ಜಿಎಸ್‌ಟಿ ಸುಧಾರಣೆಯಿಂದ 48ಸಾವಿರ ರೂ.ಕೋ. ನಷ್ಟ: ಕೋಟ ಶ್ರೀನಿವಾಸ ಪೂಜಾರಿ
‘ಜಿಎಸ್‌ಟಿ ಸುಧಾರಣೆಗಳು’ ವಿಷಯದ ಕುರಿತು ವಿಚಾರ ಸಂಕಿರಣ
ಉಡುಪಿ, ಅ.16: ಜಿಎಸ್‌ಟಿಯಲ್ಲಿ ಇದ್ದ ನಾಲ್ಕು ಸ್ಲ್ಯಾಬ್‌ಗಳನ್ನು ಶೇ.5 ಮತ್ತು ಶೇ.18ಕ್ಕೆ ಸೀಮಿತಗೊಳಿಸಿರುವು ದರಿಂದ ಕೇಂದ್ರ ಸರಕಾರಕ್ಕೆ ವಾರ್ಷಿಕ 48ಸಾವಿರ ರೂ. ಕೋಟಿ ನಷ್ಟ ಆಗುತ್ತದೆ. ಅದರ ಅರ್ಧ ಪಾಲು ಅಂದರೆ 24 ಸಾವಿರ ಕೋಟಿ ರೂ. ರಾಜ್ಯಗಳಿಗೆ ನಷ್ಟವಾಗುತ್ತದೆ. ಆದರೆ ಕರ್ನಾಟಕ ಸರಕಾರ ರಾಜ್ಯಕ್ಕೆ 15ಸಾವಿರ ಕೋಟಿ ರೂ. ನಷ್ಟ ಎಂದು ಹೇಳುತ್ತಿದೆ. ಅಷ್ಟು ಮೊತ್ತ ರಾಜ್ಯಕ್ಕೆ ನಷ್ಟ ಆಗಲು ಸಾಧ್ಯವಿಲ್ಲ ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಉಡುಪಿ ಜಿಲ್ಲಾ ಬಿಜೆಪಿ, ಜಿಲ್ಲಾ ಆರ್ಥಿಕ ಪ್ರಕೋಷ್ಠ ಹಾಗೂ ಬಿಜೆಪಿ ಉಡುಪಿ ವಿಧಾನಸಭಾ ಕ್ಷೇತ್ರದ ಸಹಯೋಗ ದೊಂದಿಗೆ ‘ಮುಂದಿನ ಪೀಳಿಗೆಯ ಜಿಎಸ್‌ಟಿ 2.0’(ಜಿಎಸ್‌ಟಿ ಸುಧಾರಣೆಗಳು ಮತ್ತು ಗ್ರಾಹಕರಿಗೆ ಲಾಭಗಳು) ವಿಷಯದಲ್ಲಿ ಉಡುಪಿ ಹೋಟೆಲ್ ಡಯಾನ ಸಭಾಂಗಣದಲ್ಲಿ ಗುರುವಾರ ಆಯೋಜಿಸಲಾದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ರಾಜ್ಯದ ಈ ಸುಳ್ಳು ಹೇಳಿಕೆಯನ್ನು ಜನ ನಂಬುವ ಸಾಧ್ಯತೆ ಇದೆ. ಆದುದರಿಂದ ಈ ಬಗ್ಗೆ ಜನರಿಗೆ ಮನವರಿಕೆ ಮಾಡಿ ಕೊಡುವ ಕೆಲಸವನ್ನು ಬಿಜೆಪಿ ಮಾಡಬೇಕಾಗಿದೆ. ಜಿಎಸ್‌ಟಿ ಕಡಿತದಿಂದ ಜಿಡಿಪಿ ದರ ಏರಿಕೆ ಯಾಗಿದೆ. ಇದರಿಂದ ದೇಶದ ಆರ್ಥಿಕ ವ್ಯವಸ್ಥೆ ಪ್ರಗತಿ ಹೊಂದಲು ಅನು ಕೂಲವಾಗುತ್ತದೆ. ರಾಜಕೀಯ ಕಾರಣಕ್ಕಾಗಿ ಕೆಲವರು ಜಿಎಸ್‌ಟಿಯನ್ನು ಟೀಕೆ ಮಾಡುತ್ತಿದ್ದಾರೆ ಎಂದರು.
ಅಧ್ಯಕ್ಷತೆಯನ್ನು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ವಹಿಸಿದ್ದರು. ಬೆಂಗಳೂರಿನ ಅರ್ಥಶಾಸ್ತ್ರಜ್ಞ ವಿಶ್ವನಾಥ ಭಟ್ ವಿಚಾರ ಸಂಕಿರಣವನ್ನು ನಡೆಸಿಕೊಟ್ಟರು. ಉಡುಪಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಕಾರ್ಯಕ್ರಮದ ಸಂಚಾಲಕ ಕಿರಣ್ ಕುಮಾರ್ ಬೈಲೂರು ಉಪಸ್ಥಿತರಿದ್ದರು.
ಉಡುಪಿ ನಗರ ಬಿಜೆಪಿ ಅಧ್ಯಕ್ಷ ದಿನೇಶ್ ಅಮೀನ್ ಸ್ವಾಗತಿಸಿದರು. ಜಿಲ್ಲಾ ಆರ್ಥಿಕ ಪ್ರಕೋಷ್ಠ ಸಂಚಾಲಕ ದಿವಾಕರ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರೇಷ್ಮಾ ಉದಯ ಶೆಟ್ಟಿ ಇತ್ತೀಚೆಗೆ ಅಗಲಿದ ನ್ಯಾಯವಾದಿ ಎಂ.ಕೆ. ವಿಜಯ ಕುಮಾರ್ ನುಡಿನಮನ ಮಾಡಿದರು. ಪ್ರಧಾನ ಕಾರ್ಯದರ್ಶಿ ದಿನಕರ ಶೆಟ್ಟಿ ಹೆರ್ಗ ಕಾರ್ಯಕ್ರಮ ನಿರೂಪಿಸಿದರು.