ಸಂಸದ್ ಖೇಲ್ ಮಹೋತ್ಸವ್-2025 ನೋಂದಣಿಗೆ ಚಾಲನೆ
ಬೈಂದೂರು, ಸೆ.2: ಕೇಂದ್ರ ಸರಕಾರ ದೇಶದ ಕ್ರೀಡಾ ಕ್ಷೇತ್ರವನ್ನು ಮತ್ತೊಂದು ಮಹತ್ವದ ಘಟ್ಟಕ್ಕೆ ಕೊಂಡೊಯ್ಯಲು ದೇಶದ ಇತಿಹಾಸದಲ್ಲಿ ಮೊದಲ ಪ್ರಯತ್ನವಾಗಿ ದೇಶದಾದ್ಯಂತ ಜಾರಿಗೆ ತಂದಿರುವ ‘ಸಂಸದ್ ಖೇಲ್ ಮಹೋತ್ಸವ್-2025’ ನೋಂದಣಿ ಪ್ರಕ್ರಿಯೆಗೆ ಮಂಗಳವಾರ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಚಾಲನೆ ನೀಡಲಾಯಿತು.
ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ- 2030ರಲ್ಲಿ ಕಾಮನ್ ವೇಲ್ತ್ ಗೇಮ್ಸ್ ಹಾಗೂ 2036ರಲ್ಲಿ ಒಲಿಂಪಿಕ್ ಗೇಮ್ಸ್ ಆಯೋಜಿಸಲು ಈಗಾಗಲೇ ಪೂರ್ವ ತಯಾರಿ ಮಾಡಿಕೊಂಡಿದೆ. ಈಗಾಗಲೇ ’ಖೇಲೋ ಇಂಡಿಯಾ’ ಹಾಗೂ ’ಫಿಟ್ ಇಂಡಿಯಾ’ ಯೋಜನೆ ಜಾರಿಯ ಮೂಲಕ ದೇಶದಲ್ಲಿರುವ ಲಕ್ಷಾಂತರ ಕ್ರೀಡಾ ಪ್ರತಿಭೆಗಳನ್ನು ಮುನ್ನೆಲೆಗೆ ತಂದು ವಿಶ್ವದ ಬಲಿಷ್ಠ ರಾಷ್ಟ್ರಗಳ ಕ್ರೀಡಾ ಪಟುಗಳೊಂದಿಗೆ ಪೈಪೋಟಿ ನಡೆಸಿ ವಿಶ್ವ ಮಟ್ಟದಲ್ಲಿ ತಮ್ಮ ಪ್ರತಿಭೆ ಅನಾವರಣಗೊಳಿಸಿಕೊಂಡಿದ್ದಾರೆ ಎಂದರು.
ಇದರ ಮುಂದುವರೆದ ಭಾಗವಾಗಿ ದೇಶದ ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿರುವ ಇನ್ನೂ ಅನೇಕ ಕ್ರೀಡಾಪಟುಗಳನ್ನು ಮತ್ತು ಕ್ರೀಡಾ ಆಸಕ್ತರನ್ನು ಮುನ್ನೆಲೆಗೆ ತರಲು ಈ ಯೋಜನೆ ಮಹತ್ವದ ಮೈಲಿಗಲ್ಲಾಗುವ ಉದ್ದೇಶದಿಂದ ಜಾರಿಗೆ ತರಲಾಗಿದೆ. ಇದು ಕೇವಲ ದೇಶದ ಕ್ರೀಡಾ ಹಬ್ಬವಾಗದೆ ದೇಶದ ಹಿರಿಮೆ, ಗರಿಮೆ ವಿಶ್ವ ಭೂಪಟದಲ್ಲಿ ರಾರಾಜಿಸಲು ವೇದಿಕೆಯಾಗಿದೆ. ಈ ಮೂಲಕ ದೇಶದ ಕ್ರೀಡಾ ಕ್ಷೇತ್ರವನ್ನು ಜಾಗತಿಕ ಮಟ್ಟದಲ್ಲಿ ಛಾಪು ಮೂಡಿಸಲು ಮುನ್ನುಡಿ ಬರೆಯಲು ವಿಶೇಷ ವೇದಿಕೆಯಾಗಿದೆಂದು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.