×
Ad

ಉಡುಪಿ ಜಿಲ್ಲೆಯ ಲಿಂಗಾನುಪಾತ 1000:966ಕ್ಕೆ ಇಳಿಕೆ: ಡಾ.ಪ್ರಶಾಂತ್ ಭಟ್

Update: 2025-02-12 21:22 IST

ಉಡುಪಿ, ಫೆ.12: ಜಿಲ್ಲೆಯಲ್ಲಿ 2024ರ ಎಪ್ರಿಲ್‌ನಿಂದ ನವೆಂಬರ್‌ವರೆಗೆ ಗಂಡು ಮತ್ತು ಹೆಣ್ಣಿನ ಲಿಂಗಾನುಪಾತ 1000ಕ್ಕೆ 966 ಇದೆ. ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆ ಇರುವ ಗ್ರಾಮಗಳಲ್ಲಿ ಇದರಿಂದ ಆಗುವ ಸಾಮಾಜಿಕ ತೊಂದರೆಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಅಲ್ಲಿನ ಶಾಲೆಗಳಲ್ಲಿ ಎನ್ನೆಸ್ಸೆಸ್ ವಿದ್ಯಾರ್ಥಿಗಳ ಮೂಲಕ ಕೈಗೊಳ್ಳಲಾಗುತ್ತಿದೆ ಎಂದು ಉಡುಪಿ ಜಿಲ್ಲಾ ಪ್ರಭಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಪ್ರಶಾಂತ್ ಭಟ್ ಹೇಳಿದ್ದಾರೆ.

ಅಜ್ಜರಕಾಡಿನಲ್ಲಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ಕಾಯ್ದೆ ಸಲಹಾ ಸಮಿತಿ (ಪಿಸಿಪಿಎನ್‌ಡಿಟಿ) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಗರ್ಭಧಾರಣೆ ಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ಹಚ್ಚಿ ಘೋಷಿಸುವ ವ್ಯಕ್ತಿಗಳು, ಸ್ಕ್ಯಾನಿಂಗ್ ಕೇಂದ್ರಗಳು ಹಾಗೂ ಆಸ್ಪತ್ರೆಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.

ಪಿಸಿಪಿಎನ್‌ಡಿಟಿ ಕಾಯಿದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು, ಒಂದೊಮ್ಮೆ ಲಿಂಗ ಪತ್ತೆ ಮಾಡಿದ ಪ್ರಕರಣಗಳು ಕಂಡುಬಂದಲ್ಲಿ ಹಾಗೂ ಸ್ಕ್ಯಾನಿಂಗ್ ಕೇಂದ್ರಗಳಲ್ಲಿ ಸರಕಾರದ ನಿಯಮಾನುಸಾರ ಕಾರ್ಯ ಚಟುವಟಿಕೆಗಳನ್ನು ಮಾಡದೇ ಇರುವಂತಹವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಗರ್ಭ ಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ಹಚ್ಚುವುದು ಕಾನೂನಿನ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ. ಭ್ರೂಣಲಿಂಗ ಪತ್ತೆಯಿಂದ ಹೆಣ್ಣು ಮತ್ತು ಗಂಡು ಮಕ್ಕಳ ಅನುಪಾತದಲ್ಲಿ ಹೆಚ್ಚಿನ ವ್ಯತ್ಯಾಸವಾಗಿ ಸಮಾಜದಲ್ಲಿ ಅಸಮ ತೋಲನ ಉಂಟಾಗುತ್ತದೆ. ಇದರಿಂದ ಮಹಿಳೆಯರ ಮೇಲೆ ಅಪರಾಧಿಕ ಪ್ರಕರಣಗಳೂ ಸಹ ಹೆಚ್ಚಾಗುವ ಸಾಧ್ಯತೆಗಳು ಇರುತ್ತವೆ. ಇದಕ್ಕೆ ಯಾರೂ ಆಸ್ಪದ ನೀಡಬಾರದು ಎಂದರು.

ಜಿಲ್ಲಾ ಮಟ್ಟದ ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ಕಾಯಿದೆ ಸಲಹಾ ಸಮಿತಿಯ ಅಧ್ಯಕ್ಷ ಡಾ.ಪ್ರತಾಪ್ ಕುಮಾರ್ ಮಾತನಾಡಿ, ಸ್ಕ್ಯಾನಿಂಗ್ ಕೇಂದ್ರಗಳಲ್ಲಿ ಭ್ರೂಣಲಿಂಗ ಪತ್ತೆ ಹಚ್ಚುವುದು ಶಿಕ್ಷಾರ್ಹ ಅಪರಾಧ. ಇದನ್ನು ಎದ್ದು ಕಾಣುವ ರೀತಿಯಲ್ಲಿ ಫಲಕಗಳಲ್ಲಿ ಪ್ರದರ್ಶಿಸಬೇಕು ಹಾಗೂ ಸರಕಾರದ ನಿಯಮಾನುಸಾರ ರಿಜಿಸ್ಟರ್ ದಾಖಲೆಗಳನ್ನು ಸರಿಯಾಗಿ ನಿರ್ವಹಿಸಬೇಕು. ಜಿಲ್ಲೆಯ 5 ಸ್ಕ್ಯಾನಿಂಗ್ ಸೆಂಟರ್‌ಗಳಲ್ಲಿ ಎಫ್ ಫಾರ್ಮ್ ಸೇರಿದಂತೆ ವಿವಿಧ ದಾಖಲಾತಿಗಳನ್ನು ಸರಿಯಾಗಿ ನಿರ್ವಹಿಸದ ಕಾರಣ ಕೇಳಿ ನೋಟೀಸ್ ನೀಡಲಾಗಿದೆ ಎಂದರು.

ಪಿಸಿಪಿಎನ್‌ಡಿಟಿ ಸಮಿತಿಯ ಸದಸ್ಯರು ಆಗಾಗ ಅನಿರೀಕ್ಷಿತವಾಗಿ ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಬೇಕು ಎಂದ ಡಾ. ಪ್ರತಾಪ್‌ಕುಮಾರ್, ಹೊಸದಾಗಿ ಸ್ಕ್ಯಾನಿಂಗ್ ಸೆಂಟರ್‌ಗಳನ್ನು ತೆರೆಯಲು ಅರ್ಜಿ ಸಲ್ಲಿಸಿದ್ದಲ್ಲಿ ಸೂಕ್ತ ದಾಖಲೆಗಳನ್ನು ಪರಿಶೀಲಿಸಿ, ಅನುಮತಿ ನೀಡಬೇಕು ಎಂದರು.

ಸಭೆಯಲ್ಲಿ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ರಾಮರಾವ್, ಮಣಿಪಾಲ ಕೆಎಂಸಿಯ ಮಕ್ಕಳ ತಜ್ಞ ಡಾ. ಕಿರಣ ಹೆಬ್ಬಾರ್, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ, ಸಮಾಜ ಸೇವಕ ಡಾ.ಗಣೇಶ್ ಪೈ, ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ದೀಕ್ಷಿತಾ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News