ಆನ್‌ಲೈನ್ ಲಾಟರಿ ಗೆದ್ದಿರುವುದಾಗಿ ನಂಬಿಸಿ 27 ಲಕ್ಷ ರೂ. ವಂಚನೆ: ಪ್ರಕರಣ ದಾಖಲು
Update: 2026-08-23 20:58 IST
ಉಡುಪಿ, ಆ.23: ಆನ್‌ಲೈನ್ ಲಾಟರಿ ಗೆದ್ದಿರುವುದಾಗಿ ನಂಬಿಸಿ ಮಹಿಳೆಯೊಬ್ಬರಿಗೆ ಲಕ್ಷಾಂತರ ರೂ. ವಂಚನೆ ಎಸಗಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜುಲಿಯಾನ ಎಂಬವರು ಫೇಸ್‌ಬುಕ್‌ನಲ್ಲಿ ಆನ್‌ಲೈನ್ ಲಾಟರಿಯ ಜಾಹೀರಾತನ್ನು ನೋಡಿದ್ದು, ಅದರಲಿದ್ದ ಲಿಂಕ್‌ನ್ನು ಕ್ಲಿಕ್ ಮಾಡಿ ಲಾಟರಿ ಟಿಕೆಟ್ ಖರೀದಿಸಿದ್ದರು. ನಂತರ ಅಪರಿಚಿತರು ಜುಲಿಯಾನಗೆ ಲಾಟರಿ ಬಹುಮಾನ ಬಂದಿರುವುದಾಗಿ ನಂಬಿಸಿ ಬಹುಮಾನ ಪಡೆಯಬೇಕಾದಲ್ಲಿ ಪ್ರೊಸೆಸಿಂಗ್ ಚಾರ್ಜ್, ಶಿಪ್ಪಿಂಗ್ ಚಾರ್ಜ್, ಫೊರೆಕ್ಸ್ ಚಾರ್ಜ್, ಹ್ಯಾಂಡಲಿಂಗ್ ಶುಲ್ಕ ಪಾವತಿಸುವಂತೆ ತಿಳಿಸಿದ್ದರು.
ಅದನ್ನು ನಂಬಿದ ಜುಲಿಯಾನ, ಅಪರಿಚಿತರು ತಿಳಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಎ.24ರಿಂದ ಜು.31ರವರೆಗೆ ಒಟ್ಟು 27,06,862ರೂ. ಹಣವನ್ನು ವರ್ಗಾಯಿಸಿದ್ದರು. ಆದರೆ ಆರೋಪಿಗಳು ಯಾವುದೇ ಬಹುಮಾನ ನೀಡದೆ ಜುಲಿಯಾನ ಅವರಿಗೆ ವಂಚಿಸಿರುವುದಾಗಿ ದೂರಲಾಗಿದೆ.