2026ರಲ್ಲಿ ಖಗೋಳ ವಿದ್ಯಾಮಾನ; ನಾಲ್ಕು ಗ್ರಹಣಗಳು
ಉಡುಪಿ, ಡಿ.31: ಪ್ರತೀ ವರ್ಷದಂತೆ ನಾಳೆ ಪ್ರಾರಂಭಗೊಳ್ಳುವ ಹೊಸ ವರ್ಷ 2026ರಲ್ಲಿ ನಾಲ್ಕು ಗ್ರಹಣಗಳು ಸಂಭವಿಸಲಿವೆ. ಎರಡು ಸೂರ್ಯಗ್ರಹಣ ಹಾಗೂ ಎರಡು ಚಂದ್ರಗ್ರಹಣಗಳು ಈ ವರ್ಷದಲ್ಲಿ ಕಾಣಿಸಲಿವೆ ಎಂದು ಖ್ಯಾತ ಖಗೋಳ ವಿಜ್ಞಾನಿ ಹಾಗೂ ನಿವೃತ್ತ ಪ್ರಾಂಶುಪಾಲರಾದ ಡಾ.ಎ.ಪಿ. ಭಟ್ ತಿಳಿಸಿದ್ದಾರೆ.
ಫೆಬ್ರವರಿ 17ರಂದು ಕಂಕಣ ಸೂರ್ಯಗ್ರಹಣ (ಅಂಟಾರ್ಟಿಕಾ), ಆಗಸ್ಟ್ 12ರಂದು ಖಗ್ರಾಸ ಸೂರ್ಯ ಗ್ರಹಣ (ಗ್ರೀನ್‌ಲ್ಯಾಂಡ್ ಸ್ಪೈನ್, ಹಾಗೂ ಆರ್ಕ್ಟಿಕ್), ಮಾರ್ಚ್ 3ರಂದು ಖಂಡಗ್ರಾಸ ಚಂದ್ರಗ್ರಹಣ ಭಾರತಕ್ಕೆ, ಆಗಸ್ಟ್28ರಂದು ಖಂಡಗ್ರಾಸ ಚಂದ್ರಗ್ರಹಣ (ಭಾರತಕ್ಕೆ ಇಲ್ಲ) ಕಂಡು ಬರಲಿವೆ.
ಈ ನಾಲ್ಕರಲ್ಲಿ ಭಾರತದಲ್ಲಿ ಗೋಚರಿಸುವುದು ಒಂದೇ ಮಾರ್ಚ್ 3ರ ಖಂಡಗ್ರಾಸ ಚಂದ್ರಗ್ರಹಣ ಮಾತ್ರ. ಇದೂ ದಕ್ಷಿಣ ಭಾರತದವರಿಗೆ ಚಂದ್ರೋದಯಕ್ಕೆ ಸ್ವಲ್ಪ ಮಾತ್ರ ಉಳಿದಿರುವ ಗ್ರಹಣದ ಚಂದ್ರ. ಹೆಚ್ಚೆಂದರೆ ಕೇವಲ 8 ನಿಮಿಷ ಕಾಲ ಮಾತ್ರ ಇದು ಗೋಚರಿಸಬಹುದು.
ಇನ್ನು ವರ್ಷದಲ್ಲಿ ಉಲ್ಕಾಪಾತ ಹಾಗೂ ಧೂಮಕೇತುಗಳ ವಿಚಾರಕ್ಕೆ ಬಂದರೆ, ಪ್ರತೀ ವರ್ಷದಂತೆ ಈ ವರ್ಷವೂ ಸುಮಾರು 30 ಕಣ್ಣಿಗೆ ಕಾಣುವ ಉಲ್ಕಾಪಾತಗಳಲ್ಲಿ 12 ಉಲ್ಕಾಪಾತಗಳು ಸಂಭವಿಸುತ್ತವೆ. ಸದ್ಯಕ್ಕೆ ಕಣ್ಣಿಗೆ ಕಾಣಬಹುದಾದ ಅಲೆಮಾರಿ ಧೂಮಕೇತುಗಳು ಈ ಬಾರಿ ಗೋಚರಿಸುವುದಿಲ್ಲ.
ಸೂರ್ಯ ಕಲೆಗಳು: ಸೂರ್ಯ ತನ್ನ 11ವರ್ಷಗಳ ಕುಣಿತದ (ಸೂರ್ಯ ಕಲೆಗಳು, ಸನ್ ಫ್ಲಾರ್, ಕೊರೋನಲ್ ಮಾಸ್ ಇಜೆಕ್ಷನ್‌ಗಳು) 25ನೇ ಆವೃತ್ತಿ ಕಳೆದ 2025ರ ಜನವರಿಗೇ ಮುಗಿಯುವದೆಂದು ಅಂದಾಜಿಸಿದ್ದರೂ ಇನ್ನೂ ಮುಗಿದಿಲ್ಲ. ಎಕ್ಸ್ , ಎಮ್ ಫ್ಲಾರ್, ಶಕ್ತಿಯುತ ಕಣ ಶಕ್ತಿಗಳ ಕೊರೋನಲ್ ಮಾಸ್ ಇಜೆಕ್ಷನ್ಸ್ ಇನ್ನೂ ನಡೆಯುತ್ತಲೇ ಇವೆ. ಇದಕ್ಕೆ ಪೂರಕವಾಗಿ ಭೂಮಿಯಲ್ಲಿ ಅನೇಕಾನೇಕ ಜ್ವಾಲಾಮುಖಿಗಳು ಸಂಭವಿಸು ತ್ತಲೇ ಇರುತ್ತವೆ ಎಂದು ಡಾ.ಎ.ಪಿ.ಭಟ್ ತಿಳಿಸಿದ್ದಾರೆ.