×
Ad

ಜಾತಿ ವ್ಯವಸ್ಥೆ ಮೂಲಕ ದೇಶ ಕೊಳ್ಳೆ ಹೊಡೆಯಲು ತಂತ್ರ: ಉದಯ ತಲ್ಲೂರು

ಸಿಜೆಐ ಮೇಲೆ ಶೂ ಎಸೆತ ಖಂಡಿಸಿ ಭೀಮಘರ್ಜನೆಯಿಂದ ಪ್ರತಿಭಟನೆ

Update: 2025-10-16 19:11 IST

ಕುಂದಾಪುರ, ಅ.16: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಮೇಲೆ ವಕೀಲ ರಾಕೇಶ್ ಕಿಶೋರ್ ಶೂ ಎಸೆತ ಯತ್ನ ನಡೆಸಿದ ಘಟನೆಯನ್ನು ಖಂಡಿಸಿ ದಲಿತ ಸಂಘರ್ಷ ಸಮಿತಿ ಭೀಮ ಘರ್ಜನೆ ವತಿಯಿಂದ ಗುರುವಾರ ಕುಂದಾಪುರ ಶಾಸ್ತ್ರಿ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸಲಾಯಿತು.

ದಲಿತ ಸಂಘರ್ಷ ಸಮಿತಿ ಭೀಮ ಘರ್ಜನೆ ರಾಜ್ಯ ಸಂಚಾಲಕ ಉದಯ ಕುಮಾರ್ ತಲ್ಲೂರು ಮಾತನಾಡಿ, ಎಸ್ಸಿ-ಎಸ್ಟಿ, ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರು ಈ ದೇಶದ ಮೂಲ ನಿವಾಸಿಗಳು. ವಿದೇಶದಿಂದ ಬಂದ ಆರ್ಯನ್ನರು ದೇಶವನ್ನು ಒಡೆದು ಆಳಲು ವರ್ಣಬೇಧ ನೀತಿ, ಜಾತಿ ವ್ಯವಸ್ಥೆ ಮೂಲಕ ದೇಶ ಕೊಳ್ಳೆ ಹೊಡೆಯಲು ತಂತ್ರ ನಡೆಸಿದರು. ಒಡೆದು ಆಳುವ ನೀತಿಯ ವಿರುದ್ಧ ಸಾಮಾಜಿಕ ನ್ಯಾಯ ಕಲ್ಪನೆಯೊಂದಿಗೆ ಸಂವಿಧಾನ ಸ್ಥಾಪಿಸಲು ಮಹಾನ್ ನಾಯಕರ ಕೊಡುಗೆಯಿದೆ ಎಂದರು.

ಮನುವಾದಿಗಳಿಂದ ಕುಮ್ಮಕ್ಕಿನಿಂದ ಸಂವಿಧಾನದ ನೈಜ್ಯ ವ್ಯಾಖ್ಯಾನಕ್ಕೆ ಪೆಟ್ಟು ಬೀಳುತ್ತಿದೆ. ಜಾತಿ-ಧರ್ಮಗಳ ನಡುವೆ ವಿಷ ಬೀಜ ಬಿತ್ತಿ ಸಾಮರಸ್ಯ ಕದಡಲಾಗುತ್ತಿದೆ. ದಲಿತರು, ಹಿಂದುಳಿದ ವರ್ಗದವರ ಮೇಲಾಗುತ್ತಿರುವ ದೌರ್ಜನ್ಯದ ವಿರುದ್ಧ ಪ್ರತಿಪಕ್ಷಗಳು ಮಾತನಾಡದೆ ಇರುವುದು ನೋವಿನ ಸಂಗತಿ. ಇದರ ವಿರುದ್ಧ ಬೀದಿಗಿಳಿದು ಹೋರಾಟ ಮಾಡಬೇಕಾಗಿದೆ. ಅಸಮಾನತೆ ಪ್ರತಿಪಾದನೆ ಮಾಡದವರು ಈ ದೇಶದಲ್ಲಿರಲು ಯೋಗ್ಯರಲ್ಲ. ಅವರು ದೇಶ ಬಿಟ್ಟು ಹೋಗಲಿ ಎಂದು ಅವರು ತಿಳಿಸಿದರು.

ಸಾಮಾಜಿಕ ಹೋರಾಟಗಾರ ವೇದನಾಥ್ ಶೆಟ್ಟಿ ಬೈಂದೂರು ಮಾತನಾಡಿ, ಸನಾತನದ ಹೆಸರಿನಲ್ಲಿ ಆರೆಸ್ಸೆಸ್ ಹಾಗೂ ಬಿಜೆಪಿ ಮನುಸ್ಮೃತಿ ಆಚರಣೆ ಮಾಡುತ್ತಿರುವುದು ಸಣ್ಣ ವ್ಯಕ್ತಿತ್ವವನ್ನು ಪ್ರದರ್ಶಿಸುತ್ತಿದೆ. ಇಂತಹ ಮೈಲಿಗೆ ಮನಸ್ಥಿತಿ ದೇಶಕ್ಕೆ ಅಪಾಯ. ಮುಖ್ಯ ನ್ಯಾಯಮೂರ್ತಿಗಳ ಮೇಲೆ ಇಂತಹ ಘಟನೆ ದೇಶದಲ್ಲಿ ನಡೆದ ಅಮಾನ ವೀಯವಾಗಿದೆ. ಇದಕ್ಕೆ ಇತರೆ ಪಕ್ಷಗಳು ಪ್ರತಿರೋಧ ವ್ಯಕ್ತಪಡಿಸದಿರುವುದು ದುರಂತ. ನಮ್ಮ ಹಕ್ಕುಗಳಿಗಾಗಿ ನಾವೇ ಹೊರಾಡಬೇಕಿರುವುದು ಅನಿವಾರ್ಯವಾಗಿದೆ. ಅಂಬೇಡ್ಕರ್ ನೀಡಿದ ಸಂವಿಧಾನ ಅರಿತು ಸಾಮಾಜಿಕ ಚಿಂತನೆಯೊಂದಿಗೆ ಬದುಕಲು ಶಿಕ್ಷಣ ಪಡೆಯುವುದು ಇಂದಿನ ಯುವಜನತೆಗೆ ಅನಿವಾರ್ಯವಾಗಿದೆ ಎಂದರು.

ಆರೆಸ್ಸೆಸ್ ಮುಖಂಡ ಮೋಹನ್ ಭಾಗವತ್ ಹಾಗೂ ವಕೀಲ ರಾಕೇಶ್ ಕಿಶೋರ್ ಪ್ರತಿಕೃತಿ ದಹಿಸಿ ಪ್ರತಿಭಟನಾ ಕಾರರು ಆಕ್ರೋಶ ವ್ಯಕ್ತಪಡಿಸಿದರು. ದಸಂಸ ಭೀಮ ಘರ್ಜನೆಯ ಜಿಲ್ಲಾ ಸಂಚಾಲಕ ಚಂದ್ರ ಅಲ್ತಾರ್, ಜಿಲ್ಲಾ ಸಂಘಟನಾ ಸಂಚಾಲಕ ರಾಘು ಶಿರೂರು, ಶಶಿ ಬಳ್ಕೂರು, ವಿಠಲ ಸಾಲಿಕೇರಿ, ಸುಧಾಕರ್ ಸೂರ್ಗೊಳಿ, ಆನಂದ್ ಕಾರೂರು, ಸಂಜೀವ್ ಪಳ್ಳಿ, ಮಂಜುನಾಥ್ ಗುಡ್ಡೆಯಂಗಡಿ., ವಿಜಯ್ ಕೆ.ಎಸ್., ಅಶೋಕ್ ಕರ್ಕುಂಜಿ, ದುರ್ಗಿ ನಕ್ರೆ, ಜಯಂತಿ, ಸವಿತಾ ನಕ್ರೆ, ಸಾಧು ಗುಡ್ಡೆಯಂಗಡಿ, ರಾಘು ಹೆರಂಜಾಲು, ಗೋಪಾಲ ಮೀಯಾರು, ಚಂದ್ರಮ ತಲ್ಲೂರು, ಸಂದೇಶ್ ಬ್ರಹ್ಮಾವರ, ಸಂದೇಶ್ ನಾಡಾ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News