ಎಕೆಎಂಎಸ್ ಸೈಫ್ ಕೊಲೆ ಪ್ರಕರಣ: ಮೂವರು ಆರೋಪಿಗಳು 6 ದಿನ ಪೊಲೀಸ್ ಕಸ್ಟಡಿಗೆ
ಉಡುಪಿ, ಸೆ.29: ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕೊಡವೂರು ಸಾಲ್ಮರದ ಮನೆಯಲ್ಲಿ ಶನಿವಾರ ನಡೆದ ಎಕೆಎಂಎಸ್ ಬಸ್ ಮಾಲಕ, ರೌಡಿ ಶೀಟರ್ ಸೈಫ್ ಯಾನೆ ಸೈಫುದ್ದೀನ್ ಅತ್ರಾಡಿ ಕೊಲೆ ಪ್ರಕರಣದ ಮೂವರು ಆರೋಪಿಗಳನ್ನು ಪೊಲೀಸರು ಹೆಚ್ಚಿನ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದಾರೆ.
ಆರೋಪಿಗಳಾದ ಮಹಮದ್ ಫೈಸಲ್ ಖಾನ್, ಮೊಹಮದ್ ಶರೀಫ್, ಅಬ್ದುಲ್ ಶುಕೂರು ಯಾನೆ ಅದ್ದು ಅವರನ್ನು ಪ್ರಕರಣದ ತನಿಖಾಧಿಕಾರಿ ಮಲ್ಪೆ ಪೊಲೀಸ್ ವೃತ್ತ ನಿರೀಕ್ಷಕ ರಾಮಚಂದ್ರ ನಾಯಕ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಭದ್ರತೆಯಲ್ಲಿ ಉಡುಪಿ ಸಿನೀಯರ್ ಸಿವಿಲ್ ಜಡ್ಜ್ ಹಾಗೂ ಸಿಜೆಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ತನಿಖಾಧಿಕಾರಿಗಳು ಆರೋಪಿಗಳನ್ನು ಹೆಚ್ಚಿನ ತನಿಖೆಗಾಗಿ 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದರು. ಆದರೆ ನ್ಯಾಯಾಧೀಶ ಪುರುಷೋತ್ತಮ್ ಆರೋಪಿಗಳನ್ನು ಆರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿ, ಅ.4ರಂದು ನ್ಯಾಯಾಲಯಕ್ಕೆ ಹಾಜರುಪಡಿ ಸುವಂತೆ ಆದೇಶ ನೀಡಿದರು. ಅದರಂತೆ ವಶಕ್ಕೆ ಪಡೆದುಕೊಂಡ ಪೊಲೀಸರು ಆರೋಪಿಗಳನ್ನು ಹೆಚ್ಚಿನ ತನಿಖೆಗೆ ಒಳಪಡಿಸಿದ್ದಾರೆ.
ಸುಪಾರಿ ಬಗ್ಗೆ ತನಿಖೆ: ‘ಈ ಕೃತ್ಯದಲ್ಲಿ ಇವರು ಮೂವರು ಮಾತ್ರ ಇದ್ದಾರೆಯೇ ಅಥವಾ ಹಿಂದಿನಿಂದ ಬೇರೆಯವರು ಬೆಂಬಲಿಸಿದ್ದಾರೆಯೇ ಎಂಬುದು ತಿಳಿದು ಬರಬೇಕಾಗಿದೆ. ಇವರೇ ವೈಯಕ್ತಿಕ ಕಾರಣಕ್ಕೆ ಕೊಲೆ ಮಾಡಿದ್ದಾರೆಯೇ ಅಥವಾ ಸುಪಾರಿ ನೀಡಿ ಕೊಲೆ ಮಾಡಿಸಲಾಗಿದೆಯೇ ಎಂಬುದರವ ಬಗ್ಗೆಯೂ ತನಿಖೆ ಮಾಡಲಾಗುತ್ತಿದೆ ಎಂದು ಎಸ್ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ.
ಕೃತ್ಯ ನಡೆದ ಸ್ಥಳದಲ್ಲಿ ಬಂಧಿತ ಮೂವರು ಆರೋಪಿಗಳು ಮಾತ್ರ ಇದ್ದರು ಎಂಬುದು ಕಂಡುಬಂದಿದೆ. ಇವರಿಗೆ ಈ ಕೃತ್ಯ ಎಸಗಲು ಬೇರೆಯಾದರೂ ಹಣ ಒದಗಿಸಿದ್ದಾರೆಯೇ ಅಥವಾ ಇವರೊಂದಿಗೆ ಬೇರೆ ಯಾರದರೂ ಇದ್ದಾರೆಯೇ ಅಥವಾ ಸಹಾಯ ಮಾಡಿದ್ದಾರೆಯೇ ಎಂಬುದು ತನಿಖೆ ಯಿಂದ ತಿಳಿದು ಬರಬೇಕಾಗಿದೆ’ ಎಂದು ಅವರು ತಿಳಿಸಿದ್ದಾರೆ.
ಪ್ರಕರಣದ ಆರೋಪಿಗಳಾದ ಶರೀಫ್ ಮತ್ತು ಶುಕೂರು 2020ರಲ್ಲಿ ನಡೆದ ವಶಿಷ್ಟ ಕೊಲೆ ಪ್ರಕರಣದಲ್ಲಿ ಸೈಫುದ್ದೀನ್ ಜೊತೆ ಭಾಗಿಯಾಗಿ ಆರೋಪಿ ಯಾಗಿದ್ದರು. ಇನ್ನೋರ್ವ ಆರೋಪಿ ಪೈಜಲ್ ಖಾನ್, ಸೈಫುದ್ದೀನ್ ವ್ಯವಹಾರ ನೋಡಿಕೊಂಡು ಬಲಗೈ ಬಂಟನಂತೆ ಇದ್ದನು. ಫೈಜಲ್ ಖಾನ್ ಸೈಫುದ್ದೀನ್‌ನ ಮನೆಗೆ ಬಂದು ಕಾರಿನಲ್ಲಿ ಕೊಡವೂರು ಮನೆಗೆ ಕರೆದು ಕೊಂಡು ಹೋಗಿ ಇತರ ಇಬ್ಬರೊಂದಿಗೆ ಸೇರಿ ರಾಡ್ ಮತ್ತು ಮಚ್ಚಿನಿಂದ ಕೊಲೆ ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಪೂರ್ವ ನಿಯೋಜಿತ ಕೃತ್ಯ: ಎಸ್ಪಿ ಹರಿರಾಂ ಶಂಕರ್
ಪ್ರಾಥಮಿಕ ತನಿಖೆ ಪ್ರಕಾರ ಇದೊಂದು ಪೂರ್ವ ನಿಯೋಜಿತ ಕೃತ್ಯ ಎಂಬುದು ಕಂಡುಬಂದಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ತಿಳಿಸಿದ್ದಾರೆ.
ಈ ಮೂವರಿಗೆ ಸ್ಥಳದಲ್ಲಿ ಜಗಳ ನಡೆದು ಸಿಟ್ಟಿನಿಂದ ಆಗಿರುವ ಕೃತ್ಯ ಇದು ಅಲ್ಲ. ಮೊದಲೇ ಯೋಜನೆ ಹಾಕಿಕೊಂಡಿರುವುದು ಸ್ಪಷ್ಟವಾಗಿದೆ. ಅದರಂತೆ ಸೈಫುದ್ದೀನ್‌ನ ಎರಡನೇ ಮನೆಯಲ್ಲಿ ಮೊದಲೇ ಇಬ್ಬರು ಬಂದು ಕಾದು ಕುಳಿತು, ಯಾರು ಇಲ್ಲದಾಗ ಕೊಲೆ ಮಾಡಲಾಗಿದೆ. ಇದೆಲ್ಲವೂ ತನಿಖೆಯಿಂದ ಸ್ಪಷ್ಟವಾಗಿ ತಿಳಿದುಬರಬೇಕಾಗಿದೆ ಎಂದರು.
ಬಂಧಿತ ಮೂವರು ಆರೋಪಿಗಳನ್ನು ತನಿಖೆಗೆ ಒಳಪಡಿಸಿದಾಗ ಕೊಲೆಗೆ ಕೆಲವೊಂದು ಕಾರಣಗಳನ್ನು ಹೇಳಿದ್ದಾರೆ. ಅದು ಎಷ್ಟು ಸತ್ಯ ಎಂಬುದನ್ನು ತನಿಖೆಯಿಂದ ಪರಿಶೀಲನೆ ಮಾಡಬೇಕಾಗಿದೆ ಎಂದು ಎಸ್ಪಿ ಹರಿರಾಂ ಶಂಕರ್ ತಿಳಿಸಿದರು.