ಉಡುಪಿ: ಸೆ. 13, 14ರಂದು ಸಿಂಡಿಕೇಟ್ ಬ್ಯಾಂಕಿನ ಶತಮಾನೋತ್ಸವ ಆಚರಣೆ
ಉಡುಪಿ, ಸೆ.11: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅಳಿಸಲಾಗದ ಛಾಪು ಮೂಡಿಸಿರುವ ಉಡುಪಿಯಲ್ಲೇ ಹುಟ್ಟಿ ಬೆಳೆದು ಇಂದು ಕೆನರಾ ಬ್ಯಾಂಕಿನೊಂದಿಗೆ ವಿಲೀನಗೊಂಡಿರುವ ಸಿಂಡಿಕೇಟ್ ಬ್ಯಾಂಕಿನ ಶತಮಾನೋತ್ಸವ ಆಚರಣೆಯನ್ನು ಸೆ. 13 ಮತ್ತು 14ರಂದು ಆಚರಿಸಲು ಸಿಂಡಿಕೇಟ್ ಬ್ಯಾಂಕಿನ ಅಧಿಕಾರಿಗಳು, ಸಿಬ್ಬಂದಿಗಳು ನಿರ್ಧರಿಸಿದ್ದಾರೆ ಎಂದು ಸಿಂಡಿಕೇಟ್ ಬ್ಯಾಂಕಿನ ಶತಮಾನೋತ್ಸವ ಆಚರಣೆ ಸಮಿತಿಯ ಅಧ್ಯಕ್ಷ ಕೆ.ಟಿ.ರೈ ತಿಳಿಸಿದ್ದಾರೆ.
ಇಂದು ಕೆನರಾ ಬ್ಯಾಂಕಿನೊಂದಿಗೆ ವಿಲೀನಗೊಂಡು ಪ್ರತ್ಯೇಕ ಘಟಕವಾಗಿ ಅಸ್ತಿತ್ವದಲ್ಲಿಲ್ಲದಿದ್ದರೂ,ಸಿಂಡಿಕೇಟ್ ಬ್ಯಾಂಕಿನ ಪರಂಪರೆ ಉದ್ಯಮವನ್ನು ಇಂದಿಗೂ ಪ್ರೇರೇಪಿಸುತ್ತಿದೆ ಮತ್ತು ಪ್ರಭಾವಿಸುತ್ತಿದೆ. 1925ರಲ್ಲಿ ಉಡುಪಿ ಯಲ್ಲಿ ಉದ್ಯಮಿಗಳಾಗಿದ್ದ ಉಪೇಂದ್ರ ಅನಂತ ಪೈ, ನುರಿತ ಎಂಜಿನಿಯರ್ ವಾಮನ್ ಕುಡ್ವ ಮತ್ತು ವೈದ್ಯ ಡಾ. ಟಿ.ಎಂ.ಎ. ಪೈ ಅವರಿಂದ ಸ್ಥಾಪಿಸಲ್ಪಟ್ಟ ಸಿಂಡಿಕೇಟ್ ಬ್ಯಾಂಕ್, ರೂ.8000 ಗಳ ಆರಂಭಿಕ ಬಂಡವಾಳದೊಂದಿಗೆ ತನ್ನ ಪ್ರಯಾಣವನ್ನು ಪ್ರಾರಂಭಿಸಿತ್ತು ಎಂದವರು ವಿವರಿಸಿದರು.
95 ವರ್ಷಗಳ ಕಾಲ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅಳಿಯದ ಸಾಧನೆ ಮಾಡಿದ್ದ ಸಿಂಡಿಕೇಟ್ ಬ್ಯಾಂಕ್ ಕೃಷಿ, ನೇಕಾರಿಕೆ ಸೇರಿದಂತೆ ವಿವಿಧ ಗುಡಿಕೈಗಾರಿಕೆ ಹಾಗೂ ಸಣ್ಣ ಉಳಿತಾಯಕ್ಕೆ ಬೆನ್ನೆಲುಬಾಗಿ ನಿಂತು ಪ್ರೋತ್ಸಾಹಿಸಿತ್ತು. 2020ರ ಎಪ್ರಿಲ್ 1 ರಂದು ಕೆನರಾ ಬ್ಯಾಂಕಿನೊಂದಿಗೆ ವಿಲೀನಗೊಂಡ ಸಮಯದಲ್ಲಿ, ಇದು ತನ್ನ 4000ಕ್ಕೂ ಅಧಿಕ ಶಾಖೆ ಗಳಲ್ಲಿ ಒಟ್ಟು 5,00,000 ಕೋಟಿಗೂ ಹೆಚ್ಚು ವ್ಯವಹಾರವನ್ನು ಹೊಂದಿತ್ತು.
2025 ಸಿಂಡಿಕೇಟ್ ಬ್ಯಾಂಕಿನ ಶತಮಾನೋತ್ಸವ ವರ್ಷವಾಗಿದ್ದು, ಈ ಮೈಲಿಗಲ್ಲನ್ನು ಸ್ಮರಿಸಲು, ಸಿಂಡಿಕೇಟ್ ಬ್ಯಾಂಕಿನ ಮಾಜಿ ಉದ್ಯೋಗಿಗಳು ಸೆ.13 ಮತ್ತು 14 ರಂದು ಎರಡು ದಿನಗಳ ಕಾಲ ಉಡುಪಿಯಲ್ಲಿ ಅಮೃತ ಗಾರ್ಡನ್‌ನಲ್ಲಿ ವಿಶಿಷ್ಟ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಇದರಲ್ಲಿ ಸಂಸ್ಥಾಪಕರಿಗೆ ಗೌರವ, ಕುಟುಂಬ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮವಿದೆ. ಇದರಲ್ಲಿ ಸಿಂಡಿಕೇಟ್ ಬ್ಯಾಂಕಿನ 600ಕ್ಕೂ ಅಧಿಕ ಮಾಜಿ ಉದ್ಯೋಗಿಗಳು ಭಾಗವಹಿಸಲಿದ್ದಾರೆ ಎಂದರು.
ಸೆ.13ರ ಶನಿವಾರ ಸಂಜೆ 4ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆ, ಮೂಡಬಿದರೆಯ ಡಾ.ಎಂ.ಮೋಹನ್ ಆಳ್ವ ಹಾಗೂ ನಿಟ್ಟೆ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಎನ್. ವಿನಯ ಹೆಗ್ಡೆ ಭಾಗವಹಿಸಲಿದ್ದಾರೆ. ಮೇ 14ರಂದು ಬೆಳಗ್ಗೆ 9:30ಕ್ಕೆ ನಡೆಯುವ ನೆನಪಿನ ಸರಮಾಲೆ ಕಾರ್ಯಕ್ರಮದಲ್ಲಿ ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಹಿರಿಯ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಮಾಹೆಯ ಡಾ.ಎಚ್.ಎಸ್.ಬಲ್ಲಾಳ್, ವಿ.ಲೀಲಾಧರ್, ಅಲೆನ್ ಸಿ.ಎ.ಪೆರೆರಾ ಮುಂತಾದವರು ಭಾಗವಹಿಸಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಸುಜಿರ್ ಪ್ರಭಾಕರ್, ದಿನಕರ ಪೂಂಜಾ, ಜಯರಾಮ ಪ್ರಭು, ಸಂಜಯ್ ಮಾಂಜ್ರೇಕರ್ ಉಪಸ್ಥಿತರಿದ್ದರು.