×
Ad

ಕೋಟ ಹೋಬಳಿ: 32 ಗ್ರಾಮಗಳು ಉಡುಪಿ ನ್ಯಾಯಾಲಯ ವ್ಯಾಪ್ತಿಗೆ

Update: 2024-02-29 19:17 IST

ಉಡುಪಿ, ಫೆ. 29: ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ಬ್ರಹ್ಮಾವರ ತಾಲೂಕು ಕೋಟ ಹೋಬಳಿಯ 32 ಗ್ರಾಮಗಳನ್ನು ಉಡುಪಿ ನ್ಯಾಯಾಲಯಗಳ ವ್ಯಾಪ್ತಿಗೆ ಒಳಪಡಿಸಿ ಕರ್ನಾಟಕ ಸರಕಾರ ಅಧಿಸೂಚನೆ ಹೊರಡಿಸಿದೆ ಎಂದು ಉಡುಪಿ ವಕೀಲರ ಸ್‌ಘದ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್ ತಿಳಿಸಿದ್ದಾರೆ.

ಬ್ರಹ್ಮಾವರದಲ್ಲಿ ಇತ್ತೀಚೆಗೆ ಆರಂಭಗೊಂಡ ಸಂಚಾರಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ವ್ಯಾಪ್ತಿಗೆ ಬ್ರಹ್ಮಾವರ ಹೋಬಳಿಯ 19 ಹಾಗೂ ಕೋಟ ಹೋಬಳಿಯ 32 ಗ್ರಾಮಗಳನ್ನೊಳಗೊಂಡ ಇಡೀ ಬ್ರಹ್ಮಾವರ ತಾಲೂಕು ಸೇರ್ಪಡೆಯಾಗಿತ್ತು.

ಆದರೆ, ಕೋಟ ಹೋಬಳಿಯ 32 ಗ್ರಾಮಗಳ ಮೂಲದಾವೆ ಹಾಗೂ ಮೇಲ್ಮನವಿ ವ್ಯಾಪ್ತಿಯು ಕುಂದಾಪುರದ ಹಿರಿಯ ಸಿವಿಲ್ ನ್ಯಾಯಾಲಯ ಮತ್ತು ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ವ್ಯಾಪ್ತಿಯಲ್ಲಿತ್ತು. ಅದೇ ರೀತಿ ಬ್ರಹ್ಮಾವರ ಹೋಬಳಿಯ 19 ಗ್ರಾಮಗಳ ಮೂಲದಾವೆ ಹಾಗೂ ಮೇಲ್ಮನವಿ ಮಾತ್ರ ಉಡುಪಿಯ ಹಿರಿಯ ಸಿವಿಲ್ ನ್ಯಾಯಾಲಯ ಮತ್ತು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ವ್ಯಾಪ್ತಿಗೆ ಒಳಪಟ್ಟಿತ್ತು.

ಇದೀಗ ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ಕುಂದಾಪುರದ ಹಿರಿಯ ಸಿವಿಲ್ ನ್ಯಾಯಾಲಯ ಮತ್ತು ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ವ್ಯಾಪ್ತಿಯಲ್ಲಿದ್ದ ಕೋಟ ಹೋಬಳಿಗೆ ಸಂಬಂಧಿಸಿದ ಮಣೂರು, ಗಿಳಿಯಾರು, ಬನ್ನಾಡಿ, ಚಿತ್ರಪಾಡಿ, ಕೋಟತಟ್ಟು ಪಾರಂಪಳ್ಳಿ, ಕಾರ್ಕಡ, ಗುಂಡ್ಮಿ, ಕೋಡಿ, ಐರೋಡಿ, ಬಾಳೆಕುದ್ರು, ಪಾಂಡೇಶ್ವರ, ಮೂಡಹಡು, ಹೊಸಾಳ, ಕಚ್ಚೂರು, ಹನೆಹಳ್ಳಿ, ಹೆರಾಡಿ, ಕಾವಾಡಿ, ವಡ್ಡರ್ಸೆ, ಅಚ್ಚಾಡಿ, ಶಿರಿಯಾರ, ಯಡ್ತಾಡಿ, ನಡೂರು, ಕಾಡೂರು, ಹೆಗ್ಗುಂಜೆ, ಬಿಲ್ಲಾಡಿ, ಕಕ್ಕುಂಜೆ, ವಂಡಾರು, ಆವರ್ಸೆ, ಹಿಲಿಯಾಣ, ಶಿರೂರು ಮತ್ತು ನಂಚಾರು ಈ 32 ಗ್ರಾಮಗಳ ಮೂಲದಾವೆ ಹಾಗೂ ಮೇಲ್ಮನವಿಯನ್ನು ಕರ್ನಾಟಕ ಉಚ್ಛ ನ್ಯಾಯಾಲಯದ ಶಿಫಾರಸಿನ ಮೇರೆಗೆ ಉಡುಪಿಯ ಹಿರಿಯ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯ ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ವ್ಯಾಪ್ತಿಗೆ ಒಳಪಡಿಸಿ ರಾಜ್ಯ ಸರಕಾರ ಫೆ.27ರಂದು ಅಧಿಸೂಚನೆ ಹೊರಡಿಸಿದೆ.

ಇದರಿಂದಾಗಿ ಇಡೀ ಬ್ರಹ್ಮಾವರ ತಾಲೂಕಿಗೆ ಸಂಬಂಧಿಸಿದ ಮೂಲದಾವೆ ಹಾಗೂ ಮೇಲ್ಮನವಿಗಳು ಉಡುಪಿಯ ನ್ಯಾಯಾಲಯಗಳ ವ್ಯಾಪ್ತಿಗೆ ಒಳಪಟ್ಟಂತಾಗಿದೆ ಎಂದು ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News