ಜ.3: ವಿದುಷಿ ದೀಕ್ಷಾ ರಾಮಕೃಷ್ಣರಿಂದ ‘ಏಕವ್ಯಕ್ತಿ ಗಾನ ನೃತ್ಯಾರ್ಪಣೆ’
ಉಡುಪಿ, ಡಿ.31: ಉಡುಪಿ-ಮಣಿಪಾಲದ ಹೆಜ್ಜೆ-ಗೆಜ್ಜೆ ಫೌಂಡೇಷನ್‌ನ ಸಹ ನಿರ್ದೇಶಕಿಯಾಗಿರುವ ವಿದುಷಿ ದೀಕ್ಷಾ ರಾಮಕೃಷ್ಣ ಇವರಿಂದ ಇದೇ ಜ.3ರಂದು ಶ್ರೀಪುರಂದರ ದಾಸರ ರಚನೆಗಳಿಗೆ ಏಕವ್ಯಕ್ತಿ ಗಾನ-ನೃತ್ಯಾರ್ಪಣೆ ಕಾರ್ಯಕ್ರಮ ಆರು ಗಂಟೆಗಳ ಕಾಲ ನಡೆಯಲಿದೆ ಎಂದು ಹೆಜ್ಜೆ-ಗೆಜ್ಜೆಯ ಕಾರ್ಯದರ್ಶಿ ರಾಮಕೃಷ್ಣ ಹೆಗಡೆ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ತಮ್ಮ ಈ ಪ್ರಯತ್ನದ ಮೂಲಕ ದೀಕ್ಷಾ ರಾಮಕೃಷ್ಣ ಅವರು ಗೋಲ್ಡನ್ ಬುಕ್ ಆಫ್ ವಲ್ಡ್ ರೆಕಾರ್ಡ್‌ನಲ್ಲಿ ಸೇರ್ಪಡೆಗೊಳ್ಳಲು ಪ್ರಯತ್ನಿಸ ಲಿದ್ದಾರೆ ಎಂದರು.
ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ದೀಕ್ಷಾ ಅವರು ಬೆಳಗ್ಗೆ 9ಗಂಟೆಗೆ ತನ್ನ ದಾಖಲೆಯ ಗಾನ-ನೃತ್ಯ ಕಾರ್ಯಕ್ರಮ ನಡೆಸಲಿದ್ದು, ಅಪರಾಹ್ನ 3:00ಗಂಟೆಯವರೆಗೆ ಸತತವಾಗಿ ಆರು ಗಂಟೆಗಳ ಕಾಲ ಇದನ್ನು ಮುಂದು ವರಿಸುವರು. ಈ ಅವಧಿಯಲ್ಲಿ ಅವರು ಪುರಂದರದಾಸರ ಸುಮಾರು 500ಕ್ಕೂ ಅಧಿಕ ಕೀರ್ತನೆಗಳನ್ನು ಹಾಡಿ ಕುಣಿಯಲಿದ್ದಾರೆ ಎಂದರು.
ಇಂಥ ಗಾನ-ನೃತ್ಯ ಪ್ರಯತ್ನವನ್ನು ಈ ಹಿಂದೆ ಯಾರೂ ಮಾಡಿಲ್ಲ. ಹೀಗಾಗಿ ಈ ಮೂಲಕ ದೀಕ್ಷಾ ಅವರ ಸಾಧನೆ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ದಾಖಲಾಗಲಿದೆ. ಈ ಪ್ರಯತ್ನದಲ್ಲಿ ಅವರಿಗೆ ಹಿಮ್ಮೇಳನದಲ್ಲಿ ಹಾರ್ಮೋನಿಯಂನಲ್ಲಿ ವಿದ್ವಾನ್ ಸತೀಶ್ ಭಟ್ ಹೆಗ್ಗಾರ್,. ವಿದ್ವಾನ್ ಶಶಿಕಿರಣ್ ತಬಲದಲ್ಲಿ ವಿದ್ವಾನ್ ಮಾಧವಾಚಾರ್ ಉಡುಪಿ, ವಿದುಷಿ ವಿಜೇತಾ ಹೆಗಡೆ ಸಹಕರಿಸಲಿದ್ದಾರೆ ಎಂದು ರಾಮಕೃಷ್ಣ ಹೆಗಡೆ ತಿಳಿಸಿದರು.
ಜ.3ರಂದು ಬೆಳಗ್ಗೆ 8:30ಕ್ಕೆ ಗೋಲ್ಡನ್ ಬುಕ್ ಆಫ್ ರೆಕಾರ್ಡ್ಸ್‌ನ ಏಷಿಯಾ ಮುಖ್ಯಸ್ಥ ಡಾ.ಮನಿಷ್ ವಿಶ್ನೋಯ್, ಹೆಜ್ಜೆ-ಗೆಜ್ಜೆ ನಿರ್ದೇಶಕಿ ವಿದುಷಿ ಯಶಾ ರಾಮಕೃಷ್ಣ, ಬಳ್ಳಾರಿ ಬಸವ ಟ್ರಸ್ಟ್‌ನ ಅಧ್ಯಕ್ಷ ಡಾ.ಶರಣ ಬಸವ ಅವರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ.
ದೀಕ್ಷಾ ರಾಮಕೃಷ್ಣ ಅವರ ಗಾನ ನೃತ್ಯಾರ್ಪಣೆಯ ಬಳಿಕ ಸಂಜೆ 5:00 ಗಂಟೆಗೆ ದಾಸ ಪದ ವೈಭವಂ ಮತ್ತು ಪುರಂದರ ಗಾನ ನರ್ತನದ ಸಮಾರೋಪ ಸಮಾರಂಭ ನಡೆಯಲಿದೆ. ಇದರಲ್ಲಿ ಶಾಸಕ ಯಶ್‌ಪಾಲ್ ಸುವರ್ಣ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಸಂಜೆ 6ಗಂಟೆ ಬಳಿಕ ವಿದುಷಿ ದೀಕ್ಷಾ ರಾಮಕೃಷ್ಣ ಮತ್ತು ಹೆಜ್ಜೆ-ಗೆಜ್ಜೆ ವಿದ್ಯಾರ್ಥಿಗಳಿಂದ ನೃತ್ಯ ಕಾಯಕ್ರಮ ನಡೆಯಲಿದೆ.
ಮರುದಿನ ಜ.4ರಂದು ರವಿವಾರ ಸಂಜೆ 4:00ಗಂಟೆಗೆ ನೂತನ ರವೀಂದ್ರ ಮಂಟಪದಲ್ಲಿ ದಾಸ ಪದ ವೈಭವಂನ ಸಮಾರೋಪ ಸಮಾರಂಭ ನಡೆಯಲಿದೆ. ಸಭಾ ಕಾರ್ಯಕ್ರಮದ ಬಳಿಕ ಬೆಂಗಳೂರಿನ ವಿದುಷಿ ಗೌರಿ ಸಾಗರ್‌ರಿಂದ ವಿಷಯಾಧಾರಿತ ಏಕವ್ಯಕ್ತಿ ನೃತ್ಯ ‘ಶ್ರೀವಿನೋದ’ ಪ್ರದರ್ಶನ ಗೊಳ್ಳಲಿದೆ. ಬಳಿಕ ವಿವಿಧ ನೃತ್ಯಶಾಲೆಗಳ ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮ ನಡೆಯಲಿದೆ ಎಂದು ರಾಮಕೃಷ್ಣ ಹೆಗಡೆ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಿದುಷಿ ದೀಕ್ಷಾ ರಾಮಕೃಷ್ಣ ಹಾಗೂ ವಿದುಷಿ ರಂಜನಿ ಕಾಮತ್ ಉಪಸ್ಥಿತರಿದ್ದರು.