ಅಕ್ರಮ ಸಾಗಾಟ: 3.84 ಲಕ್ಷ ರೂ. ಮೌಲ್ಯದ ಅನ್ನಭಾಗ್ಯದ ಅಕ್ಕಿ ವಶ
ಕೋಟ, ಜು.28: ಲಾರಿಯಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಸರಕಾರದ ಉಚಿತ ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದ ಲಕ್ಷಾಂತರ ರೂ. ಮೌಲ್ಯದ ಅಕ್ಕಿಯನ್ನು ಅಧಿಕಾರಿಗಳು ಹಾಗೂ ಪೊಲೀಸರು ಜು.28ರಂದು ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿದ್ದಾರೆ.
ಕುಮಟಾದ ನಾಡ ಮಸ್ಕಿರಿಯ ಶ್ರೀ ಗಣೇಶ್ ರೈಸ್ ಇಂಡಸ್ಟ್ರೀಸ್ ಮಾಲಕ ನಾಗರಾಜ್ ನಾಯ್ಕ್ ಅಕ್ಕಿಯನ್ನು ಲಾರಿಗೆ ಲೋಡ್ ಮಾಡಿ, ಕೇರಳ ರಾಜ್ಯದ ಕಾಸರಗೋಡಿನ ಶಾಜಿ ಟ್ರೆಡಿಂಗ್ ಕಂಪೆನಿಗೆ ಸರಕಾರದ ಉಚಿತ ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದ ಅಕ್ಕಿಯನ್ನು ಲಾರಿ ಮಾಲಕ ಗಿರೀಶ್ ನಾಯ್ಕ್ ತಿಳಿಸಿದಂತೆ ಲಾರಿ ಚಾಲಕ ಕೆ.ನರಸಿಂಹ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದರು.
ಈ ಬಗ್ಗೆ ಬ್ರಹ್ಮಾವರ ಆಹಾರ ನಿರೀಕ್ಷಕ ವಸಂತ ಕುಮಾರ್ ಅವರಿಗೆ ದೊರೆತ ಮಾಹಿತಿಯ ಮೇರೆಗೆ ಕೋಟ ಪೊಲೀಸ್ ಠಾಣಾ ಎಸ್ಸೈ ಪ್ರವೀಣ್ ಕುಮಾರ್ ಹಾಗೂ ಸಿಬ್ಬಂದಿ ಜೊತೆ ಮಣೂರು ಗ್ರಾಮದ ಮಹಾಲಕ್ಷ್ಮೀ ಹೊಟೇಲ್ ಎದುರು ಕಾರ್ಯಾಚರಣೆ ನಡೆಸಿ, ಲಾರಿಯನ್ನು ತಡೆದು 3,84,000 ರೂ. ಮೌಲ್ಯದ 320 ಪ್ಲಾಸ್ಟಿಕ್ ಚೀಲದಲ್ಲಿ ತುಂಬಿದ ಒಟ್ಟು 160 ಕ್ವಿಂಟಾಲ್ ಅಕ್ಕಿ ಹಾಗೂ 3,50,000ರೂ. ಮೌಲ್ಯದ ಲಾರಿಯನ್ನು ವಶಪಡಿಸಿ ಕೊಂಡರು. ಇವುಗಳ ಒಟ್ಟು ಮೌಲ್ಯ 7,34,000ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.