"ಬಾಬರಿ ಮಸೀದಿಯಂತೆ ರಾಹುಲ್ ಗಾಂಧಿ ವಂಶವನ್ನು ಧ್ವಂಸ ಮಾಡುತ್ತೇವೆ"
ಶಾಸಕ ಯಶ್‌ಪಾಲ್ ಸುವರ್ಣ ಉಡುಪಿಯ ಪ್ರತಿಭಟನೆಯಲ್ಲಿ ಧ್ವೇಷ ಭಾಷಣ
ಉಡುಪಿ, ಜು.28: ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ನಗರದ ಹಳೆಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಮಂಗಳವಾರ ನಡೆದ ಪ್ರತಿಭಟನಾ ಸಭೆಯಲ್ಲಿ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಧ್ವೇಷದ ಭಾಷಣ ಮಾಡುವ ಮೂಲಕ ವಿವಾದ ಸೃಷ್ಠಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅವರು, 24 ಗಂಟೆಗಳ ಕಾಲ ಡ್ರಗ್ಸ್ ನಶೆಯಲ್ಲಿ ತೇಲುತ್ತಿರುವ ರಾಹುಲ್ ಗಾಂಧಿಗೆ ಚಿಂತನೆ ಮಾಡುವ ಶಕ್ತಿ ಇಲ್ಲ. ಕ್ರಾಕೋಜ್‌ಗಳೊಂದಿಗೆ ಸೇರಿ ನಮ್ಮ ಪ್ರಧಾನಿಯನ್ನು ಟೀಕೆ ಮಾಡುವ ಕೆಲಸ ರಾಹುಲ್ ಗಾಂಧಿ ಮಾಡುತ್ತಿದ್ದಾರೆ. ಈ ರೀತಿಯ ನಾಟಕ ಮಾಡಿದರೆ 1992ರಲ್ಲಿ ಹಿಂದುಗಳ ಭಾವನೆಗೆ ಧಕ್ಕೆ ಬಂದಾಗ ಹೇಗೆ ಬಾಬರಿ ಮಸೀದಿಯನ್ನು ಧ್ವಂಸ ಮಾಡಿದ್ದೇವೆಯೋ ಅದೇ ರೀತಿಯಲ್ಲಿ ರಾಹುಲ್ ಗಾಂಧಿ ವಂಶವನ್ನು ಧ್ವಂಸ ಮಾಡುವ ಕಾರ್ಯವನ್ನು ನಾವೆಲ್ಲ ಕಾರ್ಯಕರ್ತರು ಮಾಡಲಿದ್ದೇವೆ. ಈ ಮೂಲಕ ರಾಹುಲ್ ಗಾಂಧಿ ತಂಡಕ್ಕೆ ಎಚ್ಚರಿಕೆ ನೀಡುತ್ತೇವೆ ಎಂದರು.
ಕಾಂಗ್ರೆಸ್, ಕಾಕ್ರೋಚ್ ಹಾಗೂ ಎಸ್‌ಡಿಪಿಐ ಸೇರಿದಂತೆ ರಾಷ್ಟ್ರವಿರೋಧಿ ಶಕ್ತಿಗಳ ಬೆಂಬಲದಿಂದ ನಡೆಯುತ್ತಿರುವ ಪ್ರತಿಭಟನೆಗಳು ವಿದ್ಯಾರ್ಥಿಗಳ ಹಿತಾಸಕ್ತಿಗಾಗಿ ಅಲ್ಲ. ಬದಲು ಈ ಮೂಲಕ ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಕಾರ್ಯ ನಡೆಯುತ್ತಿದೆ ಎಂದು ಅವರು ಆರೋಪಿಸಿದರು.
ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಹೆಚ್ಚಿನವರು ವಿದ್ಯಾರ್ಥಿ ಗಳಲ್ಲ. ಮುಂದಿನ ದಿನಗಳಲ್ಲಿ ಈ ಪ್ರತಿಭಟನೆಗಳ ಹಿಂದಿರುವ ಸತ್ಯ ಬಹಿರಂಗವಾಗಲಿದೆ. ರಾಹುಲ್ ಗಾಂಧಿ ವಿದ್ಯಾರ್ಥಿಗಳ ತಲೆಯಲ್ಲಿ ಬಿಷಬೀಜ ಬಿತ್ತುವ ಮೂಲಕ ರಾಜಕೀಯ ಬೆಳೆ ಬೇಯಿಸಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಸಮಾಜದಲ್ಲಿ ಉದ್ವಿಗ್ನತೆ ಉಂಟು ಮಾಡುವ ರಾಜಕೀಯ ಮಾಡುತ್ತಿದೆ ಎಂದು ಅವರು ದೂರಿದರು.
ಕಲಾವಿದರನ್ನು ಒಟ್ಟುಗೂಡಿಸಿ ವಿಷ ಬೀಜ ಬಿತ್ತಲು ಯತ್ನಿಸುತ್ತಿರುವ ಪ್ರಕಾಶ್ ರಾಜ್, ಕರಾವಳಿಯಲ್ಲಿ ಬಂದು ಅಧಿಕ ಪ್ರಸಂಗ ಮಾಡಿದರೆ ಅರಬ್ಬೀ ಸಮುದ್ರದಲ್ಲಿ ಎದ್ದೇಳಬೇಕಾಗುತ್ತದೆ ಅಥವಾ ಮೀನಿಗೆ ಆಹಾರವಾಗಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.
ಮಣಿಪಾಲದ ಶಿಕ್ಷಣ ಸಂಸ್ಥೆಯಲ್ಲಿರುವ ಕೇರಳ ಹಾಗೂ ತಮಿಳುನಾಡು ಮೂಲದ ಏಳು ಮಂದಿ ಅಧ್ಯಾಪಕ ವರ್ಗ, ವಿದ್ಯಾರ್ಥಿಗಳ ತಲೆಗೆ ವಿಷ ಬೀಜ ಬಿತ್ತಿ ಪ್ರತಿಭಟನೆಗೆ ಪ್ರಚೋದಿಸಿದೆ. ಇದೇ ಅಧ್ಯಾಪಕ ವರ್ಗ ವಿದ್ಯಾರ್ಥಿಗಳಿಗೆ ಗಾಂಜಾವನ್ನು ಕೂಡ ಪೂರೈಕೆ ಮಾಡುತ್ತಿದ್ದಾರೆ. ಅವರ ಪಟ್ಟಿಯನ್ನು ಶೀಘ್ರದಲ್ಲಿಯೇ ಬಿಡುಗಡೆ ಮಾಡುತ್ತೇವೆ. ಈ ಕುರಿತು ಪೊಲೀಸರು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ತಪ್ಪಿತಸ್ಥರ ವಿರುದ್ಧ ಕ್ರಮವಾಗದಿದ್ದರೆ ಬಿಜೆಪಿ ಹೋರಾಟ ನಡೆಸಲಿದೆ ಎಂದು ಅವರು ಎಚ್ಚರಿಕೆ ನೀಡಿದರು.