ಕೋಟೇಶ್ವರ: ಜ.12ರಂದು ತೆಂಗು ಬೆಳೆ ಅಭಿವೃದ್ಧಿ ಕಾರ್ಯಗಾರ
ಉಡುಪಿ, ಡಿ.31: ಮುಂದಿನ ಜನವರಿ 12ರಂದು ಕೋಟೇಶ್ವರದ ಸರಸ್ವತಿ ಕಲ್ಯಾಣ ಮಂಟಪದಲ್ಲಿ ಕೇಂದ್ರ ತೆಂಗು ಅಭಿವೃದ್ಧಿ ಮಂಡಳಿ ಮತ್ತು ತೋಟಗಾರಿಕಾ ಇಲಾಖೆ ಹಾಗೂ ಕಿಸಾನ್ ಸಂಘಗಳ ಸಹಭಾಗಿತ್ವದಲ್ಲಿ ನಡೆಯುವ ಜಿಲ್ಲಾಮಟ್ಟದ ತೆಂಗು ಬೆಳೆ ಅಭಿವೃದ್ಧಿ ಕಾರ್ಯಗಾರದ ಬಗ್ಗೆ ಪೂರ್ವಭಾವಿ ಸಭೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ನೇತೃತ್ವದಲ್ಲಿ ಇಂದು ಮಣಿಪಾಲದ ಅವರ ಕಚೇರಿಯಲ್ಲಿ ನಡೆಯಿತು.
ಜ.12ರಂದು ಬೆಳಗ್ಗೆ 10:00 ಗಂಟೆಗೆ ತೆಂಗು ಬೆಳೆಗಾರರ ಕಾರ್ಯಗಾರ ವನ್ನು ರಾಜ್ಯ ತೋಟಗಾರಿಕಾ ಮಂತ್ರಿ ಎಸ್.ಎಸ್.ಮಲ್ಲಿಕಾರ್ಜುನ್ ಉದ್ಘಾಟಿಸಲಿದ್ದಾರೆ. ತೆಂಗಿನ ಮೌಲ್ಯವರ್ಧಿತ ಉತ್ಪನ್ನಗಳನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಮಂತ್ರಿ ಲಕ್ಷ್ಮೀ ಹೆಬ್ಬಾಳ್ಕರ್ ಬಿಡುಗಡೆ ಗೊಳಿಸಲಿದ್ದಾರೆ.
ಬೆಳಗ್ಗೆ 9:00ರಿಂದ ಜಿಲ್ಲೆ ಮತ್ತು ಹೊರ ಜಿಲ್ಲೆಗಳಿಂದ ಆಗಮಿಸುವ ಶಿಬಿರಾರ್ಥಿ ರೈತರ ನೊಂದಾಣಿ ಕಾರ್ಯ ನಡೆಯಲಿದ್ದು, ಅತಿಥಿಗಳಿಂದ ತೆಂಗು ಉತ್ಪನ್ನಗಳ ಪ್ರದರ್ಶನ, ಮಳಿಗೆಗಳ ಉದ್ಘಾಟನೆ ನಡೆಯಲಿದೆ. ಅಪರಾಹ್ನ 12:00 ಗಂಟೆಗೆ ವಿಜ್ಞಾನಿ ಡಾ.ವಿನಾಯಕ್ ಹೆಗ್ಡೆ ಅವರಿಂದ ತೆಂಗು ಬೆಳೆಯಲ್ಲಿ ಕೀಟ ಮತ್ತು ರೋಗಬಾಧೆಯ ಸಮಗ್ರ ನಿರ್ವಹಣೆ ಕುರಿತು ಉಪನ್ಯಾಸವಿದ್ದು, 12:30ರಿಂದ ಬ್ರಹ್ಮಾವರ ವಲಯ ಕೃಷಿ ಹಾಗೂ ತೋಟಗಾರಿಕಾ ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ. ಚೈತನ್ಯ ಹೆಚ್.ಎಸ್. ಅವರು ತೆಂಗು ಬೆಳೆ ಉತ್ಪಾದನೆ ಹಾಗೂ ಮಿಶ್ರ ಬೆಳೆಗಳ ಮಾಹಿತಿ ನೀಡಲಿದ್ದಾರೆ.
ಅಪರಾಹ್ನ 2:30ರಿಂದ ತೆಂಗು ಬೆಳೆಯಲ್ಲಿ ಸಂಸ್ಕರಣೆ ಹಾಗೂ ಮೌಲ್ಯವರ್ಧನೆಗೆ ಮತ್ತು ಮಾರುಕಟ್ಟೆ ಬಲವರ್ಧನೆಗೆ ಇರುವ ಅವಕಾಶದ ಕುರಿತು ಕಾಸರಗೋಡಿನ ಸಿಪಿಸಿಆರ್‌ಐನ ನಿರ್ದೇಶಕ ಡಾ.ಕೆ.ಬಿ. ಹೆಬ್ಬಾರ್ ರಿಂದ ಮಾಹಿತಿ ಕಾರ್ಯಾಗಾರ ನಡೆಯಲಿದೆ. ಬಳಿಕ ಸಂವಾದ ಹಾಗೂ ಪ್ರಶ್ನೋತ್ತರ ಕಾರ್ಯಕ್ರಮವಿದ್ದು, ಕೊನೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ.
ಒಂದು ದಿನದ ಈ ಕಾರ್ಯಾಗಾರದಲ್ಲಿಈ ಜಿಲ್ಲೆ ಹಾಗೂ ಹೊರ ಜಿಲ್ಲೆಗಳ ವಿವಿಧ ರೈತ ಸಂಘಗಳ ಸದಸ್ಯರು, ಕೃಷಿಕರು ವಿವಿಧ ತೆಂಗು ಬೆಳೆಗಾರರ ಸಂಘಗಳ ಪದಾಧಿಕಾರಿಗಳು ಹಾಗೂ ಆಸಕ್ತ ತೆಂಗು ಬೆಳೆಗಾರರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮನವಿ ಮಾಡಿದರು.
ಸಭೆಯಲ್ಲಿ ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕಿ ಕ್ಷಮಾ ಪಾಟೀಲ್, ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ.ಧನಂಜಯ್, ತೋಟಗಾರಿಕೆ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.