ಉಡುಪಿ: ಫೆ.16ರಂದು ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭ
ಉಡುಪಿ, ಫೆ.15: ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿ, ಗೌರವ ಪ್ರಶಸ್ತಿಗಳೂ ಸೇರಿದಂತೆ ಕರ್ನಾಟಕ ಯಕ್ಷಗಾನ ಅಕಾಡೆಮಿಯ 2024ನೇ ಸಾಲಿನ ವಿವಿಧ ಪ್ರಶಸ್ತಿ ಪ್ರದಾನ ಸಮಾರಂಭ ಫೆ.16ರ ಸಂಜೆ 4 ಗಂಟೆಗೆ ಉಡುಪಿಯ ಯಕ್ಷಗಾನ ಕಲಾ ರಂಗದ ಐವೈಸಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಅಕಾಡೆಮಿಯ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ತಿಳಿಸಿದ್ದಾರೆ.
ಉಡುಪಿಯ ಹೊಟೇಲ್ ಡಯಾನ ಸಭಾಂಗಣದಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಸಮಾರಂಭದ ವಿವರಗಳನ್ನು ಅವರು ನೀಡಿದರು.
ಕರ್ನಾಟಕ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಫರೀದ್ ಅವರ ಉಪಸ್ಥಿತಿಯಲ್ಲಿ ನಡೆಯುವ ಈ ಸಮಾರಂಭವನ್ನು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಆರ್.ಹೆಬ್ಬಾಳ್ಕರ್ ಉದ್ಘಾಟಿಸಲಿದ್ದಾರೆ.
ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ ಸಚಿವ ಶಿವರಾಜ ಎಸ್.ತಂಗಡಗಿ ಇವರು ಪ್ರಶಸ್ತಿ ಪ್ರದಾನ ಮಾಡಿ, ಕಿರು ಪರಿಚಯ ಪುಸ್ತಕವನ್ನು ಬಿಡುಗಡೆಗೊಳಿಸಲಿದ್ದಾರೆ. ಉಡುಪಿ ಶಾಸಕ ಯಶಪಾಲ್ ಎ.ಸುವರ್ಣ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.
ಉಡುಪಿಯ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಜಿಲ್ಲೆಯ ಶಾಸಕರು, ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ., ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಡಾ.ಧರಣೀದೇವಿ ಮಾಲಗತ್ತಿ, ಮೈಸೂರು ವಿಭಾಗದ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನ ಸ್ವಾಮಿ ಹಾಗೂ ಇತರರು ಉಪಸ್ಥಿತರಿರುವರು.
ಮಾಂಬಾಡಿಗೆ ಪಾರ್ತಿಸುಬ್ಬ ಪ್ರಶಸ್ತಿ: ಡಾ.ತಲ್ಲೂರು ಶಿವರಾಮ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯುವ ಯಕ್ಷಗಾನ ಅಕಾಡೆಮಿಯ ಎರಡನೇ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಇದಾಗಿದ್ದು, ಈ ಬಾರಿಯ ಪ್ರತಿಷ್ಠಿತ ಪಾರ್ತಿಸುಬ್ಬ ಯಕ್ಷಗಾನ ಪ್ರಶಸ್ತಿಯನ್ನು ಖ್ಯಾತ ಹಿಮ್ಮೇಳ ವಾದಕ, ಯಕ್ಷಗಾನ ಗುರು ಬಂಟ್ವಾಳದ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರಿಗೆ ನೀಡಲಾಗುತ್ತಿದೆ.
ಅಲ್ಲದೇ ಐವರು ಹಿರಿಯ ಯಕ್ಷಗಾನ ಕಲಾವಿದರಿಗೆ 2024ನೇ ಸಾಲಿನ ಗೌರವ ಪ್ರಶಸ್ತಿ- ಬೆಳ್ತಂಗಡಿಯ ಕೊಳ್ತಿಗೆ ನಾರಾ ಯಣ ಗೌಡ, ಕುಂದಾಪುರದ ಕೋಡಿ ವಿಶ್ವನಾಥ ಗಾಣಿಗ, ಬಂಟ್ವಾಳದ ರಾಘವದಾಸ್, ಕಾಸರಗೋಡಿನ ಸುಬ್ರಾಯ ಹೊಳ್ಳ ಹಾಗೂ ತುಮಕೂರಿನ ಮೂಡಪಾಯ ಯಕ್ಷಗಾನದ ಕಾಂತರಾಜು ಅವರಿಗೆ ನೀಡಲಾಗುತ್ತಿದೆ.
10 ಮಂದಿ ಕಲಾವಿದರನ್ನು 2024ನೇ ಸಾಲಿನ ಯಕ್ಷಸಿರಿ ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇವರೆಂದರೆ ಕಾಸರ ಗೋಡಿನ ಅಡ್ಕ ಗೋಪಾಲಕೃಷ್ಣ ಭಟ್, ಉಡುಪಿಯ ಜಗನ್ನಾಥ ಆಚಾರ್ಯ ಎಳ್ಳಂಪಳ್ಳಿ, ಕಾಸರಗೋಡಿನ ಮವ್ವಾರು ಬಾಲ ಕೃಷ್ಣ ಮಣಿಯಾಣಿ, ಮಂಗಳೂರಿನ ಉಮೇಶ್ ಕುಪ್ಪೆಪದವು, ಶಿವಮೊಗ್ಗದ ಶಿವಾನಂದ ಗೀಜಗಾರು, ಹೊನ್ನಾವರದ ಮುಗ್ವಾ ಗಣೇಶ ನಾಯ್ಕ್, ಮಂಗಳೂರಿನ ಸುರೇಂದ್ರ ಮಲ್ಲಿ, ಮಂಗಳೂರಿನ ಅಂಡಾಲ ದೇವಿಪ್ರಸಾದ ಶೆಟ್ಟಿ, ಚಿಕ್ಕ ಮಗಳೂರಿನ ಹಳುವಳ್ಳಿ ಜ್ಯೋತಿ ಹಾಗೂ ಮೂಡಲಪಾಯ ಯಕ್ಷಗಾನಕ್ಕೆ ಬೆಂಗಳೂರು ಗ್ರಾಮಾಂತರದ ಕೃಷ್ಣಪ್ಪ.
ಬಂಟ್ವಾಳದ ಕರ್ಗಲ್ಲು ವಿಶ್ವೇಶ್ವರ ಭಟ್ಟ ಇವರನ್ನು ದಿ.ಕರ್ಕಿ ಹಿರಿಯ ಪರಮಯ್ಯ ಹಾಸ್ಯಗಾರ ಇವರ ಹೆಸರಿನಲ್ಲಿ ನೀಡುವ ದತ್ತಿನಿಧಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಡಾ.ತಲ್ಲೂರು ತಿಳಿಸಿದರು.
ಅಪರಾಹ್ನ 1:30ರಿಂದ ವಿದ್ಯಾಧರ ವೆಂಕಟೇಶ ಮಡಿವಾಳ ಜಲವಳ್ಳಿ ಮತ್ತು ಬಳಗದಿಂದ ‘ಮಾಗಧ ವಧೆ’ ಬಡಗುತಿಟ್ಟು ಯಕ್ಷಗಾನ ಪ್ರದರ್ಶನವಿದ್ದರೆ, ಸಮಾರಂಭದ ಬಳಿಕ ಸಂಜೆ 6 ರಿಂದ ಪೂರ್ಣಿಮಾ ಯತೀಶ್ ರೈ ಮತ್ತು ಬಳಗದಿಂದ ‘ಮಹಿಷ ಮರ್ದಿನಿ’ ತೆಂಕುತಿಟ್ಟು ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಅಕಾಡೆಮಿಯ ರಿಜಿಸ್ಟ್ರಾರ್ ನಮೃತಾ ಎನ್., ಸದಸ್ಯ ಸಂಚಾಲಕ ಪೃಥ್ವಿರಾಜ್ ಕವತ್ತಾರ್, ಅಕಾಡೆ ಮಿಯ ಸದಸ್ಯರಾದ ಸುಧಾಕರ ಶೆಟ್ಟಿ, ಕೊಪ್ಪಲ ಮೋಹನ ಕದ್ರಿ, ವಿಜಯಕುಮಾರ ಶೆಟ್ಟಿ ಮೊಯಿಲೊಟ್ಟು, ಕೃಷ್ಣಪ್ಪ ಪೂಜಾರಿ ಕಿನ್ಯಾ, ವಿದ್ಯಾಧರ ವೆಂಕಟೇಶ್ ಮಡಿವಾಳ ಹಾಗೂ ಪುಟ್ಟಸ್ವಾಮಿ ಎ.ಆರ್. ಉಪಸ್ಥಿತರಿದ್ದರು.