ಯಕ್ಷ ಕಲಾವಿದ ಮುಂಡ್ಕೂರು ಕೃಷ್ಣ ಶೆಟ್ಟಿ ನಿಧನ

Update: 2026-07-28 21:48 IST

ಉಡುಪಿ, ಜು.28: ಯಕ್ಷಗಾನ ವಲಯದಲ್ಲಿ ಕುಟ್ಟಿ ಎಂದೇ ಪ್ರಸಿದ್ಧರಾಗಿದ್ದ ಮುಂಡ್ಕೂರು ಕೃಷ್ಣ ಶೆಟ್ಟಿ (80) ಇಂದು ನಿಧನರಾದರು. ಅವರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ತೆಂಕುತಿಟ್ಟಿನ ಅಗ್ರಮಾನ್ಯ ಪುಂಡು ವೇಷಧಾರಿಯಾಗಿದ್ದ ಇವರು, ಕ್ರಿಶ್ಚಿಯನ್ ಬಾಬು ಅವರ ನಾಟ್ಯದಿಂದ ಪ್ರಭಾವಿತ ರಾಗಿ ಅವರಲ್ಲಿಯೇ ಆರಂಭದ ಯಕ್ಷಶಿಕ್ಷಣವನ್ನು ಪಡೆದರು. ಉದ್ಯೋಗನಿಮಿತ್ತ ಕೆಲವು ವರ್ಷ ಮುಂಬೈಯಲ್ಲಿದ್ದಾಗ ಗುರುನಾರಾಯಣ ಕೃಪಾಪೋಷಿತ ಯಕ್ಷಗಾನ ಮಂಡಳಿ ಯಲ್ಲಿ ವೇಷಧಾರಿಯಾಗಿದ್ದರು.

ಊರಿಗೆ ಮರಳಿ ಬಂದು 26 ವರ್ಷಗಳ ಕಾಲ ಕಟೀಲು ಮೇಳದಲ್ಲಿ ಹಾಗೂ ಕೊಲ್ಲೂರು, ಬಪ್ಪನಾಡು, ಮಧೂರು, ತಲಕಳ ಬಡಗುತಿಟ್ಟಿನ ಸಾಲಿಗ್ರಾಮ, ಮಾರಣಕಟ್ಟೆ ಮೇಳಗಳೂ ಸೇರಿದಂತೆ ಯಕ್ಷಗಾನದಲ್ಲಿ ಸುಮಾರು ನಾಲ್ಕೂವರೆ ದಶಕಗಳ ಕಾಲ ತಿರುಗಾಟ ಮಾಡಿದ್ದರು. ಇರಾ ಗೋಪಾಲಕೃಷ್ಣ ಭಾಗವತರು, ನಿಡ್ಲೆ ನರಸಿಂಹ ಭಟ್ಟರಂತಹ ಮಹಾನ್ ಕಲಾವಿದರ ಹಿಮ್ಮೇಳದಲ್ಲಿ ಅಭಿಮನ್ಯು, ಬಭ್ರುವಾಹನ, ಮಾರ್ತಾಂಡತೇಜ, ಅಶ್ವತ್ಥಾಮ ಮೊದಲಾದ ಪಾತ್ರಗಳಲ್ಲಿ ತಮ್ಮ ಕಲಾ ಪ್ರೌಢಿಮೆ ಮೆರೆದಿದ್ದರು.

ಇವರಿಗೆ 2022ರಲ್ಲಿ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ ನೀಡಿ ಗೌರವಿಸಲಾಗಿತ್ತು. ಕೃಷ್ಣ ಶೆಟ್ಟಿ ಅವರ ನಿಧನಕ್ಕೆ ಕಲಾ ರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News