ಕಾಪು ಬೀಚ್‌ನಲ್ಲಿ ಇಬ್ಬರು ಸಮುದ್ರಪಾಲು; ಮುಂದುವರಿದ ಶೋಧ ಕಾರ್ಯ
ಕಾಪು, ನ.22: ಕಾಪು ಬೀಚ್‌ನಲ್ಲಿ ಇಂದು ಸಂಜೆ ನೀರಿಗೆ ಇಳಿದು ಈಜುತ್ತಿದ್ದ ಮೂವರ ಪೈಕಿ ಬಾಲಕ ಸಹಿತ ಇಬ್ಬರು ಸಮುದ್ರ ಪಾಲಾಗಿದ್ದು, ಓರ್ವನನ್ನು ರಕ್ಷಿಸಿರುವ ಬಗ್ಗೆ ವರದಿಯಾಗಿದೆ.
ಸಮುದ್ರ ಪಾಲಾದವರನ್ನು ಶಿವಮೊಗ್ಗ ಜಿಲ್ಲೆಯ ಮಾವಿನಕೊಪ್ಪ ಹೊಸನಗರ ನಿವಾಸಿ ಅಲ್ತಾಫ್ ಎಂಬವರ ಮಗ ಸಮೀರ್(20) ಹಾಗೂ ದಾವಣಗೆರೆಯ ಅಹಮ್ಮದಿ ನಗರದ ನಿವಾಸಿ ಜಿಯಾವುಲ್ಲಾ ಎಂಬವರ ಮಲ್ಲಿಕ್ ರಿಹಾನ್(15) ಎಂದು ಗುರುತಿಸಲಾಗಿದೆ. ರಕ್ಷಿಸಲ್ಪಟ್ಟ ಮುಹಮ್ಮದ್ ಇಸಾಕ್(15) ಎಂಬಾತನನ್ನು ಚಿಕಿತ್ಸೆಗಾಗಿ ಉಡುಪಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಜಿಯಾವುಲ್ಲಾ ಅವರ ಹಿರಿಯ ಮಗ ಮುಹಮ್ಮದ್ ಜಾಫರ್(20) ಎಂಬವರು ಕುಂದಾಪುರ ತಾಲೂಕಿನ ಮೂಡ್ಲಕಟ್ಟೆ ಇಂಜಿನಿಯರ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಕಲಿಯುತ್ತಿದ್ದು, ಆ ಹಿನ್ನೆಲೆಯಲ್ಲಿ ಝಿಯಾವುಲ್ಲಾ ಕುಟುಂಬದ 12 ಮಂದಿ ಉಡುಪಿಗೆ ತಿರುಗಲು ಆಗಮಿಸಿ ದರು. ಇವರೊಂದಿಗೆ ಜಾಫರ್ ಅವರ ಗೆಳೆಯ ಸಮೀರ್‌ನನ್ನು ಕೂಡ ಕರೆದುಕೊಂಡು ಬಂದಿದ್ದರು ಎನ್ನಲಾಗಿದೆ.
ಹೀಗೆ ಇಡೀ ಕುಟುಂಬದವರು ವಿಹಾರಕ್ಕೆಂದು ಕಾಪು ಬೀಚ್‌ಗೆ ಬಂದಿದ್ದು, ಇವರಲ್ಲಿ ಐವರು ಯುವಕರು ಸಮುದ್ರದ ನೀರಿಗೆ ಇಳಿದು ಈಜುತ್ತಿದ್ದರೆ, ಮಹಿಳೆಯರು ಸಹಿತ ಉಳಿದವರು ತೀರದಲ್ಲಿ ಕುಳಿತಿದ್ದರು. ಸಮುದ್ರದಲ್ಲಿ ಈಜುತ್ತಿದ್ದ ಯುವಕರಿಗೆ ಅಲ್ಲಿನ ಲೈಫ್‌ಗಾರ್ಡ್ ಲೈಫ್ಗಾರ್ಡ್ ಸಿಬ್ಬಂದಿಗಳು ಅಪಾಯದ ಬಗ್ಗೆ ಎಚ್ಚರಿಕೆ ನೀಡಿದ್ದರೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಯುವಕರು ಲೈಫ್‌ಗಾರ್ಡ್‌ಗಳ ಕಣ್ಣು ತಪ್ಪಿಸಿ ಕೆಲವೇ ಮೀಟರ್ ದೂರಕ್ಕೆ ತೆರಳಿ ಸಮುದ್ರದಲ್ಲಿ ಈಜಾಡುತಿದ್ದರು ಎಂದು ತಿಳಿದುಬಂದಿದೆ.
ಐವರ ಪೈಕಿ ಸಮೀರ್, ರಿಯಾನ್ ಹಾಗೂ ಇಸಾಕ್ ಸಮುದ್ರದ ಅಲೆಗೆ ಸಿಲುಕಿ ಕೊಚ್ಚಿಕೊಂಡು ಹೋಗಿ ಕಣ್ಮರೆ ಯಾದರು. ಅಲ್ಲಿದ್ದ ಜನರ ಬೊಬ್ಬೆ ಕೇಳಿ ತೆರಳಿದ ಬೋಟ್ ಹಾಗೂ ಲೈಫ್‌ಗಾರ್ಡ್ ಸಿಬ್ಬಂದಿಗಳು ತಕ್ಷಣವೇ ನೀರಿಗೆ ಧುಮುಕಿ ಇಸಾಕ್ ಸಹಿತ ಮೂವರನ್ನು ಸುರಕ್ಷಿತವಾಗಿ ರಕ್ಷಿಸಿದರು. ಬಳಿಕ ಅವರಿಗೆ ಸಿಪಿಆರ್ ಸೇರಿದಂತೆ ಪ್ರಾಥಮಿಕ ಚಿಕಿತ್ಸೆ ನೀಡಿ, ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆ ಮಾಡಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಉಳಿದಂತೆ ಸಮೀರ್ ಹಾಗೂ ರಿಯಾನ್ ನಾಪತ್ತೆಯಾಗಿದ್ದು, ಇವರ ಹುಡುಕಾಟಕ್ಕಾಗಿ ಸ್ಥಳಕ್ಕೆ ಮುಳುಗು ತಜ್ಞ ಈಶ್ವರ ಮಲ್ಪೆ ತಂಡ ಆಗಮಿಸಿತು. ನಾಪತ್ತೆಯಾದವರ ಹುಡುಕುವ ಕಾರ್ಯ ನಡೆಯುತ್ತಿದ್ದು, ಈವರೆಗೆ ಯಾವುದೇ ಸುಳಿವು ದೊರೆತಿಲ್ಲ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಕಾಪು ಪೊಲೀಸರು ಆಗಮಿಸಿದ್ದು, ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.