ಉಡುಪಿ ಪರ್ಯಾಯ ಮಹೋತ್ಸವ: 50 ಕೋಟಿ ರೂ. ವಿಶೇಷ ಅನುದಾನಕ್ಕೆ ಸಿಎಂಗೆ ಮನವಿ
ಉಡುಪಿ, ಆ.25: ಉಡುಪಿ ಪರ್ಯಾಯ ಮಹೋತ್ಸವದ ಪೂರ್ವ ಭಾವಿಯಾಗಿ ಉಡುಪಿ ನಗರದ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗೆ 50 ಕೋಟಿ ರೂ. ವಿಶೇಷ ಅನುದಾನ ಮಂಜೂರು ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಮನವಿ ಮಾಡಿದ್ದಾರೆ.
ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುವ ಉಡುಪಿ ಶ್ರೀಕೃಷ್ಣ ಮಠದ ಪರ್ಯಾಯ ಮಹೋತ್ಸವ ನಾಡಹಬ್ಬ ಮಾದರಿಯಲ್ಲಿ ಅತ್ಯಂತ ವೈಭವ ಪೂರ್ಣವಾಗಿ ನಡೆಯುತ್ತಿದ್ದು ದೇಶ ವಿದೇಶದ ಲಕ್ಷಾಂತರ ಭಕ್ತರು ಉಡುಪಿಗೆ ಭೇಟಿ ನೀಡುತ್ತಾರೆ. ಉಡುಪಿ ಜಿಲ್ಲೆಗೆ ಪ್ರವಾಸಿಗರನ್ನು ಆಕರ್ಷಿಸುವ ಟೆಂಪಲ್ ಟೂರಿಸಂ ಭಾಗವಾಗಿರುವ ಪರ್ಯಾಯ ಮಹೋತ್ಸವವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ರಸ್ತೆಗಳ ದುರಸ್ತಿ, ಮರು ಡಾಮರೀಕರಣ ಹಾಗೂ ಸ್ವಚ್ಛತೆಗಾಗಿ ಸೂಕ್ತ ಅನುದಾನದ ಅಗತ್ಯವಿದೆ.
ನೈರ್ಮಲ್ಯ, ದೀಪಾಲಂಕಾರ, ಮೂಲ ಸೌಕರ್ಯ ಅಗತ್ಯ ಕಾಮಗಾರಿ ಗಳಿಗೆ 50 ಕೋಟಿ ರೂ. ವಿಶೇಷ ಅನುದಾನವನ್ನು ಪರ್ಯಾಯ ಮಹೋತ್ಸವಕ್ಕಾಗಿ ಮಂಜೂರು ಮಾಡುವಂತೆ ಮುಖ್ಯಮಂತ್ರಿಗಳಿಗೆ ಶಾಸಕ ಯಶ್‌ಪಾಲ್ ಸುವರ್ಣ ಮನವಿ ಮಾಡಿದ್ದಾರೆ.