ಬಸ್‌ಗಳಲ್ಲಿ ನಿಯಮ ಉಲ್ಲಂಘನೆ; ಉಡುಪಿ ಜಿಲ್ಲೆಯಲ್ಲಿ ನಡೆದಿದೆ ಸ್ಪೆಶಲ್ ಡ್ರೈವ್!
ಆರ್‌ಟಿಒ, ಕುಂದಾಪುರ ಟ್ರಾಫಿಕ್ ಪೊಲೀಸರಿಂದ ಜಂಟಿ ಕಾರ್ಯಾಚರಣೆ
ಕುಂದಾಪುರ, ಜು.27: ಬಸ್ಸುಗಳಲ್ಲಿ ಬಾಗಿಲುಗಳ ಅಳವಡಿಕೆ ಮತ್ತು ಇರುವ ಬಾಗಿಲುಗಳ ಸರಿಪಡಿಸುವಿಕೆ, ಹೆಚ್ಚುವರಿ ಪ್ರಯಾಣಿಕರನ್ನು ತುಂಬಿಸುತ್ತಿರುವ ಬಗ್ಗೆ ಬರುತ್ತಿರುವ ದೂರು ಸಹಿತ ಸಂಚಾರಿ ನಿಯಮ ಉಲ್ಲಂಘನೆ ಯಾಗುತ್ತಿರುವ ಬಗ್ಗೆ ಅಗತ್ಯ ಕ್ರಮಕೈಗೊಳ್ಳುವ ಸಲುವಾಗಿ ಸೋಮವಾರ ಸಂಜೆ ಉಡುಪಿಯ ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿಗಳು ಹಾಗೂ ಕುಂದಾಪುರದ ಸಂಚಾರ ಠಾಣಾ ಪೊಲೀಸರಿಂದ ವಿಶೇಷ ಕಾರ್ಯಾಚರಣೆ ನಡೆಯಿತು.
ಉಡುಪಿಯ ಪ್ರಾದೇಶಿಕ ಸಾರಿಗೆ ಇಲಾಖೆಯ ಮೋಟಾರು ವಾಹನ ನಿರೀಕ್ಷಕರಾದ ಮಾರುತಿ ನಾಯ್ಕ್, ಆಶಾ, ಕುಂದಾಪುರ ಸಂಚಾರ ಠಾಣಾ ಪಿಎಸ್‌ಐ ಅನೂಪ್ ನಾಯಕ್ ಹಾಗೂ ಸಿಬಂದಿಗಳು ಈ ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ.
ಪ್ರಯಾಣಿಕರು ಬಸ್ಸು ಹತ್ತುವ (ಫುಟ್‌ಬೋರ್ಡ್) ಸ್ಥಳದಲ್ಲಿ ನಿಲ್ಲುವ ಬಗ್ಗೆ, ಬಾಗಿಲು ಹಾಕದೇ ಚಾಲನೆ ಮಾಡುತ್ತಿರುವ ಕುರಿತಂತೆ ದೂರುಗಳು ಬಂದ ಹಿನ್ನೆಲೆಯಲ್ಲಿ ಕುಂದಾಪುರ ಸಂಚಾರ ಠಾಣಾ ಪೊಲೀಸರು ಬಸ್ಸುಗಳನ್ನು ಪತ್ತೆ ಮಾಡಿ ದಂಡ ವಿಧಿಸಿದ್ದಾರೆ.
ಗಂಭೀರ ಪ್ರಕರಣಗಳೆರಡರಲ್ಲಿ ಆರ್‌ಟಿಒ ಅಧಿಕಾರಿಗಳು ಸಂಬಂದಪಟ್ಟ ವಾಹನಗಳಿಗೆ ತನಿಖಾ ವರದಿಯ ನೋಟಿಸ್ ನೀಡಿದ್ದಾರೆ.ಅಲ್ಲದೆ ಕೆಲವೊಂದು ಅಗತ್ಯ ನಿಯಮಗಳನ್ನು ಪಾಲಿಸುವಂತೆ ಪೊಲೀಸರು ಚಾಲಕರಿಗೆ, ನಿರ್ವಾಹಕ ರಿಗೆ ಸೂಚನೆಗಳನ್ನು ಕೂಡ ನೀಡಿದ್ದಾರೆ.
ಜಿಲ್ಲಾದ್ಯಂತ ನಿರಂತರ ಕಾರ್ಯಾಚರಣೆ
ಪ್ರಯಾಣಿಕರ ಸುರಕ್ಷತೆ, ಶಾಲಾ ಮಕ್ಕಳ ಹಿತದೃಷ್ಟಿಯಿಂದ ಈ ವಿಶೇಷ ಅಭಿಯಾನವನ್ನು ನಿರಂತರವಾಗಿ ನಡೆಸಲಾಗುತ್ತಿದೆ. ಬಸ್‌ಗಳು, ಶಾಲಾ ವಾಹನಗಳನ್ನು ತಪಾಸಣೆ ನಡೆಸಿ, ಕಾನೂನು ಉಲ್ಲಂಘಿಸಿದ್ದು ಕಂಡು ಬಂದವರಿಗೆ ನೋಟಿಸ್ ಸಹ ನೀಡಲಾಗಿದೆ ಕೆಲವೊಂದು ವಾಹನಗಳಿಗೆ ಸಂಚಾರ ಪೊಲೀಸರು ದಂಡವನ್ನೂ ವಿಧಿಸಿದ್ದಾರೆ. ಜಿಲ್ಲೆಯಾದ್ಯಂತ ಈ ಅಭಿಯಾನ ಮುಂದವರಿಯಲಿದೆ ಎಂದು ಉಡುಪಿ ಪ್ರಾದೇಶಿಕ ಸಾರಿಗೆ ಇಲಾಖೆಯ ಮೋಟಾರು ವಾಹನ ನಿರೀಕ್ಷಕರಾದ ಮಾರುತಿ ನಾಯ್ಕ್ ತಿಳಿಸಿದ್ದಾರೆ.
ಕುಂದಾಪುರದ ವಿವಿಧೆಡೆ ಕಾರ್ಯಾಚರಣೆ
ಬೆಳಿಗ್ಗೆ ಹಾಗೂ ಸಂಜೆ ವೇಳೆಯಲ್ಲಿ ತಾಲೂಕಿನ ವಿವಿದೆಡೆ ಸಂಚರಿಸುವ ಬಸ್ಸುಗಳಲ್ಲಿ ಹೆಚ್ಚುವರಿ ಪ್ರಯಾಣಿಕರನ್ನು ಹತ್ತಿಸುವುದು, ಫುಟ್‌ಬೋರ್ಡ್‌ನಲ್ಲಿ ನೇತಾಡುವುದು, ವೇಗದ ಚಾಲನೆ, ಸಮವಸ್ತ್ರ ಧರಿಸದೇ ಇರುವುದು, ದಾಖಲೆ ಗಳಿಲ್ಲದಿರುವುದು, ವಾಹನಗಳಲ್ಲಿ ಬಾಗಿಲುಗಳ ಅಳವಡಿಕೆ ಹಾಗೂ ಸುಸ್ಥಿತಿಯಲ್ಲಿರದಿರುವುದು ಕಂಡುಬಂದ ಹಿನ್ನೆಲೆ ಹಾಗೂ ಸಾರ್ವಜನಿಕರ ದೂರುಗಳು ಬಂದ ಹಿನ್ನೆಲೆಯಲ್ಲಿ ಸೋಮವಾರ ಹಲವಾರು ಬಸ್ಸುಗಳಿಗೆ ದಂಡ ವಿಧಿಸಲಾ ಗಿದೆ ಎಂದು ಕುಂದಾಪುರ ಟ್ರಾಫಿಕ್ ಠಾಣೆ ಪಿಎಸ್‌ಐ ಅನೂಪ್ ನಾಯಕ್ ಮಾಹಿತಿ ನೀಡಿದ್ದಾರೆ.