ಸಂಗೊಳ್ಳಿ ರಾಯಣ್ಣ-2025 ಪುರಸ್ಕಾರಕ್ಕೆ ಮನೋವೈದ್ಯ ಡಾ.ಪಿ.ವಿ.ಭಂಡಾರಿ ಆಯ್ಕೆ
ಉಡುಪಿ, ಸೆ.13: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ದ ಕ, ಉಡುಪಿ ಜಿಲ್ಲೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಸಹಯೋಗದಲ್ಲಿ ನೀಡುತ್ತಿರುವ ಸಂಗೊಳ್ಳಿ ರಾಯಣ್ಣ ಪುರಸ್ಕಾರ- 2025ಕ್ಕೆ ಸಾಮಾಜಿಕ ಹೋರಾಟಗಾರ, ಚಿಂತಕ ಹಾಗೂ ನಾಡಿನ ಪ್ರಸಿದ್ಧ ಮನೋವೈದ್ಯ ಡಾ. ಪಿ.ವಿ.ಭಂಡಾರಿ ಅವರನ್ನು ಆಯ್ಕೆ ಮಾಡಲಾಗಿದೆ.
ಇದೇ ಸೆ.24ರ ಬುಧವಾರ ಸಂಜೆ 5:00ಗಂಟೆಗೆ ಉಡುಪಿ ಯಕ್ಷಗಾನ ಕಲಾರಂಗದ ಐವೈಸಿ ಹವಾ ನಿಯಂತ್ರಿತ ಸಭಾಂಗಣದಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಡಾ.ಭಂಡಾರಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾ ಗುವುದು ಎಂದು ಬಳಗದ ಅಧ್ಯಕ್ಷ ಸಿದ್ದಬಸಯ್ಯಸ್ವಾಮಿ ಚಿಕ್ಕಮಠ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಡಾ.ಪಿ.ವಿ.ಭಂಡಾರಿ ಅವರು ದೊಡ್ಡಣಗುಡ್ಡೆಯ ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯಲ್ಲಿ ತಜ್ಞ ಮನೋವೈದ್ಯ ಮತ್ತು ನಿರ್ದೇಶಕರಾಗಿದ್ದಾರೆ. ಸಾಮಾಜಿಕ ಹೋರಾಟಗಾರರಾಗಿ ಗುರುತಿಸಿಕೊಂಡಿರುವ ಡಾ. ಭಂಡಾರಿ ಹಲವು ಸಮಾಜ ಪರ ಹೋರಾಟದಲ್ಲಿ ಮುಂಚೂಣಿಯಲ್ಲಿ ತೊಡಗಿಸಿ ಕೊಂಡಿದ್ದಾರೆ. ಸ್ವಸ್ಥ ಸಮಾಜ ನಿರ್ಮಾಣದಲ್ಲೂ ಭಂಡಾರಿ ಬಹುದೊಡ್ಡ ಕೊಡುಗೆ ನೀಡಿದ್ದಾರೆ.
ಮನೋವೈದ್ಯರಾಗಿ ಸಾವಿರಾರು ಮಂದಿಗೆ ನೆಮ್ಮದಿಯ ಬದುಕನ್ನು ನೀಡಿದ ಹೆಗ್ಗಳಿಕೆ ಇವರಿಗಿದೆ. ಡಾ.ಭಂಡಾರಿ ಈಗಾಗಲೇ ಶ್ರೇಷ್ಠ ಮನೋವೈದ್ಯ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ಪುರಸ್ಕಾರ, ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಡಾ.ಎಸ್.ಎಸ್. ಜಯರಾಂ ಪ್ರಶಸ್ತಿ, ಸ್ಪಂದನ ಪ್ರಶಸ್ತಿ ಹೀಗೆ ಹತ್ತು ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಎಚ್.ಪಿ., ಸಂಗೊಳ್ಳಿ ರಾಯಣ್ಣ ಬಳಗದ ಗೌರವಾಧ್ಯಕ್ಷ ಜನಾರ್ದನ ಕೊಡವೂರು, ಕಾರ್ಯಾಧ್ಯಕ್ಷ ಕುಮಾರ್ ಪ್ರಸಾದ್ ಹಾಗೂ ಪ್ರಸನ್ನ ಹಿರೇಮಠ್ ಉಪಸ್ಥಿತರಿದ್ದರು.