ತಲ್ಲೂರಿನಲ್ಲಿ ‘ಮಕ್ಕಳ ಹಬ್ಬ-2024’: ಅಧಿಕಾರಿಗಳು, ಜನಪ್ರತಿನಿಧಿಗಳೆದುರು ಸಮಸ್ಯೆ ಹೇಳಿಕೊಂಡ ಪುಟಾಣಿಗಳು
ಕುಂದಾಪುರ: ಎಲ್ಲರಿಗೂ ಬದುಕುವ ಹಕ್ಕಿದೆ ಎಂಬುದನ್ನು ಅರಿತಾಗ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಬಹುದು. ಪ್ರತಿಯೊಬ್ಬ ಮಗುವಿನಲ್ಲಿ ತಮಗೆ ಸಿಗಬೇಕಾದ ಹಕ್ಕುಗಳ ಬಗ್ಗೆ ತಿಳಿಹೇಳಲು ಮಕ್ಕಳ ವಿಶೇಷ ಗ್ರಾಮಸಭೆ ಸಹಕಾರಿ. ಇದನ್ನು ಮಕ್ಕಳ ಹಬ್ಬದಂತೆ ಆಚರಿಸಲಾಗುತ್ತಿದೆ ಎಂದು ಕುಂದಾಪುರ ತಹಶೀಲ್ದಾರ್ ಶೋಭಾಲಕ್ಷ್ಮೀ ಎಚ್.ಎಸ್ ಹೇಳಿದ್ದಾರೆ.
ತಲ್ಲೂರು ಗ್ರಾಮ ಪಂಚಾಯತ್, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ, ತಾಪಂ ಕುಂದಾಪುರ ನೇತೃತ್ವದಲ್ಲಿ ನಮ್ಮ ಭೂಮಿ ಸಿಡಬ್ಲ್ಯುಸಿ ಸ್ವಯಂಸೇವಾ ಸಂಸ್ಥೆ ಆಶ್ರಯದಲ್ಲಿ ತಲ್ಲೂರಿನ ಶೇಷಕೃಷ್ಣ ಸಭಾಂಗಣದಲ್ಲಿ ಶನಿವಾರ ನಡೆದ ಮಕ್ಕಳ ವಿಶೇಷ ಗ್ರಾಮ ಸಭೆ ‘ಮಕ್ಕಳ ಹಬ್ಬ-೨೦೨೪’ರಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.
ಮಕ್ಕಳ ವಿಶೇಷ ಗ್ರಾಮ ಸಭೆಯಲ್ಲಿ ಮಕ್ಕಳು ಮುಂದಿಟ್ಟ ಸಮಸ್ಯೆಗಳನ್ನು ಗ್ರಾಮ ಪಂಚಾಯತ್ ಮಟ್ಟದಲ್ಲಿ ಹಾಗೂ ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿ ಸ್ಪಂದಿಸಿ ಬಗೆಹರಿಸುವ ಕೆಲಸ ಮಾಡಲಾಗುತ್ತದೆ. ಕಂದಾಯ ಇಲಾಖೆಗೆ ಸಂಬಂಧಪಟ್ಟ ಸಮಸ್ಯೆಗಳ ಪರಿಹಾರಕ್ಕೆ ತಕ್ಷಣ ಕ್ರಮವಹಿಸಲಾಗುತ್ತದೆ ಎಂದು ಅವರು ಭರವಸೆ ನೀಡಿದರು.
ಕುಂದಾಪುರ ತಾಪಂ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ರಾವ್, ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯಕ್, ಮಹಿಳಾ ಮತ್ತು ಮಕ್ಕಳ ಇಲಾಖೆ ಸಿಡಿಪಿಒ ಅನುರಾಧಾ, ಅಕ್ಷರ ದಾಸೋಹ ಇಲಾಖೆ ಸಹಾಯಕ ನಿರ್ದೇಶಕ ಅರುಣ್ ಕುಮಾರ್ ಶೆಟ್ಟಿ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕುಸುಮಾಕರ ಶೆಟ್ಟಿ ಮಾತನಾಡಿದರು.
ಈ ಸಂದರ್ಭದಲ್ಲಿ ತಲ್ಲೂರು ಗ್ರಾಪಂ ಅಧ್ಯಕ್ಷ ಗಿರೀಶ್ ಎಸ್. ನಾಯ್ಕ್, ಉಪಾಧ್ಯಕ್ಷೆ ಚಂದ್ರಮತಿ ಹೆಗ್ಡೆ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಉದಯ್ ಕುಮಾರ್ ತಲ್ಲೂರು, ಸದಸ್ಯರಾದ ಸಂಜೀವ ದೇವಾಡಿಗ, ಕೃಷ್ಣ ಪೂಜಾರಿ, ರಾಧಾಕೃಷ್ಣ ಶೇರುಗಾರ್, ಚಂದ್ರ ದೇವಾಡಿಗ, ಶಿವರಾಮ ಕೊಠಾರಿ, ಅಕ್ಷಯ, ಸರೋಜಾ, ಸುಶೀಲಾ, ರುಕ್ಮಿಣಿ, ಲಕ್ಷ್ಮಿ, ಜಯಲಕ್ಷ್ಮಿ ಕೊಠಾರಿ, ಜುಡೀತಾ, ಸಮಾಜ ಕಲ್ಯಾಣ ಇಲಾಖೆಯ ರಮೇಶ್ ಕುಲಾಲ್, ಕುಂದಾಪುರ ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರೇಮಾನಂದ್, ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ಅಮಿತಾ, ಮೀನುಗಾರಿಕಾ ಇಲಾಖೆ ಸಹಾಯಕ ನಿರ್ದೇಶಕಿ ಸುಮಲತಾ, ಕುಂದಾಪುರ ನಗರ ಠಾಣೆ ಪಿಎಸ್‌ಐ ವಿನಯ್ ಎಂ. ಕೊರ್ಲಹಳ್ಳಿ, ಸಿಡಬ್ಲುಸಿ ಸಂಸ್ಥೆಯ ಶ್ರೀನಿವಾಸ ಗಾಣಿಗ ಅಲ್ಲದೇ ವಿವಿಧ ಇಲಾಖೆಯ ಅಧಿಕಾರಿಗಳಿದ್ದರು.
ಸಮಸ್ಯೆ ಪರಿಹಾರಕ್ಕೆ ಮಕ್ಕಳಿಂದ ಒತ್ತಾಯ
ಮೊದಲಿಗೆ ಕುಂದಾಪುರ ಭಾಗದ ಆಚರಣೆಯಾದ ದಿಮ್ಸಾಲ್ ಪದದ ಮೂಲಕ ವಿದ್ಯಾರ್ಥಿಗಳು ಸಮಸ್ಯೆ ಹೇಳಿಕೊಂಡರು. ನಂತರ ತಲ್ಲೂರು ಹಾಗೂ ಉಪ್ಪಿನಕುದ್ರು ಗ್ರಾಮ ವ್ಯಾಪ್ತಿಯ ಶಾಲೆಗಳ ಹತ್ತು ಹಲವು ಸಮಸ್ಯೆಗಳು ಕೇಳಿಬಂದವು. ಪ್ರಮುಖವಾಗಿ ಗ್ರಂಥಾಲಯ ರಚನೆ, ನಿರ್ವಹಣೆ, ಉಪಗ್ರಂಥಾಲಯ ನಿರ್ಮಾಣದ ಬಗ್ಗೆ ಹಲವು ವಿದ್ಯಾರ್ಥಿಗಳು ತಿಳಿಸಿದರು.
ಸ್ಮಾರ್ಟ್ ಕ್ಲಾಸ್, ಕಂಪ್ಯೂಟರ್ ತರಬೇತಿ ಕೊಠಡಿ, ಶಿಕ್ಷಕರ ನೇಮಕ, ಶಾಲಾ ಮೈದಾನದಲ್ಲಿ ಕುಡುಕರಿಂದ ಗಲೀಜು, ಬೀದಿ ನಾಯಿ ಕಾಟದ ಬಗ್ಗೆ ದೂರು ಗಳು ಕೇಳಿಬಂತು. ತಲ್ಲೂರು ಜಂಕ್ಷನ್‌ನಲ್ಲಿ ರಸ್ತೆ ದಾಟಲು ಕಷ್ಟವಾಗುತ್ತಿದ್ದು ವೇ ಬ್ರಿಡ್ಜ್ ರಚನೆಯಾಗಬೇಕು. ಉಪ್ಪಿನಕುದ್ರು ಶಾಲಾ ಆಟದ ಮೈದಾನದ ಬಳಿ ಅಪಾಯಕಾರಿ ಕೆರೆಯಿದ್ದು, ಅದರ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ಬೇಡಿಕೆ ಮುಂದಿರಿಸಿದರು.
ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ ಬಗ್ಗೆ ಶಾಲಾ ಮಟ್ಟದಲ್ಲಿ ಕಾರ್ಯಾಗಾರ ನಡೆಸಬೇಕು, ಮಕ್ಕಳ ಸಹಾಯವಾಣಿ ಬಗ್ಗೆ, ಹೆಣ್ಣುಮಕ್ಕಳಿಗೆ ಕರಾಟೆಯಂತಹ ರಕ್ಷಣಾ ತರಬೇತಿ ನೀಡಬೇಕೆಂದು ವಿದ್ಯಾರ್ಥಿನಿಯರು ಆಗ್ರಹಿಸಿದರು. ಗ್ರಾಪಂ ವ್ಯಾಪ್ತಿಯ ಶಾಲೆಯೊಂದರ ಐದನೇ ತರಗತಿ ವಿದ್ಯಾರ್ಥಿನಿಯು ‘ನನಗೆ ತಂದೆಯಿಲ್ಲ, ನನ್ನನ್ನು ಶಾಲೆಗೆ ಕಳಿಸಲು ಕೂಲಿ ಮಾಡುವ ತಾಯಿ ಕಷ್ಟಪಡುತ್ತಾರೆ. ವಿದ್ಯಾರ್ಥಿವೇತನವೂ ಸಿಕ್ಕಿಲ್ಲ’ ಎಂದು ನೋವು ತೋಡಿಕೊಂಡಳು.