ರಾಜ್ಯದಲ್ಲಿ 48 ಡಯಾಲಿಸಿಸ್ ಕೇಂದ್ರ ಪ್ರಾರಂಭ: ಸಚಿವ ದಿನೇಶ್ ಗುಂಡೂರಾವ್
ಕುಂದಾಪುರ, ಫೆ.10: ಉಡುಪಿ ಜಿಲ್ಲೆಯ ಹೊಸ ತಾಲೂಕು ಕೇಂದ್ರಗಳಾದ ಬೈಂದೂರು, ಹೆಬ್ರಿ, ಬ್ರಹ್ಮಾವರ ಸಹಿತ ರಾಜ್ಯ ದಲ್ಲಿ 48 ಡಯಾಲಿಸಿಸ್ ಕೇಂದ್ರ ಪ್ರಾರಂಭಿಸಲಾಗಿದೆ. ಕುಂದಾಪುರ ಸಹಿತ ಇಡೀ ರಾಜ್ಯದಲ್ಲಿ 800 ಡಯಾಲಿಸಿಸ್ ಯಂತ್ರಗಳನ್ನು ಅಳವಡಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂ ರಾವ್ ಹೇಳಿದ್ದಾರೆ.
ಉಡುಪಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ ಜಿಲ್ಲೆ ಉಪವಿಭಾಗೀಯ ಸಾರ್ವಜನಿಕ ಆಸ್ಪತ್ರೆ ಕುಂದಾಪುರ ಇಲ್ಲಿನ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆ (ಎಐಐಎಸ್‌ಎಚ್) ಮೈಸೂರು ಇದರ ಔಟ್‌ರೀಚ್ ಸರ್ವೀಸ್ ಸೆಂಟ್ರ್ (ಓಎಸ್‌ಸಿ) ನೂತನ ಕಟ್ಟಡ ಹಾಗೂ ನೂತನ ಡಯಾಲಿಸಿಸ್ ಘಟಕವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಹೊಸ ಡಯಾಲಿಸಿಸ್ ಕೇಂದ್ರದ ಮೂಲಕ ಹೆಚ್ಚುವರಿ ಒತ್ತಡ ಸಮಸ್ಯೆ ನಿವಾರಣೆಯಾಗಲಿದೆ. ಇನ್ನು ಹಳೆ ಡಯಾಲಿಸಿಸ್ ಕೇಂದ್ರ, ನಿರ್ವಹಣೆ ಸಂಸ್ಥೆ ಬದಲಾಯಿಸಲಾಗುತ್ತದೆ. ರಾಜ್ಯದಲ್ಲಿ ಡಯಾಲಿಸಿಸ್ ವ್ಯವಸ್ಥೆಯ ನ್ಯೂನ್ಯತೆ ಹಾಗೂ ನಿರ್ವಹಣೆ ಸರಿಪಡಿಸಬೇಕು ಎಂಬ ನಿಟ್ಟಿನಲ್ಲಿ ಸರಕಾರ ದಿಟ್ಟ ಹೆಜ್ಜೆ ಇಟ್ಟಿದೆ ಎಂದು ಅವರು ತಿಳಿಸಿದರು.
ಸರಕಾರಿ ಆಸ್ಪತ್ರೆಗಳಿಂದ ಬಡ ಜನರಿಗೆ ಸಿಗಬೇಕಾದ ಎಲ್ಲಾ ಉಚಿತ ಸೌಲಭ್ಯಗಳು ತೊಂದರೆ ರಹಿತವಾಗಿ ಸಿಗಬೇಕು. ಸರಕಾರಿ ಆಸ್ಪತ್ರೆ ಪಕ್ಕ ಜನೌಷಧಿ ಸಹಿತ ಇತರ ಔಷಧ ಕೇಂದ್ರ ಇಲ್ಲದ ಸ್ಥಿತಿ ನಿರ್ಮಾಣವಾಗುವಲ್ಲಿ ಸುಧಾರಣೆ ತರಲು ಕ್ರಮವಹಿಸಲಾಗಿದೆ. ಸರಕಾರ ಘೋಷಿಸಿದ ಕಾರ್ಯಕ್ರಮಗಳು ಸಮರ್ಪಕ ಅನುಷ್ಠಾನವಾಗಲು ಕ್ರಮಕೈಗೊಳ್ಳಲಾಗುತ್ತಿದೆ ಎಂದರು.
108 ಅಂಬುಲೆನ್ಸ್ ವ್ಯವಸ್ಥೆಯಲ್ಲಿ ಆಧುನಿಕ ತಂತ್ರಜ್ಞಾನದ ಉಪಯೋಗಿಸಿ ಕೊಂಡು ತುರ್ತು ಹಾಗೂ ಗುಣಮಟ್ಟದ ಸೇವೆ ಜನರಿಗೆ ನೀಡಲು ಬದಲಾವಣೆ ತಂದು ಈಗಾಗಾಲೇ 272 ಹೊಸ ಆಂಬುಲೆನ್ಸ್ ರಾಜ್ಯದಾದ್ಯಂತ ನೀಡಲಾಗಿದೆ. ಈಗಿರುವ ತಾಲೂಕು, ಜಿಲ್ಲಾಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ ಸುವ್ಯವಸ್ಥೆಗೆ ತರಲು ಸುಮಾರು 500 ಕೋಟಿ ರೂ. ಹಣ ಇಡ ಲಾಗಿದೆ. ಕುಂದಾಪುರ ಆಸ್ಪತ್ರೆ ಹೊಸ ಕಟ್ಟಡ ನಿರ್ಮಾಣದ ಪ್ರಸ್ತಾವನೆ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಅವರು ಹೇಳಿದರು.
ಸ್ಪೀಚ್ ಆ್ಯಂಡ್ ಹಿಯರಿಂಗ್ ಸೆಂಟರ್ ಕಟ್ಟಡ ಕೊಡುಗೆಯಾಗಿ ನೀಡಿದ ದಾನಿಗಳಾದ ಶಿವರಾಮ ಪುತ್ರನ್ ಹಾಗೂ ಸತ್ಯನಾರಾಯಣ ಪುರಾಣಿಕ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಭಾಪತಿ ಜಯಕರ್ ಶೆಟ್ಟಿಯವರನ್ನು ಸನ್ಮಾನಿಸ ಲಾಯಿತು. ಘಟಕ ನಿರ್ಮಾಣಕ್ಕೆ ಮುತುವರ್ಜಿ ವಹಿಸಿದ ಕುಂದಾಪುರ ಉಪವಿಭಾಗೀಯ ಸಾರ್ವಜನಿಕ ಆಸ್ಪತ್ರೆಯ ಆಡಳಿತ ಶಸ್ತ್ರಚಿಕಿತ್ಸಕ ಡಾ. ರೊಬರ್ಟ್ ರೆಬೆಲ್ಲೊ ಹಾಗೂ ಕಾರ್ಯಕ್ರಮಕ್ಕೆ ಸಹಕರಿಸಿದ ಭಾನುಪ್ರಕಾಶ್ ಹೆಗ್ಡೆ ಅವರನ್ನು ಸನ್ಮಾನಿಸಲಾಯಿತು.
ಕುಂದಾಪುರ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋ ಗದ ಅಧ್ಯಕ್ಷ ಕೆ. ಜಯ ಪ್ರಕಾಶ್ ಹೆಗ್ಡೆ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಪುರಸಭೆ ಸದಸ್ಯೆ ದೇವಕಿ ಪಿ.ಸಣ್ಣಯ್ಯ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಆರೋಗ್ಯ ಇಲಾಖೆಯ ನಿರ್ದೇಶಕಿ ಡಾ.ಪುಷ್ಪಲತಾ, ವಿಭಾಗೀಯ ಸಹ ನಿರ್ದೇಶಕಿ ಡಾ.ರಾಜೇಶ್ವರಿ, ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಐ.ಪಿ.ಗಡಾದ ಮೊದಲಾದವರು ಉಪಸ್ಥಿತರಿದ್ದರು.
ಕುಂದಾಪುರ ಉಪವಿಭಾಗೀಯ ಸಾರ್ವಜನಿಕ ಆಸ್ಪತ್ರೆಯ ಆಡಳಿತ ಶಸ್ತ್ರಚಿಕಿತ್ಸಕ ಡಾ.ರೊಬರ್ಟ್ ರೆಬೆಲ್ಲೊ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪತ್ರಕರ್ತ ರಾಜೇಶ್ ಕೆ.ಸಿ. ಕಾರ್ಯಕ್ರಮ ನಿರೂಪಿಸಿದರು. ಎನ್‌ಸಿಡಿ ವಿಭಾಗದ ಕೌನ್ಸಿಲರ್ ವೀಣಾ ನಾಯಕ್ ವಂದಿಸಿದರು.