×
Ad

"ಗ್ಯಾರಂಟಿಗಳಿಂದ ರಾಜ್ಯ ಮಹಿಳೆಯರ ಆರ್ಥಿಕತೆಯಲ್ಲಿ ಶೇ.12 ಹೆಚ್ಚಳ"

Update: 2025-02-18 20:15 IST

ಉಡುಪಿ, ಫೆ.18: ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಯಶಸ್ವಿಯಾಗಿ ಜಾರಿಗೊಳಿಸಿದ ಪಂಚ ಗ್ಯಾರಂಟಿಗಳಿಂದ ದೇಶದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ)ಗಳಲ್ಲಿ ಕರ್ನಾಟಕ ರಾಜ್ಯ ದೇಶದಲ್ಲೇ ನಂ.1 ರಾಜ್ಯವಾಗಿ ಗುರುತಿಸಲ್ಪಟ್ಟಿದೆ. ಅಲ್ಲದೇ ರಾಜ್ಯದ ಮಹಿಳೆಯರ ಆರ್ಥಿಕತೆಯಲ್ಲೂ ಶೇ.12ರಷ್ಟು ಹೆಚ್ಚಳವಾಗಿದೆ ಎಂಬುದು ಅಧಿಕೃತ ಸಮೀಕ್ಷೆಗಳಿಂದ ಗೊತ್ತಾಗಿದೆ ಎಂದು ರಾಜ್ಯ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಎಚ್.ಎಂ.ರೇವಣ್ಣ ಹೇಳಿದ್ದಾರೆ.

ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಕಚೇರಿಯನ್ನು ಉದ್ಘಾಟಿಸಿದ ಬಳಿಕ ಜಿಪಂನ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಉಡುಪಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿದ ಬಳಿಕ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುತಿದ್ದರು. ರಾಜ್ಯದ ಮಹಿಳೆಯರು ಇಂದು ಆರ್ಥಿಕ ಸ್ವಾವಲಂಬನೆಯತ್ತ ಸಾಗಿದ್ದಾರೆ ಎಂದೂ ಅವರು ಹೇಳಿದರು.

ಇಡೀ ದೇಶಕ್ಕೆ ಮಾದರಿ ಎನಿಸಿರುವ ಗ್ಯಾರಂಟಿ ಯೋಜನೆ ಈಗ ಸಿದ್ದರಾಮಯ್ಯ ಮಾದರಿ, ಕರ್ನಾಟಕ ಮಾದರಿ ಎಂದೇ ಎಲ್ಲೆಡೆ ಪ್ರಸಿದ್ಧಿಯಾಗಿದೆ. ಇದು ಇಡೀ ರಾಜ್ಯಕ್ಕೆ ಹೆಮ್ಮೆಯ ವಿಷಯವೆನಿಸಿದೆ ಎಂದು ರೇವಣ್ಣ ನುಡಿದರು.

ಮಹಾರಾಷ್ಟ್ರ, ಮಧ್ಯಪ್ರದೇಶ, ದೆಹಲಿ ಸೇರಿದಂತೆ ಹಲವು ರಾಜ್ಯಗಳು ಇಂದು ಗ್ಯಾರಂಟಿ ಯೋಜನೆಗಳನ್ನು ತಮ್ಮಲ್ಲಿ ಅನುಷ್ಠಾನಗೊಳಿಸಿವೆ. ಹಲವು ರಾಜ್ಯಗಳ ಸಚಿವರು, ಪ್ರತಿನಿಧಿಗಳು ಪಂಚ ಗ್ಯಾರಂಟಿಗಳ ಬಗ್ಗೆ ಮಾಹಿತಿ ಪಡೆಯಲು ರಾಜ್ಯಕ್ಕೆ ಭೇಟಿ ನೀಡಿದ್ದಾರೆ. ದೇಶ ಹಾಗೂ ವಿಶ್ವದ ಖ್ಯಾತ ಆರ್ಥಿಕ ತಜ್ಞರು ರಾಜ್ಯದ ಗ್ಯಾರಂಟಿ ಯೋಜನೆಗಳನ್ನು ಪ್ರಶಂಸಿಸುತಿದ್ದು, ಇದು ನಮಗೆ ಹೆಮ್ಮೆಯ ವಿಷಯ ಎಂದರು.

ನಾಲ್ಕು ಲಕ್ಷ ಕೋಟಿ ರೂ.ಗಳ ರಾಜ್ಯ ಬಜೆಟ್‌ನಲ್ಲಿ ಪಂಚ ಗ್ಯಾರಂಟಿ ಯೋಜನೆಗಳಿಗಾಗಿ 57,000 ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ. ಹೀಗಾಗಿ ರಾಜ್ಯದ ಅಭಿವೃದ್ಧಿಗೆ ಇದರಿಂದ ಯಾವುದೇ ಅಡ್ಡಿಯಾಗುತ್ತಿಲ್ಲ. ಗ್ಯಾರಂಟಿ ಯೋಜನೆಯಲ್ಲಿ ಯಾವುದೇ ಮದ್ಯವರ್ತಿಗಳಿಲ್ಲ, ಹಣದ ದುರುಪಯೋಗವೂ ಆಗುವುದಿಲ್ಲ. ಫಲಾನುಭವಿಗಳಿಗೆ ಹಣ ನೇರವಾಗಿ ಅವರ ಖಾತೆಗಳಿಗೆ ಹೋಗುತ್ತಿದೆ. ಹೀಗಾಗಿ ಇದೊಂದು ಯಶಸ್ವಿ ಯೋಜನೆ ಎಂದರು.

ಗ್ಯಾರಂಟಿಯ ಅಂಕಿಅಂಶ: ರಾಜ್ಯದಲ್ಲಿ ಇದುವರೆಗೆ ಪಂಚ ಗ್ಯಾರಂಟಿ ಯೋಜನೆಗಳ ಅಂಕಿಅಂಶಗಳನ್ನು ವಿವರಿಸಿದ ಮಾಜಿ ಸಚಿವ ರೇವಣ್ಣ, ಶಕ್ತಿ ಯೋಜನೆಯಲ್ಲಿ ಇದುವರೆಗೆ 397 ಕೋಟಿ ಮಹಿಳೆಯರು ಕೆಎಸ್ಸಾರ್ಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಮಾಡಿದ್ದು, ಇದಕ್ಕಾಗಿ ಒಟ್ಟು 9665 ಕೋಟಿ ರೂ. ಖರ್ಚಾಗಿದೆ ಎಂದರು.

ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಪ್ರತಿ ತಿಂಗಳು 2000ರೂ. ಹಣ ಜಮಾ ಮಾಡುವ ಗೃಹಲಕ್ಷ್ಮೀ ಯೋಜನೆಯ ಲಾಭವನ್ನು 1.22 ಕೋಟಿ ಮಹಿಳೆಯರು ಪಡೆದಿದ್ದು, ಈವರೆಗೆ ಅವರ ಖಾತೆಗಳಿಗೆ ಒಟ್ಟು 35,180 ಕೋಟಿ ರೂ. ನೇರವಾಗಿ ಜಮೆಯಾಗಿದೆ ಎಂದರು.

ಗೃಹ ಜ್ಯೋತಿ ಯೋಜನೆಯಲ್ಲಿ ಇದುವರೆಗೆ 1.63 ಕೋಟಿ ಮಂದಿಯ ವಿದ್ಯುತ್ ಬಿಲ್ ಉಚಿತವಾಗಿದ್ದು, ಇದಕ್ಕಾಗಿ 12,589 ಕೋಟಿ ರೂ.ವ್ಯಯ ವಾಗಿದೆ. ಅನ್ನ ಭಾಗ್ಯ ಯೋಜನೆಯಲ್ಲಿ 60,601 ಕೋಟಿ ಜನರಿಗೆ 10,452 ಕೋಟಿ ರೂ.ವೆಚ್ಚವಾಗಿದೆ. ಅಲ್ಲದೇ ಯುವನಿಧಿ ಯೋಜನೆಗೆ ರಾಜ್ಯದ ಒಟ್ಟು 2.51 ಲಕ್ಷ ಯುವಜನರು ನೊಂದಾಯಿಸಿಕೊಂಡಿದ್ದು, ಇವರಿಗೆ ಒಟ್ಟು 270.17 ಕೋಟಿ ರೂ. ಹಣವನ್ನು ಅವರ ಖಾತೆಗಳಿಗೆ ಜಮಾ ಮಾಡಲಾಗಿದೆ ಎಂದು ರೇವಣ್ಣ ತಿಳಿಸಿದರು.

ಉಡುಪಿ ಜಿಲ್ಲೆಯಲ್ಲಿ: ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಉಡುಪಿ ಜಿಲ್ಲೆಯ ಮಾಹಿತಿಯನ್ನು ನೀಡಿದ ಅವರು, ಜಿಲ್ಲೆಯ 2,24,348 ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆಯಡಿ ಒಟ್ಟು 648.52 ಕೋಟಿ ರೂ.ಗಳನ್ನು ಅವರ ಖಾತೆಗಳಿಗೆ ಜಮಾ ಮಾಡಲಾಗಿದೆ ಎಂದರು.

ಗೃಹಜ್ಯೋತಿ ಯೋಜನೆಯಲ್ಲಿ 3,39,305 ಕುಟುಂಬಗಳಿಎ 342.16 ಕೋಟಿ ರೂ.ಗಳ ಉಚಿತ ವಿದ್ಯುತ್ ನೀಡಲಾಗಿದೆ. ಅನ್ನಭಾಗ್ಯ ಯೋಜನೆಯಲ್ಲಿ 1.21 ಕೋಟಿ ಮಂದಿಗೆ 202.49 ಕೋಟಿ ರೂ., ಶಕ್ತಿ ಯೋಜನೆಯಲ್ಲಿ 2.16 ಕೋಟಿ ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದು, 80.45 ಕೋಟಿ ರೂ.ಗಳನ್ನು ಇದಕ್ಕಾಗಿ ವ್ಯಯಿಸಲಾಗಿದೆ. ಯುವನಿಧಿಯಲ್ಲಿ 3494 ಮಂದಿ ನೊಂದಾಯಿಸಿಕೊಂಡಿದ್ದು 3.75 ಕೋಟಿ ರೂ.ಗಳನ್ನು ಅವರ ಖಾತೆಗಳಿಗೆ ಜಮಾ ಮಾಡಲಾಗಿದೆ ಎಂದು ರೇವಣ್ಣ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್ ಉಡುಪಿ ಜಿಲ್ಲಾ ಸಮಿತಿಯ ಅಧ್ಯಕ್ಷ ಅಶೋಕಕುಮಾರ್ ಕೊಡವೂರು ಉಪಸ್ಥಿತರಿದ್ದರು.

ಮೂರು ತಿಂಗಳ ಗ್ಯಾರಂಟಿ ಹಣ ಬಿಡುಗಡೆ

ಯಾವುದೇ ಕಾರಣಕ್ಕೂ ಈ ಪಂಚಗ್ಯಾರಂಟಿ ಯೋಜನೆ ನಿಲ್ಲಲ್ಲ...ನಿಲ್ಲಲ್ಲ.. ನಿಲ್ಲಲ್ಲ.. ಎಂದು ಸ್ಪಷ್ಟವಾಗಿ ಘೋಷಿಸಿದ ಎಚ್.ಎಂ.ರೇವಣ, ಈ ಕುರಿತು ಬಿಜೆಪಿ ಮಾಡುತ್ತಿರುವ ಅಪಪ್ರಚಾರವನ್ನು ನಂಬದಂತೆ ರಾಜ್ಯದ ಜನತೆಗೆ ಮನವಿ ಮಾಡಿದರು.

ತಾಂತ್ರಿಕ ಕಾರಣದಿಂದ ಅಕ್ಟೋಬರ್ ತಿಂಗಳಿನಿಂದ ಹಣ ಬಿಡುಗಡೆ ಯಾಗಿಲ್ಲ. ಇದೀಗ ನಿನ್ನೆಯಷ್ಟೇ ಮೂರು ತಿಂಗಳ ಗ್ಯಾರಂಟಿ ಹಣವನ್ನು ಬಿಡುಗಡೆಗೊಳಿಸಲಾಗಿದೆ ಎಂದ ರೇವಣ್ಣ, ಇನ್ನು ನಾಲ್ಕೈದು ದಿನಗಳಲ್ಲಿ ಎಲ್ಲರ ಖಾತೆಗಳಿಗೆ ಗೃಹಲಕ್ಷ್ಮೀಯೂ ಸೇರಿದಂತೆ ಎಲ್ಲಾ ಯೋಜನೆಗಳ ಹಣ ಜಮಾಗೊಳ್ಳಲಿದೆ ಎಂದರು.

ಹರಕಲು ಸೀರೆ..ಮುರುಕಲು ಸೈಕಲ್: ಅನ್ನಭಾಗ್ಯ ಯೋಜನೆಯಲ್ಲಿ ಅಕ್ಕಿಗಾಗಿ ಹಲವು ಬಾರಿ ಕೇಂದ್ರಕ್ಕೆ ಮನವಿ ಮಾಡಿದಾಗಲೂ ನೀಡದ ಬಿಜೆಪಿ ಈಗ ನಾವು ಅಗ್ಗದ ದರದಲ್ಲಿ ಅಕ್ಕಿ ನೀಡಲು ಮುಂದಾದರೂ ರಾಜ್ಯ ಪಡೆಯುತ್ತಿಲ್ಲ ಎಂದು ಅಪಪ್ರಚಾರ ಮಾಡುವ ಮೂಲಕ ನಾಟಕವಾಡುತಿದ್ದಾರೆ ಎಂದು ದೂರಿದರು.

ಬಿಜೆಪಿ ಇದುವರೆಗೆ ಒಂದಾದರೂ ಜನಪರ ಕಾರ್ಯಕ್ರಮವನ್ನು ನೀಡಿದ್ದಾರಾ ಎಂದು ಪ್ರಶ್ನಿಸಿದ ರೇವಣ್ಣ, ಯಡಿಯೂರಪ್ಪ ‘ಹರಕಲು ಸೀರೆ, ಮುರುಕಲು ಸೈಕಲ್’ ನೀಡಿದ್ದು ಬಿಟ್ಟರೆ ಬೇರೆ ಏನಾದರೂ ಜನ ಸಾಮಾನ್ಯರಿಗೆ ಕಾರ್ಯಕ್ರಮ ನೀಡಿದ್ದಾರಾ ಎಂದು ಖಾರವಾಗಿ ಕೇಳಿದರು. ಅವರು ಒಂದು ರೂ. ಜನರಿಗೆ ಖರ್ಚು ಮಾಡಿ 100ರೂ. ಪ್ರಚಾರಕ್ಕೆ ಖರ್ಚು ಮಾಡಲು ನಿಪುಣರು ಎಂದು ವ್ಯಂಗ್ಯವಾಡಿದರು.



Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News