ಉಡುಪಿ: ನಿರಂತರ ಮಳೆ; 5 ಮನೆ, ಕೊಟ್ಟಿಗೆಗೆ ಹಾನಿ
ಉಡುಪಿ, ಜು.16: ಉಡುಪಿ ಜಿಲ್ಲೆಯಾದ್ಯಂತ ಬುಧವಾರವೂ ಮಳೆ ಮುಂದುವರಿದಿದೆ. ಇಡೀ ದಿನ ಮಳೆ ಸುರಿಯುತಿದ್ದು, ಆಗಾಗ ಮಳೆ ಯೊಂದಿಗೆ ಜೋರಾದ ಗಾಳಿಯೂ ಬೀಸುತ್ತಿತ್ತು. ದಿನದಲ್ಲಿ ಐದು ಮನೆ ಗಳಿಗೆ ಹಾಗೂ ಒಂದು ಜಾನುವಾರು ಕೊಟ್ಟಿಗೆಗೆ ಹಾನಿಯಾದ ವರದಿ ಬಂದಿದ್ದು, ಸುಮಾರು ನಾಲ್ಕೂವರೆ ಲಕ್ಷ ರೂ.ಗಳಷ್ಟು ನಷ್ಟದ ಅಂದಾಜು ಮಾಡಲಾಗಿದೆ.
ಬೈಂದೂರು ತಾಲೂಕು ಮುದೂರಿನ ಪಾರ್ವತಿ ಎಂಬವರ ಮನೆ ಗಾಳಿ-ಮಳೆಗೆ ಕುಸಿದಿದ್ದು, ಮೂರು ಲಕ್ಷ ರೂ.ಗಳಿಗೂ ಅಧಿಕ ನಷ್ಟದ ಅಂದಾಜು ಮಾಡಲಾಗಿದೆ. ಕುಂದಾಪುರ ತಾಲೂಕು ಉಪ್ಪಿನಕುದ್ರುವಿನ ಶಂಕರ ಎಂಬವರ ಮನೆಯೂ ಗಾಳಿ-ಮಳೆಯಿಂದ ಭಾಗಶ: ಹಾನಿಗೊಳಗಾಗಿದೆ.
ಬ್ರಹ್ಮಾವರ ತಾಲೂಕು ಕೋಡಿಯ ಕುಶಲ ಖಾರ್ವಿ ಎಂಬವರ ಮನೆ ಮೇಲೆ ಮರ ಬಿದ್ದು ಅಪಾರ ಹಾನಿ ಸಂಭವಿಸಿದ್ದು, 20 ಸಾವಿರ ರೂ.ಗಳಿಗೂ ಅಧಿಕ ನಷ್ಟ ಸಂಭವಿಸಿದೆ. ಕಾಪು ತಾಲೂಕು ನಡ್ಪಾಲು ಗ್ರಾಮದ ನವೀನ್ ಸುವರ್ಣರ ಮನೆಗೆ 60,000ರೂ. ಹಾಗೂ ಕುತ್ಯಾರು ಗ್ರಾಮದ ಸೋಮನಾಥ ಎಂಬವರ ಮನೆ ಸಹ ಭಾಗಶ: ಹಾನಿಗೊಳಗಾಗಿದ್ದು 30,000ರೂ. ನಷ್ಟದ ಅಂದಾಜು ಮಾಡಲಾಗಿದೆ.
ಇನ್ನು ಕೋಟೇಶ್ವರ ಗ್ರಾಮದ ಉದಯ ಎಂಬವರ ಮನೆಯ ಜಾನುವಾರು ಕೊಟ್ಟಿಗೆ ನಿನ್ನೆಯ ಮಳೆಗೆ ಭಾಗಶ: ಹಾನಿಗೊಳಗಾಗಿದ್ದು, ಕನಿಷ್ಠ 20,000ರೂ.ಗಳಷ್ಟು ನಷ್ಟವಾಗಿರುವ ಬಗ್ಗೆ ಮಾಹಿತಿ ಬಂದಿದೆ.
ಬಿರುಗಾಳಿಯ ಎಚ್ಚರಿಕೆ: ತಿರುವನಂತಪುರದಲ್ಲಿರುವ ಭಾರತೀಯ ಹವಾಮಾನ ಇಲಾಖೆಯ ಹವಾಮಾನ ಕೇಂದ್ರ ನೀಡಿರುವ ಮುನ್ಸೂಚನೆ ಯಂತೆ ಪಶ್ಚಿಮ ಕರಾವಳಿಯ ಲಕ್ಷದ್ವೀಪ, ಕೇರಳ ಹಾಗೂ ಕರ್ನಾಟಕ ಕಡಲು ತೀರಗಳಲ್ಲಿ ಸೈಕ್ಲೋನ್ ಎಚ್ಚರಿಕೆ ಮುಂದುವರಿದಿದೆ. ಕೇರಳ ಮತ್ತು ಲಕ್ಷದ್ವೀಪಗಳ ಬಂದರುಗಳಲ್ಲಿ ಎಚ್ಚರಿಕೆ ನಂ.5 ಹಾಗೂ ಕರ್ನಾಟಕ ಕರಾವಳಿಯ ಬಂದರುಗಳಲ್ಲಿ ಎಚ್ಚರಿಕೆ ನಂ.3ರ ಸಿಗ್ನಲ್‌ಗಳನ್ನು ಹಾರಿಸುವಂತೆ ಹವಾಮಾನ ಇಲಾಖೆ ತಿಳಿಸಿದೆ.
ಅರಬ್ಬಿ ಸಮುದ್ರದಲ್ಲಿ ಗಂಟೆಗೆ 40ರಿಂದ 50ಕಿ.ಮೀ., ಕೆಲವೊಮ್ಮೆ ಗಂಟೆಗೆ 60ಕಿ.ಮೀ. ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಜುಲೈ 18ರವರೆಗೆ ಕರಾವಳಿ ತೀರದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿದೆ.
ಕರ್ನಾಟಕ ಕರಾವಳಿಯ ಬಂದರುಗಳಲ್ಲಿ -ಕಾರವಾರ, ಮಂಗಳೂರು, ಪಣಂಬೂರು, ಹೊನ್ನಾವರ, ಭಟ್ಕಳ, ಗಂಗೊಳ್ಳಿ, ಮಲ್ಪೆ- ಸ್ಥಳೀಯವಾಗಿ ನಂ.3 ಎಚ್ಚರಿಕೆಯ ಸೂಚನೆಯನ್ನು ಹಾರಿಸುವಂತೆಯೂ ಹವಾಮಾನ ಇಲಾಖೆ ತಿಳಿಸಿದೆ.
ರಾಜ್ಯ ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಗಾಳಿಯೊಂದಿಗೆ ಸಾಧಾರಣದಿಂದ ಭಾರೀ ಮಳೆ ಜಿಲ್ಲೆಯ ಅಲ್ಲಲ್ಲಿ ಸುರಿಯುವ ನಿರೀಕ್ಷೆಯನ್ನು ಹವಾಮಾನ ಇಲಾಖೆ ವ್ಯಕ್ತಪಡಿಸಿದೆ.