ್ಮ ಪ್ರತಿಭೆಯ ಅಗತ್ಯವಿದೆ. ಅದಕ್ಕಿಂತ ಹೆಚ್ಚಾಗಿ, ನಿಮ್ಮ ಕಾಳಜಿ, ನಾಯಕತ್ವದ ಅಗತ್ಯವಿದೆ’ ಎಂದು ಅವರು ಅಭಿಪ್ರಾಯ ಪಟ್ಟರು.

ಮಾಹೆ ಟ್ರಸ್ಟ್‌ನ ಟ್ರಸ್ಟಿ ವಸಂತಿ ಆರ್.ಪೈ, ಸಹಕುಲಾಧಿಪತಿ ಡಾ.ಎಚ್. ಎಸ್.ಬಲ್ಲಾಳ್, ಕುಲಪತಿ ಡಾ.ಶರತ್ ಕೆ.ರಾವ್, ಸಹಕುಲಪತಿಗಳು ಮತ್ತು ಮಾಹೆ ವಿವಿಧ ಘಟಕಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

ಮಣಿಪಾಲ್ ಸ್ಕೂಲ್ ಆಫ್ ಲೈಫ್ ಸೈನ್ಸಸ್‌ನ(ಎಂಎಸ್‌ಎಲ್‌ಎಸ್) ಪ್ರತಿಭಾವಂತ ವಿದ್ಯಾರ್ಥಿ ಕೆದಿಲಾಯ ಶ್ರೀಕೃಷ್ಣ ಎಚ್.ದಾಮೋದರ್ ಅವರಿಗೆ ಪ್ರತಿಷ್ಠಿತ ಡಾ.ಟಿಎಂಎ ಪೈ ಚಿನ್ನದ ಪದಕ 2026 ಅನ್ನು ಪ್ರದಾನ ಮಾಡಲಾಯಿತು.

ನಾಲ್ಕು ದಿನಗಳ ಘಟಿಕೋತ್ಸವದಲ್ಲಿ ವಿವಿಧ ಅಧ್ಯಯನ, ಸಂಶೋಧನ ಕ್ಷೇತ್ರಗಳ, ಜ್ಞಾನಶಿಸ್ತುಗಳ 7,694 ಮಂದಿ ಪದವೀಧರರು ಪ್ರಮಾಣಪತ್ರ ಸ್ವೀಕರಿಸಿದ್ದು, ನ.28 ಮತ್ತು 29ರಂದು ಮಾಹೆಯ ಬೆಂಗಳೂರು ಕ್ಯಾಂಪಸ್‌ನಲ್ಲಿ ನಡೆಯಲಿರುವ ಪದವಿ ಪ್ರದಾನ ಸಮಾರಂಭದಲ್ಲಿ 2,583 ವಿದ್ಯಾರ್ಥಿಗಳು ಪದವಿ ಪ್ರಮಾಣ ಪತ್ರ ಸ್ವೀಕರಿಸಲಿರುವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor