ವಿಶ್ವದಾಖಲೆಗಾಗಿ 25 ಗಂಟೆಗಳ ನಿರಂತರ ದಾಸವಾಣಿ ಗಾಯನಕ್ಕೆ ಚಾಲನೆ
ಉಡುಪಿ, ಆ.23: ಸಂಗೀತ ವಿದುಷಿ ಸಂಗೀತ ಬಾಲಚಂದ್ರ ಸತತ 25 ಗಂಟೆಗಳ ಕಾಲ ನಿರಂತರವಾಗಿ ಹರಿದಾಸರ ಪದಗಳು ಹಾಗೂ ಕೀರ್ತನೆಗಳನ್ನು ಗಾಯನ ಮಾಡುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ನೂತನ ವಿಶ್ವದಾಖಲೆ ನಿರ್ಮಿಸುವ ಪ್ರಯತ್ನಕ್ಕೆ ರವಿವಾರ ಚಾಲನೆ ನೀಡಲಾಯಿತು.
ಉಡುಪಿ ಶ್ರೀಕೃಷ್ಣ ಮಠದ ಗೀತಾ ಮಂದಿರದ ನೃಸಿಂಹ ಸಭಾಭವನದಲ್ಲಿ ಈ ವಿಶಿಷ್ಟ ಕಾರ್ಯಕ್ರಮವನ್ನು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನ ಏಷ್ಯಾ ಹೆಡ್ ಡಾ.ಮನೀಷ್ ವಿಶ್ನೋಯಿ, ಗೋವಾ ರಾಜ್ಯದ ಜಿಎಸ್‌ಟಿ ಆಯುಕ್ತ ವಿಠೋಬ ಶೆಟ್ಟಿ, ಕಾರ್ಯಕ್ರಮದ ಪ್ರಾಯೋಜಕ ಭೀಮಾ ಜುವೆಲರ್ಸ್‌ನ ರಾಘವೇಂದ್ರ ಭಟ್ ಭಾಗವಹಿಸಿದ್ದರು.
ಮಠದ ದಿವಾನ ನಾಗರಾಜ ಆಚಾರ್ಯ, ಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ಮೊದಲಾದ ವರು ಉಪಸ್ಥಿತರಿದ್ದರು. ಮಠದ ಕಲಾ ಕಾರ್ಯದರ್ಶಿ ಕೆ.ವಿ.ರಮಣ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಆ.23ರಂದು ಬೆಳಗ್ಗೆ 6.30ಕ್ಕೆ ಆರಂಭಗೊಂಡ ಈ ವಿಶ್ವದಾಖಲೆ ಪ್ರಯತ್ನ ನಿರಂತರ 25ಗಂಟೆಗಳ ಕಾಲ ದಾಸರ ಪದ ಗಾಯನವನ್ನು ಹಾಡಿ, ಆ.24ರಂದು ಬೆಳಗ್ಗೆ 7.30ಕ್ಕೆ ಸಮಾಪ್ತಿಗೊಳ್ಳಲಿದೆ. ಸಂಪೂರ್ಣವಾಗಿ ಹೊಸದಾಗಿ ಸ್ವರ ಸಂಯೋಜನೆ ಮಾಡಲಾದ 250 ದಾಸರ ಪದಗಳು ಇಲ್ಲಿ ಪ್ರಸ್ತುತಿಗೊಳ್ಳಲಿದೆ.
ವಿದುಷಿ ಸಂಗೀತ ಬಾಲಚಂದ್ರ ಅವರ ಈ ಮಹತ್ವದ ಸಂಗೀತ ಸಾಧನೆಗೆ ಹಲವು ಪ್ರತಿಭಾವಂತ ವಾದ್ಯ ಕಲಾವಿ ದರು ಸಹಕಾರ ನೀಡುತ್ತಿದ್ದು, ಕೀ ಬೋರ್ಡನಲ್ಲಿ ಗುರುರಾಜ್, ಮೊಗಿ ಗುರುರಾಜ್ ಹಾಗೂ ರಜ್ಯಾ ಕರಿವೆಲ್ಲೂರ್, ರಿದಮ್ ಪ್ಯಾಡ್‌ನಲ್ಲಿ ಪ್ರಭಾಕರ ಅಮ್ಮಿಂಗೋಡ್ ಹಾಗೂ ವಾಮನ ಕೆ., ತಬಲಾದಲ್ಲಿ ದೀಕ್ಷಿತ್ ಕೊಡಂಚಾ ಹಾಗೂ ದೀಪಕ್ ರಾಜ್ ಉಲ್ಲಾಸು, ಕೊಳಲು ವಾದನದಲ್ಲಿ ಸಂತೋಷ್ ವಿಟ್ಟಲ್ ಸಹಕಾರ ನೀಡು ತ್ತಿದ್ದಾರೆ.