ಹವಾಮಾನ ಆಧಾರಿತ ಬೆಳೆವಿಮೆ ಅವಧಿ ಜು.15ರವರೆಗೆ ವಿಸ್ತರಣೆ
ಉಡುಪಿ, ಜು.3: ಉಡುಪಿ ಜಿಲ್ಲೆಯಲ್ಲಿ 2025-26ನೇ ಸಾಲಿಗೆ ಅಡಿಕೆ ಮತ್ತು ಕಾಳುಮೆಣಸು ಬೆಳೆಗಳನ್ನು ವಿಮೆಗೆ ಒಳಪಡಿಸಲು ಅರ್ಜಿ ಸಲ್ಲಿಕೆ ಅವಧಿಯನ್ನು ಜುಲೈ 15ರವರೆಗೆ ವಿಸ್ತರಿಸಲಾಗಿದೆ ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಬೆಳೆ ವಿಮೆ ಈ ಮೊದಲು ಜೂನ್ 30ರವರೆಗೆ ಸಮಯ ನಿಗದಿ ಪಡಿಸಿದ್ದು, ಉಡುಪಿ ಜಿಲ್ಲೆಯ ಕೃಷಿಕರು ಬೆಳೆ ವಿಮೆಗೆ ಸಮಯ ವಿಸ್ತರಣೆ ಮಾಡುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಹಾಗೂ ರೈತರ ಹಿತದೃಷ್ಟಿಯಿಂದ ಅವರಿಗೆ ಹೆಚ್ಚಿನ ಅವಕಾಶ ದೊರೆಯಬೇಕೆಂಬ ನಿಟ್ಟಿನಲ್ಲಿ ಜುಲೈ 15ವರೆಗೆ ಬೆಳೆ ವಿಮೆ ಅರ್ಜಿಯನ್ನು ಸಲ್ಲಿ ಸಲು ಸಮಯ ವಿಸ್ತರಣೆ ಮಾಡಲು ಸಂಸದ ಕೋಟ ರಾಜ್ಯ ಸರಕಾರದ ತೋಟಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಮನವಿ ಮಾಡಿದ್ದರು.
ಅದರಂತೆ ವಿಮೆ ಅನುಷ್ಠಾನ ಸಂಸ್ಥೆಗಳು ಬೆಳೆ ವಿಮೆ ನೊಂದಣಿಗೆ ಕೊನೆ ದಿನಾಂಕ ವಿಸ್ತರಣೆಗೆ ತಮ್ಮ ಒಪ್ಪಿಗೆ ಸೂಚಿಸಿದ್ದರಿಂದ, ಕೇಂದ್ರ ಸರಕಾರ ಯೋಜನೆ ನಿಯಮಾವಳಿಯಡಿ ಈ ದಿನಾಂಕವನ್ನು ವಿಸ್ತರಣೆ ಮಾಡುವ ಬಗ್ಗೆ ಅಧಿಕೃತ ಅನುಮೋದನೆ ನೀಡಿದೆ. ಅದರಂತೆ ಅವಧಿಯನ್ನು ಜುಲೈ 15 ರವರೆಗೆ ಅರ್ಜಿ ಸಲ್ಲಿಕೆಯ ಅವಧಿಯನ್ನು ನಿಗದಿಪಡಿಸಿ ಆದೇಶಿಸಿದೆ ಎಂದು ಕೋಟ ಹೇಳಿಕೆಯಲ್ಲಿ ತಿಳಿಸಿದ್ದಾರೆ.