ಬೈಂದೂರು: ವಿದ್ಯಾಪೋಷಕ್‌ನ 70ನೇ ಮನೆ ಫಲಾನುಭವಿಗೆ ಹಸ್ತಾಂತರ
ಉಡುಪಿ, ಮೇ 3: ಯಕ್ಷಗಾನ ಕಲಾರಂಗ ಬೈಂದೂರು ತಾಲೂಕಿನ ಗೋಳಿಹೊಳೆಯ ವಿದ್ಯಾಪೋಷಕ್‌ನ ದ್ವಿತೀಯ ಪಿಯುಸಿ ವಿದ್ಯಾರ್ಥಿ ವರದ ಎಂ. ಎನ್.ಗೆ ದಾನಿಗಳ ಮೂಲಕ ಸುಮಾರು ಆರು ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಿಕೊಟ್ಟ ಮನೆಯನ್ನು ಶುಕ್ರವಾರ ಫಲಾನುಭವಿ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.
ಮಂಗಳೂರಿನ ಉದ್ಯಮಿ ಪಿ.ಗೋಕುಲನಾಥ ಪ್ರಭು ಅವರು ತಮ್ಮ 70ನೆಯ ವರ್ಷಾಚರಣೆಯ ಸಂದರ್ಭದಲ್ಲಿ ನಿರ್ಮಿಸಿಕೊಟ್ಟ ನೂತನ ಮನೆ ‘ಗೋಕುಲ ನಿಲಯದ’ವನ್ನು ದಾನಿ ಗೋಕುಲನಾಥ ಪ್ರಭು ದೀಪ ಬೆಳಗಿಸಿ ಉದ್ಘಾಟಿಸಿದರು. ಒಬ್ಬ ಅರ್ಹ ಫಲಾನುಭವಿಗೆ ಮನೆ ನಿರ್ಮಿಸಿಕೊಟ್ಟ ಧನ್ಯತೆ ನಮಗಾಗಿದೆ ಎಂದರು.
ಈ ಹಿಂದೆ ಪ್ರಭುಗಳು ತಮ್ಮ ತಾಯಿಯ ಜನ್ಮಶತಾಬ್ಧಿಯ ಸಂದರ್ಭ ದಲ್ಲಿಯೂ ಕಾಪು ಪಾದೂರಿನ ವಿದ್ಯಾಪೋಷಕ್ ವಿದ್ಯಾರ್ಥಿನಿ ಮಲ್ಲಿಕಾ ಶೆಟ್ಟಿ ಇವರಿಗೆ ಮನೆಯನ್ನು ನಿರ್ಮಿಸಿಕೊಟ್ಟಿದ್ದರು.
ಬೈಂದೂರು ಶಾಸಕ ಗುರುರಾಜಗಂಟಿಹೊಳೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಯಕ್ಷಗಾನ ಕಲಾರಂಗ ಪಾರದರ್ಶಕ ವ್ಯವಹಾರ ಮತ್ತು ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಧಾವಿಸುವ ಗುಣದಿಂದ ದಾನಿಗಳನ್ನು ಆರ್ಕಷಿಸುತ್ತಿದೆ ಎಂದು ಅಭಿಪ್ರಾಯ ಪಟ್ಟರು.
ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸಪ್ತತಿಯ ಶುಭಾವಸರದಲ್ಲಿರುವ ಗೋಕುಲನಾಥ ಪ್ರಭುಗಳನ್ನು ಶಾಲು, ಸ್ಮರಣಿಕೆಗಳೊಂದಿಗೆ ಅಭಿನಂದಿಸಿದರು. ಈ ಸಂದರ್ಭದಲ್ಲಿ ನಿವೃತ್ತ ಬ್ಯಾಂಕ್ ಅಧಿಕಾರಿ ನಂದನ ಕಾಮತ್, ಯಕ್ಷಗಾನ ಕಲಾರಂಗದ ಎಸ್.ವಿ. ಭಟ್, ಕೆ. ಸದಾಶಿವ ರಾವ್, ಯು. ವಿಶ್ವನಾಥ ಶೆಣೈ, ಕಿಶೋರ್ ಕನ್ನರ್ಪಾಡಿ ಮತ್ತು ಅರೆಶಿರೂರಿನ ಶ್ರೀಮೂಕಾಂಬಿಕಾ ದೇವಳ ಪ್ರೌಢಶಾಲೆಯ ಅಧ್ಯಾಪಕಿ ಗೀತಾ ಉಪಸ್ಥಿತರಿದ್ದರು.
ನಾರಾಯಣ ಎಂ. ಹೆಗಡೆ ವಂದಿಸಿದರು. ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು.