ಉಡುಪಿ: ಆ.25ರಂದು ಅಮ್ಮೆಂಬಳ ಸಾಹಿತ್ಯ ಪ್ರಶಸ್ತಿ ಪ್ರದಾನ
ಉಡುಪಿ, ಅ.23: ಮಂಗಳೂರಿನ ಅಮ್ಮೆಂಬಳ ಶಂಕರನಾರಾಯಣ ನಾವಡ ಸಾಹಿತ್ಯ ಪ್ರತಿಷ್ಠಾನ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕಗಳ ಜಂಟಿ ಆಶ್ರಯದಲ್ಲಿ ಜೀವಮಾನ ಸಾಧನೆಗಾಗಿ ನೀಡಲಾಗುವ ಪ್ರತಿಷ್ಠಿತ ಅಮ್ಮೆಂಬಳ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭವು ಆ.25ರ ರವಿವಾರ ಸಂಜೆ 4:30ಕ್ಕೆ ಉಡುಪಿ ಅಂಬಲಪಾಡಿಯ ಶ್ಯಾಮಿಲಿ ಸಭಾಂಗಣದಲ್ಲಿ ಜರುಗಲಿದೆ.
ಈ ಬಾರಿ ಮೂವರು ಹಿರಿಯ ಸಾಧಕರು ಪ್ರಶಸ್ತಿ ಪಡೆಯಲಿದ್ದಾರೆ. 2024ನೇ ಸಾಲಿನ ಪ್ರಶಸ್ತಿಯನ್ನು ಕನ್ನಡ, ಇಂಗ್ಲಿಷ್ ಮತ್ತು ಜರ್ಮನ್ ಭಾಷೆಗಳ ನಡುವೆ ಮಹಾಸೇತುವಾಗಿ ಕಾರ್ಯನಿರ್ವಹಿಸಿ, ಹಳಗನ್ನಡ ಕಾವ್ಯ, ಜನಪದ ಪುರಾಣ ಹಾಗೂ ಕನ್ನಡದ ಶ್ರೇಷ್ಠ ಕಾದಂಬರಿಗಳನ್ನು ಇಂಗ್ಲಿಷ್ಗೆ ಅನುವಾದಿಸಿರುವ ಉಡುಪಿಯ ಡಾ. ಎನ್. ತಿರುಮಲೇಶ್ವರ ಭಟ್, 2025ನೇ ಸಾಲಿಗೆ ನಾಲ್ಕು ದಶಕಗಳ ಕಾಲ ಸಂಸ್ಕೃತ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ವಿದ್ವಾಂಸ ಡಾ. ಎನ್. ಲಕ್ಷ್ಮೀನಾರಾಯಣ ಭಟ್ಟ ಹಾಗೂ 2026ನೇ ಸಾಲಿಗೆ ಪ್ರಮುಖ ವಿಮರ್ಶಕ, ಸಂಶೋಧಕ, ಚಿಂತಕ ಡಾ. ಅಜಕ್ಕಳ ಗಿರೀಶ ಭಟ್ಟ ಅವರು ಪ್ರಶಸ್ತಿಗೆ ಭಾಜನರಾಗಲಿದ್ದಾರೆ.
ಪ್ರಶಸ್ತಿಯು 10,000ರೂ. ಗೌರವಧನದೊಂದಿಗೆ ಪ್ರಶಸ್ತಿ ಪತ್ರ ಮತ್ತು ಫಲಕ ಒಳಗೊಂಡಿರುತ್ತದೆ. ಕಾರ್ಯಕ್ರಮಕ್ಕೆ ಮುರಲಿ ಕಡೆಕಾರು ಚಾಲನೆ ನೀಡಿದರೆ, ಪ್ರೊ. ಎ.ವಿ. ನಾವಡ ಪ್ರಾಸ್ತಾವಿಕ ಮಾತನಾಡಲಿದ್ದಾರೆ. ಸುರತ್ಕಲ್ ಎನ್ಐಟಿಕೆಯ ಮಾಜಿ ನಿರ್ದೇಶಕ ಡಾ. ಎಚ್. ಸುಧಾಕರ ನಾಯಕ್ ಪ್ರಶಸ್ತಿ ಪ್ರದಾನ ಮಾಡಲಿದ್ದು, ಎಂ.ಜಿ.ಎಂ. ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಪ್ರೊ. ಎಂ.ಎಲ್. ಸಾಮಗ ಅಭಿನಂದನಾ ನುಡಿಗಳನ್ನಾಡಲಿದ್ದಾರೆ. ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಉಡುಪಿ ವಿಶ್ವನಾಥ ಶೆಣೈ ಅಧ್ಯಕ್ಷತೆ ವಹಿಸಲಿದ್ದಾರೆ.
ಉಡುಪಿಯ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಸುಹಾಸಂ ಉಡುಪಿ ಸಂಸ್ಥೆಗಳ ಸಹಯೋಗದೊಂದಿಗೆ ಈ ಕಾರ್ಯಕ್ರಮ ನಡೆಯಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.