ಕುಂದಾಪುರ: 38 ವರ್ಷಗಳ ಹಿಂದೆ ಹುಟ್ಟಿದ ಈ ಸಂಸ್ಥೆಯು ಶಿಕ್ಷಣ, ಆರೋಗ್ಯ, ಸಾಮಾಜಿಕ ಸೇವಾ ಕಾರ್ಯಗಳಿಗೆ ಕೊಡುಗೆ ನೀಡುವ ಮೂಲಕ ಸಮಾಜದಲ್ಲಿನ ಜನರಿಗೆ ಸಹಕಾರ ನೀಡುತ್ತಿದೆ. ವಿದ್ಯಾರ್ಥಿಗಳ ಭವ್ಯ ಭವಿಷ್ಯ ರೂಪಿಸುವ ಶಿಲ್ಪಿಗಳಾದ ಶಿಕ್ಷಕರನ್ನು ಇಂದು ಗೌರವಿಸುವುದು ನಮ್ಮ ಕರ್ತವ್ಯ ಆಗಿದೆ ಎಂದು ಜಮೀಯತುಲ್ ಫಲಾಹ್ (ರಿ) ದ.ಕ. ಮತ್ತು ಉಡುಪಿ ಜಿಲ್ಲೆ ಅಧ್ಯಕ್ಷ ಅಶ್ಫಾಕ್ ಅಹಮ್ಮದ್ ಹೇಳಿದರು.

ಜಮೀಯತುಲ್ ಫಲಾಹ್ ಕುಂದಾಪುರ ತಾಲೂಕು ಘಟಕದ ವತಿಯಿಂದ ನ.22 ರವಿವಾರ ಕುಂದಾಪುರದ ಯೂಸುಫಿಯ ಸಭಾಂಗಣದಲ್ಲಿ ನಡೆದ 2026- 27 ನೇ ಸಾಲಿನ ಮಕ್ಕಳ ಸ್ನೇಹಿ ಶಿಕ್ಷಕ ಪ್ರಶಸ್ತಿ ಪ್ರದಾನ, ವಿದ್ಯಾರ್ಥಿ ವೇತನ ವಿತರಣೆ, ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ, ಕ್ರೀಡಾ ಕ್ಷೇತ್ರದ ಸಾಧಕರಿಗೆ ಅಭಿನಂದನಾ ಸಮಾರಂಭ ವನ್ನು ಉದ್ಘಾಟಿಸಿ ಮಾತನಾಡಿದರು.

37 ವರ್ಷದ ಹಿಂದೆ ದೇರಳಕಟ್ಟೆಯ ಕುಗ್ರಾಮದಲ್ಲಿ ಸರಕಾರಿ ಶಾಲೆಯನ್ನು ದತ್ತು ಪಡೆದು ಗ್ರೀನ್ ವ್ಯೂ ಕನ್ನಡ ಶಾಲೆಯನ್ನು ತೆರೆದಿದ್ದು 1 ರಿಂದ 12 ನೇ ತರಗತಿಯವರೆಗೆ ಉಚಿತ ಶಿಕ್ಷಣ ನೀಡುತ್ತಿದೆ. ಮುಂದೆ ಎಲ್.ಕೆ.ಜಿ., ಯು.ಕೆ.ಜಿ. ಜೊತೆಗೆ ಇಂಗ್ಲೀಷ್ ಮಾಧ್ಯಮ ಕಲಿಕೆಗೆ ಒತ್ತು ನೀಡಲಾಗುತ್ತದೆ. ಮಂಗಳೂರು ಕೇಂದ್ರ ಕಚೇರಿಯಲ್ಲಿ ಸುಳ್ಯದಿಂದ ಬೈಂದೂರುವರೆಗಿನ ಉನ್ನತ ವ್ಯಾಸಂಗ ಮಾಡುವ 200 ವಿದ್ಯಾರ್ಥಿಗಳ ಹಾಸ್ಟೆಲ್ ಮಿತದರದಲ್ಲಿ ಕಾರ್ಯಚರಿಸುತ್ತಿದೆ. ಬಲ್ಮಠದಲ್ಲಿ ಮುಂದಿನ ವರ್ಷ ಬಡ ವಿದ್ಯಾರ್ಥಿಗಳಿಗೆ ಮಹಿಳಾ ಹಾಸ್ಟೆಲ್ ತೆರೆಯಲಾಗುತ್ತದೆ. ಉಡುಪಿಯ ಪೇರಂಪಳ್ಳಿಯಲ್ಲಿ ಜಾಗ ಖರೀದಿಸಿದ್ದು ಬಾಲಕರ ಹಾಸ್ಟೆಲ್ ನಿರ್ಮಿಸಲಾಗುತ್ತದೆ. ಮೂಡಬಿದಿರೆಯ 6 ಎಕ್ರೆ ಜಾಗದಲ್ಲಿ ಗ್ರೀನ್ ವ್ಯೂ ಲಾ ಕಾಲೇಜು ಮಾಡುವ ಇರಾದೆಯಿದೆ ಎಂದರು.

ಉದ್ಯಮಿ, ಜಯರತ್ನಾ ಸೇವಾ ಟ್ರಸ್ಟ್‌ನ ದಿನೇಶ್ ಹೆಗ್ಡೆ ಮೊಳಹಳ್ಳಿ ಮಾತನಾಡಿ, ಅರ್ಜಿ ಸಲ್ಲಿಸಿ ಪ್ರಶಸ್ತಿ ಪಡೆಯುವ ಕಾಲದಲ್ಲಿ ಸಂಘಟನೆಯೊಂದು ಶಿಕ್ಷಕರ ಬದ್ಧತೆಯ ಕಾರ್ಯವನ್ನು ಗುತುತಿಸಿ ಗೌರವಿಸಿದ್ದು ಶ್ಲಾಘನೀಯನ ಕೆಲಸ. ಜಮೀಯತುಲ್ ಫಲಾಹ್ ಅವರ ಸೇವಾ ಕೈಂಕರ್ಯ, ದೂರದೃಷ್ಟಿ ಚಿಂತನೆಯು ಎಲ್ಲರಿಗೂ ಮಾದರಿಯಾಗಬೇಕು. ಸಾಧನೆ ಮಾಡುವವರನ್ನು ಗುತುತಿಸುವ ಮೂಲಕ ಇತರರ ಸಾಧನೆಗೆ ಪ್ರೇರಣೆಯಾಗಲಿದೆ ಎಂದರು.

ಕುಂದಾಪುರ ಕಲಾಕ್ಷೇತ್ರದ ಅಧ್ಯಕ್ಷ ಬಿ. ಕಿಶೋರ್ ಕುಮಾರ್ ಮಾತನಾಡಿ, ಪರಸ್ಪರ ಅನ್ಯೋನ್ಯತೆಯಿಂದ ಜಾತಿ-ಧರ್ಮಗಳ ಸಂಕೋಲೆಯಿಲ್ಲದೆ ಒಗ್ಗೂಡುತ್ತಿದ್ದ ಕಾಲವೊಂದಿತ್ತು. ಕ್ರಮೇಣ ಕೆಲವು ಹಿತಾಸಕ್ತಿಗಳಿಗೆ ಸಿಕ್ಕು ಮರೆಯಾದ ಕಾಲಘಟ್ಟದಲ್ಲಿ ಇಂತಹ ಕಾರ್ಯಕ್ರಮಗಳ ಮೂಲಕ ಸಹಬಾಳ್ವೆ ಶಿಕ್ಷಣ ಸಿಗುತ್ತದೆ. ಸಮಾಜದಲ್ಲಿ ಒಟ್ಟಾಗಿ ಬದುಕುವ ಸಾಮರಸ್ಯ ಸಾರುವ ಕಾರ್ಯಕ್ರಮ ಪ್ರಸ್ತುತ ಕಾಲಕ್ಕೆ ಅಗತ್ಯವಾಗಿದ್ದು ಮಾದರಿಯಾಗಿದೆ ಎಂದರು.

ಉಡುಪಿ ಜಿಲ್ಲಾ ಡಯಟ್ ಪ್ರಾಂಶುಪಾಲರಾದ ಡಾ. ಅಶೋಕ್ ಕಾಮತ್ ಮಾತನಾಡಿ, ಪ್ರಾಮಾಣಿಕತೆ ಹಾಗೂ ಬದ್ಧತೆಯಿಂದ ಕೆಲಸ ಮಾಡಿದ ಶಿಕ್ಷಕರನ್ನು ಗುರುತಿಸಿ ಗೌರವಿಸಿದಾಗ ಅವರಲ್ಲಿ ತಮ್ಮ ಕರ್ತವ್ಯದ ಬಗ್ಗೆ ಇನ್ನಷ್ಟು ಆಸಕ್ತಿ ಜೊತೆಗೆ ಆತ್ಮವಿಶ್ವಾಸ ಮೂಡಿಸದಂತಾಗುತ್ತದೆ. ವಿದ್ಯಾರ್ಥಿಗಳನ್ನು ಉತ್ತೇಜಿಸಿ ಅವರಿಂದ ಸಾಧನೆಯನ್ನು ನಿರೀಕ್ಷಿಸಬಹುದು ಎಂದರು.

ಹಝ್ರತ್ ಸುಲ್ತಾನ್ ಸಯ್ಯದ್ ಯೂಸುಫ್ ವಲಿಯುಲ್ಲಾಹಿ ದರ್ಗಾ ಶರೀಫ್ ಚಾರಿಟೇಬಲ್ ಟ್ರಸ್ಟ್ ಕುಂದಾಪುರದ ಅಧ್ಯಕ್ಷ ಖಾಸಿಂ ಕೋಯಾ, ಉದ್ಯಮಿ ಅಭಿನಂದನ್ ಶೆಟ್ಟಿ, ಎಸ್‌ಡಿಎಂಸಿ ಸಮನ್ವಯ ಕೇಂದ್ರ ವೇದಿಕೆ ಕುಂದಾಪುರ ತಾಲೂಕು ಘಟಕದ ಅಧ್ಯಕ್ಷ ಎಸ್.ವಿ. ನಾಗರಾಜ್, ನಮ್ಮ ನಾಡು ಒಕ್ಕೂಟದ ಕೇಂದ್ರ ಸಮಿತಿ ಉಪಾಧ್ಯಕ್ಷ ಹುಸೇನ್ ಹೈಕಾಡಿ, ಜಮೀಯತುಲ್ ಫಲಾಹ್ ಕುಂದಾಪುರ ಘಟಕದ ಉಪಾಧ್ಯಕ್ಷರಾದ ಅಬ್ದುಲ್ ಹಮೀದ್ ಗಂಗೊಳ್ಳಿ, ಹಂಝ ಹೆಮ್ಮಾಡಿ, ಕೋಶಾಧಿಕಾರಿ ಅಯೂಬ್ ಮಾಣಿಕೊಳಲು, ಬೈಂದೂರು ತಾಲೂಕು ಘಟಕದ ನಿಕಟಪೂರ್ವಾಧ್ಯಕ್ಷ ಮನ್ಸೂರ್ ಮರವಂತೆ, ಮುಸ್ಲೀಂ ವೆಲ್‌ಫೇರ್ ಅಸೋಸಿಯೇಶನ್ ಅಧ್ಯಕ್ಷ ಮುಸ್ತರ್ ಅಹಮ್ಮದ್ ಮೊದಲಾದವರಿದ್ದರು.

ಮೌಲಾನ ಅಯ್ಯೂಬ್ ಕೋಯಾ ಕಿರಾಅತ್ ಪಠಿಸಿದರು. ರಿಯಾಜ್ ಕೋಡಿ ಪರಿಚಯಿಸಿದರು. ಜಮೀಯತುಲ್ ಫಲಾಹ್ ಕುಂದಾಪುರ ತಾಲೂಕು ಘಟಕದ ಅಧ್ಯಕ್ಷ ಮುಜಾವರ್ ಅಬೂ ಮೊಹಮ್ಮದ್ ಪ್ರಸ್ತಾವಿಸಿ, ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸಲಾಂ ಚಿತ್ತೂರು ನಿರೂಪಿಸಿದರು.

'ಮಕ್ಕಳಸ್ನೇಹಿ ಶಿಕ್ಷಕ ಪ್ರಶಸ್ತಿ,' ಸಾಧಕರಿಗೆ ಸನ್ಮಾನ:-

ಕಂಬದಕೋಣೆ ಸರಕಾರಿ ಹಿ.ಪ್ರಾ. ಶಾಲೆ ಮುಖ್ಯೋಪಾಧ್ಯಾಯ ಮಹಾಬಲ ಕೆ. ಮರವಂತೆ, ಚಿತ್ತೂರಿನ ಪಿಎಂಶ್ರೀ ಸರಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ರಾಘವೇಂದ್ರ ಶೆಟ್ಟಿ, ಕೋಡಿ ಬ್ಯಾರಿಸ್ ಬಿಎಡ್ – ಡಿಎಡ್ ಕಾಲೇಜು ಪ್ರಾಂಶುಪಾಲೆ ಡಾ| ಫೀರ್ದೋಸ್, ಕಾಳಾವರ ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಮುಸರತ್ ಜಹಾಂನ್ ಅಕ್ಬರ್ ಎಂ., ಗಂಗೊಳ್ಳಿ ಸರಕಾರಿ ಉರ್ದು ಹಿ.ಪ್ರಾ. ಶಾಲೆಯ ಶಿಕ್ಷಕಿ ಹೇಮಾವತಿ ಅವರಿಗೆ ಮಕ್ಕಳ ಸ್ನೇಹಿ ಶಿಕ್ಷಕ ಪ್ರಶಸ್ತಿ ಪ್ರದಾನಿಸಲಾಯಿತು. ಅತ್ಲೇಟಿಕ್ಸ್ ನಲ್ಲಿ ರಾಷ್ಟ್ರಮಟ್ಟದಲ್ಲಿ ಸಾಧನೆಗೈದ ವಡೇರಹೋಬಳಿಯ ಪಿಎಂಶ್ರೀ ಸರಕಾರಿ ಪ್ರೌಢಶಾಲೆ ವಿದ್ಯಾರ್ಥಿ ವಿಠ್ಠಲ ಬಾಳಪ್ಪ ಮುನವಳ್ಳಿ, ಕ್ರೀಡಾ ಸಾಧಕ ಅಬ್ದುಲ್ ಅಝಾನ್ ಅವರನ್ನು ಅಭಿನಂದಿಸಲಾಯಿತು.

ಅಂಗನವಾಡಿ ಕಾರ್ಯಕರ್ತೆ ಸರಿತಾ, ಆಶಾ ಕಾರ್ಯಕರ್ತೆ ಮಾಲತಿಯವರನ್ನು ಗೌರವಿಸಲಾಯಿತು. ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ತಾಲೂಕಿಗೆ ಹೆಚ್ಚು ಅಂಕಗಳಿಸಿದ ನಾಲ್ವರು ವಿದ್ಯಾರ್ಥಿಗಳಿಗೆ ಸನ್ಮಾನ, 60 ಮಂದಿ ವಿದ್ಯಾರ್ಥಿಗಳಿಗೆ ಕಲಿಕಾ ಪ್ರೋತ್ಸಾಹಧನ ವಿತರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor