×
Ad

ಮೇ 14ರಿಂದ ಉಡುಪಿಯಲ್ಲಿ ಮಾವಿನ ಮೇಳ-2025

Update: 2025-05-10 19:39 IST

ಉಡುಪಿ, ಮೇ 10: ತೋಟಗಾರಿಕಾ ಇಲಾಖೆಯ ಸಹಕಾರದೊಂದಿಗೆ ಮಂಗಳೂರಿನ ಚಿರಪರಿಚಿತ ಮಾವಿನ ವ್ಯಾಪಾರ ಸಂಸ್ಥೆಗಳಾದ ಸೀಕೋ ಮತ್ತು ಯುಬಿಪಿ ಇದೇ ಮೇ 14ರಿಂದ 18ರವರೆಗೆ ದೊಡ್ಡಣಗುಡ್ಡೆಯಲ್ಲಿರುವ ತೋಟಗಾರಿಕಾ ಇಲಾಖೆ ಆವರಣದಲ್ಲಿರುವ ರೈತ ಸೇವಾ ಕೇಂದ್ರದಲ್ಲಿ ಮಾವು ಮೇಳ-2025ನ್ನು ಹಮ್ಮಿಕೊಂಡಿದೆ ಎಂದು ಸಂಘಟಕರಾದ ಅಬ್ದುಲ್ ಕುಂಞಿ ತಿಳಿಸಿದ್ದಾರೆ.

ಉಡುಪಿಯಲ್ಲಿ ಇಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು ಕಳೆದ 30 ವರ್ಷ ಗಳಿಂದ ಮಂಗಳೂರಿನಲ್ಲಿ ಮಾವಿನ ಹಣ್ಣಿನ ವ್ಯಾಪಾರದಲ್ಲಿ ಮುಂಚೂಣಿಯಲ್ಲಿರುವ ಸೀಕೋ ಮತ್ತು ಯು.ಬಿ.ಫ್ರೂಟ್ಸ್ ಸಂಸ್ಥೆ, ಇದೀಗ ಉಡುಪಿ ಜಿಲ್ಲೆಯ ಎಲ್ಲಾ ಗ್ರಾಹಕರಿಗೆ ತಾಜಾ ಹಾಗೂ ಆರೋಗ್ಯಕರ ವಾದ ಮಾವಿನಹಣ್ಣನ್ನು ಮಾರಾಟ ಮಾಡುವ ದೃಷ್ಟಿಯಿಂದ ಇಲಾಖೆಯ ಅನುಮತಿಯೊಂದಿಗೆ ಮೇಳ ವನ್ನು ಆಯೋಜಿಸುತಿದ್ದೇವೆ ಎಂದರು.

ಮಾವಿನ ಮೇಳದಲ್ಲಿ ವಿವಿಧ ಮಾವಿನ ತಳಿಗಳ ಪ್ರದರ್ಶನ ಹಾಗೂ ಮಾರಾಟ ವ್ಯವಸೆ ಇರುತ್ತದೆ. ಸ್ಥಳೀಯವಾಗಿ ಬೆಳೆಯುವ ಮಾವಿನ ತಳಿಗಳಾದ ಬನೆಡ್-ಆಪುಸ್, ಮುಡಪ್ಪ, ಕದ್ರಿ, ಪೈರಿ, ಕಳೆಕ್ಟರ್, ಕಾಲಪ್ಪಾಡಿಗಳನ್ನು ಮಾರಾಟ ಮಾಡುವ ಜೊತೆಗೆ ರಾಜ್ಯದ ವಿವಿಧ ಕಡೆಗಳಲ್ಲಿ ಬೆಳೆಯುವ ಮಲ್ಲಿಕಾ, ಮಲಗೋವಾ, ನೀಲಂ, ಸಿಂಧೂರ, ಬಂಗನಪಲ್ಲಿ, ಕೇಸರಿ, ದಶಹರಿ ಹಾಗೂ ಶುಗರ್ ಬೇಬಿ ತಳಿಗಳು ಇಲ್ಲಿ ಪ್ರದರ್ಶನ ಹಾಗೂ ಮಾರಾಟಕ್ಕೆ ಲಭ್ಯವಿರುತ್ತದೆ ಎಂದರು.

ಕಳೆದ ಹಲವು ದಶಕಗಳಿಂದ ಉಡುಪಿ ಜಿಲ್ಲೆಯ ತೋಟಗಾರಿಕಾ ಇಲಾಖೆಯ ಕ್ಷೇತ್ರದ ಮಾವಿನ ಹಣ್ಣು ಗಳನ್ನು ಹರಾಜಿನಲ್ಲಿ ಪಡೆದು ರೈತರ ತೋಟದಿಂದಲೇ ಅವುಗಳನ್ನು ಖರೀದಿಸಿ ತಂದು ಮಾರಾಟ ಮಾಡುತಿದ್ದೇವೆ. ಇಲ್ಲಿ ಐದು ದಿನಗಳ ಮಾವಿನ ಮೇಳದಲ್ಲೂ ನಾವು ರೈತರ ತೋಟದಿಂದ ತಂದ ತಾಜಾ ಹಣ್ಣುಗಳನ್ನು ಪ್ರದರ್ಶನ ಹಾಗೂ ಮಾರಾಟಕ್ಕೆ ಇಡಲಿದ್ದೇವೆ ಎಂದರು.

ಮಾವಿನ ಮೇಳವನ್ನು ವಿಧಾನಸಭೆಯ ಸಭಾಪತಿಗಳಾದ ಯು.ಟಿ.ಖಾದರ್ ಉದ್ಘಾಟಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಉಪಸ್ಥಿತರಿರುವರು. ಉಡುಪಿ ಶಾಸಕ ಯಶಪಾಲ್ ಸುವರ್ಣ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ, ನಗರಾಭಿವೃದ್ಧಿ ಪ್ರಾದಿಕಾರದ ಅಧ್ಯಕ್ಷ ದಿನಕರ ಹೇರೂರು, ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಜಿಎಂ ಸಿಇಒ ಪ್ರತೀಕ್ ಬಾಯಲ್, ಎಸ್ಪಿ ಡಾ.ಅರುಣ್ ಕೆ., ತೋಟಗಾರಿಕಾ ಇಲಾಖೆಯ ಉಪನಿರ್ದೇಶಕಿ ಭುವನೇಶ್ವರಿ ಮುಂತಾದವರು ಉಪಸ್ಥಿತರಿ ರುವರು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮೇಳದ ಸಂಘಟಕರಾದ ಸಮೀರ್, ಸಿದ್ಧಿಕ್ ಹಾಗೂ ಮಹಮ್ಮದ್ ಹಾರಿಸ್ ಕುದ್ರೋಳಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News