ಉಡುಪಿ: ಜು.31ರಿಂದ ಆ.2ವರೆಗೆ ಸ್ವದೇಶಿ ಖಾದ್ಯ ಮೇಳ
ಉಡುಪಿ, ಜು.27: ಸ್ವದೇಶಿ ಉತ್ಪನ್ನಗಳನ್ನು ಬೆಂಬಲಿಸಿ, ಸ್ಥಳೀಯ ಉದ್ಯಮಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸ್ವದೇಶಿ ಖಾದ್ಯ ಮೇಳವೊಂದು (ನಮ್ಮ ನೆಲದ ರುಚಿ ನಮ್ಮವರ ಉತ್ಪನ್ನಗಳು) ಅಮ್ಮಣ್ಣಿ ರಾಮಣ್ಣ ಶೆಟ್ಟಿ ಅಡಿಟೋರಿಯಂನಲ್ಲಿ ಜು.31ರಿಂದ ಆ.2ರವರೆಗೆ ನಡೆಯಲಿದೆ ಎಂದು ಸಂಘಟಕ ಉದ್ಯಮಿ ಕೆ. ಕೃಷ್ಣಮೂರ್ತಿ ಆಚಾರ್ಯ ತಿಳಿಸಿದ್ದಾರೆ.
ಸೋಮವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಶಕ್ತಿ ಈವೆಂಟ್ಸ್ ಸಹಯೋಗದಲ್ಲಿ ನಡೆಯುವ ಸ್ವದೇಶಿ ಖಾದ್ಯ ಮೇಳದ ಉದ್ಘಾಟನೆಯು ಆ.1ರಂದು ಬೆಳಗ್ಗೆ 10ಗಂಟೆಗೆ ಊರ ಹಿರಿಯರಿಂದ ನಡೆಯಲಿದ್ದು ರಾಜ್ಯ ಆರೋಗ್ಯ ಸಚಿವ ಯು.ಟಿ.ಖಾದರ್ ಇದರಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ತಿಂಡಿ ತಿನಸು, ಕರಕುಶಲ ವಸ್ತು, ಖಾದಿ ಬಟ್ಟೆ, ಗೃಹೋಪಯೋಗಿ ವಸ್ತು, ಮಸಾಲೆ ಪದಾರ್ಥಗಳ ಸಹಿತ 100ಕ್ಕೂ ಅಧಿಕ ಮಳಿಗೆಗಳು ಮೇಳದಲ್ಲಿರ ಲಿದ್ದು 150ಕ್ಕೂ ಅಧಿಕ ಬಗೆಯ ತಿಂಡಿ ತಿನಸುಗಳ ತಯಾರಿ, ಪ್ರದರ್ಶನ, ಮಾರಾಟ ನಡೆಯಲಿದೆ. ಇದಕ್ಕೆ ಉಚಿತ ಪ್ರವೇಶವಿದ್ದು, ಬೆಳಗ್ಗೆ 10 ರಿಂದ ರಾತ್ರಿ 10ರ ತನಕ ಖಾದ್ಯ ಮೇಳಕ್ಕೆ ಪ್ರವೇಶಾವಕಾಶವಿದೆ ಎಂದು ತಿಳಿಸಿದರು.
ಸ್ಥಳೀಯ ಗೃಹ ಉದ್ಯಮಿಗಳು, ಮಹಿಳೆಯರು ತಯಾರಿಸುವ ಮಸಾಲೆ ಸಹಿತ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿ ಸುವ ಗುರಿ ಹೊಂದಲಾಗಿದೆ. ಸ್ಥಳದಲ್ಲೇ ಹತ್ತಾರು ಆಹಾರಗಳ ತಯಾರಿ, ಸಾವಯವ ಆಹಾರ, ಕರಕುಶಲ ವಸ್ತು, ಫ್ಯಾನ್ಸಿ ಐಟಂ, ಗೃಹೋಪಯೋಗಿ ಸಾಮಗ್ರಿಗಳಿರಲಿವೆ ಎಂದರು.
ನೆರೆಯ ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಿಂದ ಸಾವಿರಾರು ಜನರು ಮೇಳದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದ್ದು ಸ್ಥಳೀಯ ಉದ್ಯಮಿಗಳು, ಸಣ್ಣ ವ್ಯಾಪಾರಿಗಳಿಗೆ ತಮ್ಮ ಉತ್ಪನ್ನ ಪರಿಚಯಿಸಿ, ವ್ಯಾಪಾರ ವಿಸ್ತರಣೆಗೆ ಉತ್ತಮ ವೇದಿಕೆ ಇದಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕೃಷಿಕ ಸಂಘದ ಶ್ರೀನಿವಾಸ ಬಲ್ಲಾಳ್, ರವೀಂದ್ರ ಗುಜ್ಜರಬೆಟ್ಟು, ಅಮೃತಾ ಕೃಷ್ಣಮೂರ್ತಿ, ಚರಣ್‌ರಾಜ್ ಬಂಗೇರ, ಸುನಿಲ್ ಕುಮಾರ್ ಕಪ್ಪೆಟ್ಟು, ಗುರುಪ್ರಸಾದ್, ಸಂತೋಷ್, ದಯಾನಂದ ಕಪ್ಪೆಟ್ಟು, ಹರೀಶ್ ಪೂಜಾರಿ ಉಪಸ್ಥಿತರಿದ್ದರು.