ಟಾಸ್ಕ್ ನೀಡಿ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿ 6 ಲಕ್ಷ ರೂ. ವಂಚನೆ
ಉಡುಪಿ, ಜ.20: ಟಾಸ್ಕ್ ನೀಡಿ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಳ್ತೂರಿನ ಪ್ರತ್ಯಕ್ಷ(31) ಎಂಬವರಿಗೆ ಅಪರಿಚಿತ ವ್ಯಕ್ತಿಗಳು ರಿವಿವ್ಯೆ ಟಾಸ್ಕ್ ಹಾಗೂ ಕ್ರಿಪ್ಟೋ ಕರೆನ್ಸಿಯಿಂದ ಹೆಚ್ಚಿನ ಲಾಭಾಂಶ ಪಡೆಯಬಹುದೆಂದು ಆಸೆ ತೋರಿಸಿ, ಟೆಲಿಗ್ರಾಂ ಆ್ಯಪ್‌ನ ಲಿಂಕ್ ಕಳುಹಿಸಿದ್ದರು. ಹೆಚ್ಚಿನ ಲಾಭಾಂಶವನ್ನು ನೀಡುವುದಾಗಿ ನಂಬಿಸಿ ಆರೋಪಿಗಳು ಸೂಚಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಹಾಗೂ ಯುಪಿಐ ಐಡಿಗಳಿಗೆ ಜ.13ರಿಂದ ಜ.19ರ ಮಧ್ಯಾವಧಿಯಲ್ಲಿ ಹಂತ ಹಂತವಾಗಿ ಒಟ್ಟು 6,16,500ರೂ. ಹಣವನ್ನು ಪಾವತಿಸಿದ್ದರು. ಆದರೆ ಪ್ರತ್ಯಕ್ಷ ಹೂಡಿಕೆ ಮಾಡಿದ ಹಣವನ್ನಾಗಲಿ ಅಥವಾ ಲಾಭಾಂಶವನ್ನು ನೀಡದೇ ನಂಬಿಸಿ, ಮೋಸ ಮಾಡಿರುವುದಾಗಿ ದೂರಲಾಗಿದೆ.
ಗ್ರಾಹಕರ ವೇದಿಕೆ ಹೆಸರಿನಲ್ಲಿ ಲಕ್ಷಾಂತರ ರೂ. ವಂಚನೆ
ಉಡುಪಿ: ಸ್ಕೂಟರ್ ಡೆಲಿವರಿಯಾಗದ ಬಗ್ಗೆ ದೂರು ನೀಡಿದ ವ್ಯಕ್ತಿಯೊಬ್ಬರಿಗೆ ಗ್ರಾಹಕರ ವೇದಿಕೆ ಹೆಸರಿನಲ್ಲಿ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂತೆಕಟ್ಟೆಯ ರವಿರಾಜ್(27) ಎಂಬವರು ಆನ್‌ಲೈನ್‌ನಲ್ಲಿ ಬುಕ್ ಮಾಡಿ ಓಲಾ ಸ್ಕೂಟರ್ ಡೆಲಿವರಿ ಆಗದ ಬಗ್ಗೆ ಓಲಾ ಕಂಪನಿಯ ವಿರುದ್ದ ದೂರು ನೀಡಲು ಜ.15ರಂದು ಗೂಗಲ್‌ನಲ್ಲಿ ಸರ್ಚ್ ಮಾಡಿ ನ್ಯಾಶನಲ್ ಕಂಸ್ಯೂ ಮರ್ ಫೋರಂ ಎಂಬ ವೆಬ್‌ಸೈಟ್‌ನಲ್ಲಿ ಮಾಹಿತಿಯನ್ನು ನಮೂದಿಸಿದ್ದರು.
ನಂತರ ರವಿರಾಜ್‌ಗೆ ಕರೆ ಮಾಡಿ ನಿಮ್ಮ ದೂರನ್ನು ಸ್ವೀಕರಿಸಲಾಗಿದ್ದು, ವಾಟ್ಸಾಪ್‌ನಲ್ಲಿ ಕಳುಹಿಸಿರುವ ಲಿಂಕ್‌ಗೆ ಮಾಹಿತಿ ಯನ್ನು ನಮೂದಿಸುವಂತೆ ಸೂಚಿಸಿದರು. ಅದರಂತೆ ರವಿರಾಜ್ ತನ್ನ ಬ್ಯಾಂಕ್‌ಗಳ ಮಾಹಿತಿಯನ್ನು ನಮೂದಿಸಿದ್ದರು. ಬಳಿಕ ರವಿರಾಜ್ ಅವರ ಗಮನಕ್ಕೆ ಬಾರದೇ ಜ.20ರಂದು ಎರಡು ಬ್ಯಾಂಕ್ ಖಾತೆಗಳಿಂದ ಒಟ್ಟು 1,99,000ರೂ. ಹಣವನ್ನು ವರ್ಗಾವಣೆ ಮಾಡಿ ಮೋಸ ಮಾಡಿರುವುದಾಗಿ ದೂರಲಾಗಿದೆ.