ಕಾರ್ಮಿಕರ ಮಕ್ಕಳಿಗೆ ವಸತಿ ಶಾಲೆ, ಕೌಶಲ್ಯ ಕೇಂದ್ರ ಸ್ಥಾಪನೆಗೆ ವಿರೋಧ: ಜು.9ರಂದು ಕಟ್ಟಡ ಕಾರ್ಮಿಕರಿಂದ ರಾಜ್ಯವ್ಯಾಪಿ ಮುಷ್ಕರ
ಉಡುಪಿ, ಜು.7: ಚಿಕ್ಕಬಳ್ಳಾಪುರದ ನಂದಿಬೆಟ್ಟದಲ್ಲಿ ನಡೆದ ರಾಜ್ಯ ಸರಕಾರದ ಸಚಿವ ಸಂಪುಟ ಸಭೆಯಲ್ಲಿ ಕಾರ್ಮಿಕರ ಮಕ್ಕಳಿಗೆ 1125 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿ ನಿಧಿ ಬಳಸಿ ವಸತಿ ಶಾಲೆಗಳನ್ನು ಆರಂಭಿಸಲು ನಿರ್ಧರಿಸಿರುವ ಕ್ರಮವನ್ನು ಸಿಐಟಿಯುಗೆ ಸೇರಿದ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘಟನೆಗಳ ಸಮನ್ವಯ ಸಮಿತಿ ತೀವ್ರವಾಗಿ ವಿರೋಧಿಸಿದ್ದು, ತನ್ನ ಈ ನಿರ್ಧಾರದಿಂದ ಹಿಂದೆ ಸರಿಯುವಂತೆ ಆಗ್ರಹಿಸಿದೆ.
ಇದೇ ಸಂದರ್ಭದಲ್ಲಿ ಹೈಕೋರ್ಟ್ ತೀರ್ಪಿನಂತೆ ಶೈಕ್ಷಣಿಕ ಧನ ಸಹಾಯ ಪಾವತಿಸಬೇಕು ಎಂದು ಒತ್ತಾಯಿಸಿ ಮತ್ತು ಕೇಂದ್ರ ಸರಕಾರದ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ವಿರೋಧಿಸಿ ಜುಲೈ 9ರಂದು ಕಟ್ಟಡ ಕಾರ್ಮಿಕರ ರಾಜ್ಯವ್ಯಾಪಿ ಮುಷ್ಕರ ನಡೆಸಲು ನಿರ್ಧರಿಸಲಾಗಿದೆ. ರಾಜ್ಯದ್ಯಾಂತ ಲಕ್ಷಾಂತರ ಕಟ್ಟಡ ಕಾರ್ಮಿಕರು ಜುಲೈ 9ರಂದು ಕೆಲಸ ಸ್ಥಗಿತಗೊಳಿಸಿ ಮುಷ್ಕರ ನಡೆಸಲಿದ್ದಾರೆ. ಇದರ ಭಾಗವಾಗಿ ಉಡುಪಿ ಜಿಲ್ಲೆಯಲ್ಲಿ ಸಹ ಮುಷ್ಕರ ನಡೆಯಲಿದ್ದು, ಬೆಳಗ್ಗೆ 10 ಗಂಟೆಗೆ ಉಡುಪಿ, ಕುಂದಾಪುರ ಮತ್ತು ಬೈಂದೂರು ಪ್ರದೇಶದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಸಿಐಟಿಯುಗೆ ಸೇರಿದ ಉಡುಪಿ ಜಿಲ್ಲಾಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘಟನೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ಸಂಘಟನೆ, ಕಾರ್ಮಿಕ ಇಲಾಖೆ ಅಥವಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿ ವತಿಯಿಂದ ವಸತಿ ಶಾಲೆ ಪ್ರಾರಂಭಿಸುವ ನಿರ್ಧಾರ ಸೂಕ್ತವಾದುದ್ದಲ್ಲ ಎಂಬುದಕ್ಕೆ ಹಲವು ಕಾರಣಗಳನ್ನು ನೀಡಿದೆ.
*ರಾಜ್ಯ ಸರಕಾರದ ಅಡಿಯಲ್ಲಿ 47449 ಸರಕಾರಿ ಶಾಲೆಗಳು ನಡೆಯುತ್ತಿವೆ. ಇದರಲ್ಲಿ 2023-24 ನೇ ಸಾಲಿನಲ್ಲಿ 42,66,645 ಮಕ್ಕಳು ವಿದ್ಯಾಬ್ಯಾಸ ಮಾಡುತ್ತಿದ್ದಾರೆ. ಮತ್ತು 1,73,647 ಶಿಕ್ಷಕರು ಕೆಲಸ ಮಾಡುತ್ತಿದ್ದಾರೆ. ಹಾಗೆಯೇ ಖಾಸಗಿ ಶಿಕ್ಷಣ ಶಾಲೆಗಳಲ್ಲಿ 46,43,225 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
*ರಾಜ್ಯದಲ್ಲಿ ಸಮಾಜ ಕಲ್ಯಾಣ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಇಲಾಖೆಗಳು ಸೇರಿ ನಡೆಸುತ್ತಿರುವ 833 ವಸತಿ ಶಾಲೆಗಳಲ್ಲಿ 2.5 ಲಕ್ಷ ವಿದ್ಯಾರ್ಥಿಗಳು ದ್ಯಾಭ್ಯಾಸ ನಡೆಸುತ್ತಿದ್ದಾರೆ. ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳು ಬಹುತೇಕ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ವಿಭಾಗಗಳಿಗೆ ಸೇರಿದ ವರು. ಬಹುತೇಕ ಮಕ್ಕಳು ಈಗಾಗಲೇ ಇಂತಹ ಸರ್ಕಾರಿ ಹಾಗೂ ವಸತಿ ಶಾಲೆಗಳಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.
*ಸರಕಾರದ ವಿವಿಧ ಇಲಾಖೆಗಳು ನಡೆಸುತ್ತಿರುವ ಈ ಶಾಲೆಗಳು ಹಾಗೂ ವಸತಿ ನಿಲಯಗಳಲ್ಲಿ ಕಟ್ಟಡ ಮತ್ತು ಇತರೆ ಅಸಂಘಟಿತ ವಲಯದ ಮಕ್ಕಳು ಅತ್ಯಂತ ಕಡಿಮೆ ಶುಲ್ಕ ಪಾವತಿಸುತ್ತಿದ್ದಾರೆ. ಅವರು ಗಳಿಗೆ ಮಧ್ಯಾಹ್ನದ ಬಿಸಿಯೂಟ ದೊರೆಯುತ್ತಿದೆ. ಶೂ ಹಾಗೂ ಸಮವಸ್ತ್ರಗಳು, ಉಚಿತ ಪಠ್ಯಪುಸ್ತಕಗಳು, ಮೀಸಲಾತಿ ಸೌಲಭ್ಯಗಳು, ಕ್ರೀಡಾ ಹಾಗೂ ಸಾಂಸ್ಕೃತಿಕ ಪರಿಕರಗಳು ಹಾಗೂ ಉತ್ತೇಜನ ಪ್ರೋತ್ಸಾಹ ಗಳು, ಇದಕ್ಕಿಂತ ಹೆಚ್ಚಾಗಿ ಅತ್ಯಂತ ಪ್ರತಿಭಾವಂತ ಶಿಕ್ಷಕರು ಲಭ್ಯವಾಗುತ್ತಿದ್ದಾರೆ. ಹೀಗಾಗಿ ಪ್ರತ್ಯೇಕ ವಸತಿ ಶಾಲೆಗಳನ್ನು ಆರಂಭಿಸುವುದು ಅದಕ್ಕಾಗಿ 1125 ಕೋಟಿ ಕಲ್ಯಾಣ ನಿಧಿಯನ್ನು ಬಳಕೆ ಮಾಡುವುದು ಕಾರ್ಮಿಕ ಇಲಾಖೆ ಅಥವಾ ಕಲ್ಯಾಣ ಮಂಡಳಿ ಕಾರ್ಯಕ್ರಮವಾಗಬಾರದು.
*ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿ ಈಗಾಗಲೇ ಘೋಷಿಸಿರುವ ಸೌಲಭ್ಯಗಳಾದ ಪೂರ್ವಪ್ರಾಥಮಿಕ ಶಾಲೆಯಿಂದ ಉನ್ನತ ಶಿಕ್ಷಣದವರೆಗೆ ಶೈಕ್ಷಣಿಕ ಧನ ಸಹಾಯವನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು ಮತ್ತು ಉನ್ನತ ಹಾಗೂ ವಿದೇಶಿ ಶಿಕ್ಷಣ ಪಡೆಯುವವರ ಮಕ್ಕಳಿಗೆ ಶಿಕ್ಷಣ ಸಾಲ ಪ್ರೋತ್ಸಾಹ ಇತ್ಯಾದಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಕ್ರಮ ವಹಿಸಬೇಕು.
ಕಲ್ಯಾಣ ಮಂಡಳಿ ಹಲವು ಯೋಜನೆಗಳಿಗೆ ಕಟ್ಟಡ ಕಾರ್ಮಿಕ ಕಲ್ಯಾಣ ನಿಧಿಯ ಸುಮಾರು 2000 ಕೋಟಿ ರೂ. ಬಳಕೆ ಮಾಡಲು ಹೊರಟಿರುವ ತೀರ್ಮಾನವನ್ನು ಕೈಬಿಡಬೇಕೆಂದು ಉಡುಪಿ ಜಿಲ್ಲಾಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘಟನೆಗಳು ಒಕ್ಕೊರಲ ಒತ್ತಾಯಮಾಡಿವೆ.
1996ರ ಕಾಯ್ದೆಯ ಉದ್ದೇಶವನ್ನು ಗೌರವಿಸಿ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ನೈಜ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುವಂತಹ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಆದ್ಯತೆ ನೀಡಿ, ಇವುಗಳನ್ನು ಪರಿಣಾಮಕಾರಿ ಜಾರಿ ಮಾಡುವಂತೆ ನಿರ್ದೇಶನ ನೀಡಬೇಕು ಮತ್ತು ಪ್ರೊಕ್ಯೂರ್‌ಮೆಂಟ್ ಆಧಾರಿತ ಖರೀದಿ ಯೋಜನೆಗಳಿಗೆ ಕಡಿವಾಣ ಹಾಕಬೇಕೆಂದು ಸಂಘಟನೆಗಳ ಸಂಚಾಲಕ ಸುರೇಶ್ ಕಲ್ಲಾಗರ ಹಾಗೂ ರಾಜ್ಯಧ್ಯಕ್ಷ ಬಾಲಕೃಷ್ಣ ಶೆಟ್ಟಿ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.