ತರಬೇತಿ ಸಂಸ್ಥೆಯ ಪ್ರಾಂಚೈಸಿ ಹೆಸರಿನಲ್ಲಿ 40ಲಕ್ಷ ರೂ. ವಂಚನೆ: ಪ್ರಕರಣ ದಾಖಲು
ಬ್ರಹ್ಮಾವರ, ಮಾ.15: ರಾಜ್ಯ ಮತ್ತು ಕೇಂದ್ರ ಸರಕಾರದ ಉದ್ಯೋಗಕ್ಕೆ ಬೇಕಾಗುವ ತರಬೇತಿ ಹಾಗೂ ನೇಮಾಕಾತಿಯನ್ನು ನೀಡುವ ಸಂಸ್ಥೆಯ ಪ್ರಾಂಚೈಸಿ ನೀಡುವ ಹೆಸರಿನಲ್ಲಿ ಲಕ್ಷಾಂತರ ರೂ. ವಂಚನೆ ಎಸಗಿರುವ ಬಗ್ಗೆ ನ್ಯಾಯಾಲಯದ ಖಾಸಗಿ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಮ್ಮಾಡಿಯ ಚಂದ್ರ ಎಂಬವರಿಗೆ ರಾಘವೇಂದ್ರ ಕಟ್ಟಿ ಎಂಬಾತ ರಾಜ್ಯ ಮತ್ತು ಕೇಂದ್ರ ಸರಕಾರದ ಉದ್ಯೋಗಕ್ಕೆ ಬೇಕಾಗುವ ತರಬೇತಿ ಹಾಗೂ ನೇಮಾಕಾತಿಯನ್ನು ನೀಡುವ ಸಂಸ್ಥೆಯ ಪ್ರಾಂಚೈಸಿಯನ್ನು ನೀಡುವುದಾಗಿ ನಕಲಿ ದಾಖಲಾತಿಗಳನ್ನು ಸೃಷ್ಠಿಸಿ 2021ರ ಮೇ 10ರಂದು ಬ್ರಹ್ಮಾವರದಲ್ಲಿ ಭೇಟಿ ಮಾಡಿದ್ದರು. ಚಂದ್ರ ಪ್ರಾಂಚೈಸಿ ಕಾರ್ಯಾಲಯವನ್ನು ಬ್ರಹ್ಮಾವರದಲ್ಲಿ ಸ್ಥಾಪಿಸಲು 7,97,000ರೂ. ಹಣವನ್ನು ಖರ್ಚು ಮಾಡಿದ್ದರು.
ಅಲ್ಲದೇ 2021ರ ಅಗಸ್ಟ್ ತಿಂಗಳಿನಿಂದ 2022ರ ಮಾರ್ಚ್ ತಿಂಗಳವರೆಗೆ ಆರೋಪಿಗಳು ಹೇಳಿದ ಮಾನದಂಡಗಳಿಗೆ 5,20,000ರೂ. ಹಣವನ್ನು ಖರ್ಚು ಮಾಡಿದ್ದರು ಮತ್ತು ಇನ್ನಿತರ ಶುಲ್ಕ ಎಂದು 26,86,800ರೂ. ಹಣವನ್ನು ರಾಘವೇಂದ್ರ ಕಟ್ಟಿ ಅವರ ಕಂಪೆನಿಯ ಖಾತೆಗೆ ವರ್ಗಾವಣೆ ಮಾಡಿದ್ದರು. ನಂತರ ಆರೋಪಿಗಳು ಪ್ರಾಂಚೈಸಿ ಮುಖಾಂತರ 27 ಜನ ಉದ್ಯೋಗಾಕಾಂಕ್ಷಿಗಳನ್ನು ಆಯ್ಕೆ ಮಾಡಿದ್ದು ಪ್ರತಿ ಅಭ್ಯರ್ಥಿಗಳಿಂದ ತಲಾ 4,50,000ರೂ. ಹಣವನ್ನು ಸಂಗ್ರಹಿಸಿ ಕೊಡುವಂತೆ ತಿಳಿಸಿದ್ದರು.
ಇದರಿಂದ ಸಂಶಯಗೊಂಡ ಚಂದ್ರ ಆರೋಪಿ ರಾಘವೇಂದ್ರ ಕಟ್ಟಿಗೆ ಲಿಖಿತ ದಾಖಲೆಗಳನ್ನು ನೀಡುವಂತೆ ತಿಳಿಸಿದ್ದು, ಆತ ದಾಖಲಾತಿಗಳನ್ನು ನೀಡಲು ನಿರಾಕರಿಸಿದನು. ಆರೋಪಿಗಳು ಚಂದ್ರ ಅವರಿಗೆ ಹಂತ ಹಂತವಾಗಿ ಒಟ್ಟು 40,03,800ರೂ. ಹಣವನ್ನು ಪಡೆದು ವಂಚನೆ ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.