ಉಡುಪಿ ಜಿಲ್ಲೆಯ ಏಕವಿನ್ಯಾಸ ನಕ್ಷೆ, 9/11, ದಾಖಲೆಗಳ ಸಮಸ್ಯೆ ಸರಕಾರದ ಗಮನಕ್ಕೆ: ಡಿಸಿ ಸ್ವರೂಪ ಟಿ.ಕೆ
ಉಡುಪಿ: ಜಿಲ್ಲೆಯಲ್ಲಿ ಸಾರ್ವಜನಿಕರು ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವ ಏಕವಿನ್ಯಾಸ ನಕ್ಷೆ, 9/11 ಹಾಗೂ ಇತರ ದಾಖಲೆಗಳನ್ನು ಪಡೆಯಲು ಆಗುತ್ತಿರುವ ತೊಂದರೆಗಳ ಕುರಿತಂತೆ ಶೀಘ್ರವೇ ಸರಕಾರದ ಗಮನಕ್ಕೆ ತರಲಾಗುವುದು. ಇದಕ್ಕಾಗಿ ಜಿಲ್ಲೆಯ ಸಂಬಂಧಿತ ಎಲ್ಲಾ ಬಾಗೀಧಾರರ ಸಭೆಯನ್ನು ಕರೆದು ಅವರ ಅಹವಾಲುಗಲನ್ನು ಕೇಳಿ ಸಮಸ್ಯೆಗಳ ಪಟ್ಟಿಯನ್ನು ಕೂಢ್ರೀಕರಿಸಲಾಗುವುದು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಹೇಳಿದ್ದಾರೆ.
ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಏಕ ನಿವೇಶನ ನಕ್ಷೆ ಹಾಗೂ ನಮೂನೆ 9/11ರಲ್ಲಿ ಎದುರಾಗುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಲು ಆಯೋಜಿಸಲಾದ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ಐದು ದಿನದೊಳಗೆ ಈ ಬಗ್ಗೆ ಸಭೆ ಕರೆದು ಎಲ್ಲರ ಅಹವಾಲುಗಳನ್ನು ಆಲಿಸಿ, ಸಮಸ್ಯೆಗಳ ಪಟ್ಟಿಯನ್ನು ಸಿದ್ಧಪಡಿಸುವಂತೆ ಅವರು ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದರಲ್ಲದೇ, ಹೊಸ ಅಧಿಸೂಚನೆಯಿಂದ ಜಿಲ್ಲೆಯ ಜನತೆಎಗ ಆಗುತ್ತಿರುವ ಸಮಸ್ಯೆಗಳನ್ನು ಸರಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.
ಸರಕಾರದ ಹೊಸ ಅಧಿಸೂಚನೆಯಂತೆ ಜಿಲ್ಲೆಯಲ್ಲಿ ಸಾರ್ವಜನಿಕರು ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವ ಏಕ ವಿನ್ಯಾಸ ನಕ್ಷೆ ಹಾಗೂ ನಮೂನೆ 9/11ನ್ನು ನಗರಾಭಿವೃದ್ಧಿ ಪ್ರಾಧಿಕಾರದಿಂದ ಪಡೆಯಲು ಈ ಸಮಸ್ಯೆ ಉಂಟಾಗುತ್ತಿದೆ. ಇದರಲ್ಲಿ ಕರಾವಳಿ ಜಿಲ್ಲೆಗಳಿಗೆ ಕೆಲವೊಂದು ವಿನಾಯಿತಿಯನ್ನು ನೀಡಲು ಸರಕಾರ ದೊಂದಿಗೆ ಚರ್ಚಿಸಲಾಗುವುದು ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಉಡುಪಿ -ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಏಕವಿನ್ಯಾಸ ನಕ್ಷೆ ಹಾಗೂ ನಮೂನೆ 9/11ನ್ನು ಪಡೆಯಲು ಜನಸಾಮಾನ್ಯರು ಸಂಬಂಧಿಸಿದ ಇಲಾಖೆ ಗಳಿಗೆ ಅರ್ಜಿ ಸಲ್ಲಿಸಿದರೂ ಅವುಗಳನ್ನು ಪಡೆಯಲು ವಿಳಂಬವಾಗುತ್ತಿದೆ. ತಿಂಗಳುಗಟ್ಟಲೇ ಸುತ್ತಾಡಿದರೂ ಅರ್ಜಿಗಳು ವಿಲೇವಾರಿ ಆಗುತ್ತಿಲ್ಲ. ಹೊಸ ಅಧಿಸೂಚನೆಯ ಪ್ರಕಾರ ಎಲ್ಲಾ ಅರ್ಜಿಗಳನ್ನು ಅನುಮೋದನೆ ನೀಡಲೂ ಸಹ ಕಷ್ಟಸಾಧ್ಯವಾಗುತ್ತಿದೆ. ಇದಕ್ಕೆ ಸರಕಾರ ಕೆಲವೊಂದು ವಿನಾಯಿತಿಗಳನ್ನು ಕರಾವಳಿ ಜಿಲ್ಲೆಗಳಿಗೆ ವಿಶೇಷ ಪ್ರಕರಣವೆಂದು ತಿಳಿದು ನೀಡುವ ಅಗತ್ಯವಿದೆ. ಈ ಬಗ್ಗೆ ಸರಕಾರದ ಮಟ್ಟದಲ್ಲಿ ಸಭೆ ನಡೆಸಿ, ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಕೋಟ ತಿಳಿಸಿದರು.
ಶಾಸಕ ಸುನೀಲ್ ಕುಮಾರ್ ಮಾತನಾಡಿ, ಪ್ರಾಧಿಕಾರ ಹೊಸ ಅಧಿಸೂಚನೆ ಯಲ್ಲಿ ಕರಾವಳಿ ಜಿಲ್ಲೆಗಳಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಒಂದು ಪಟ್ಟಿ ಮಾಡಿಕೊಡಿ. ಅದನ್ನು ಎಲ್ಲರೂ ಸೇರಿ ಮತ್ತೊಮ್ಮೆ ಚರ್ಚಿಸಿ ಬೆಂಗಳೂರಿನಲ್ಲಿ ಕಾರ್ಯದರ್ಶಿಗಳ ಮಟ್ಟದಲ್ಲಿ ಸಭೆ ಮಾಡಿ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡೋಣಾ ಎಂದು ಸಲಹೆ ನೀಡಿದರು.
ಜನಪ್ರತಿನಿಧಿಗಳು ಜನಸಾಮಾನ್ಯರ ಸಮಸ್ಯೆಗಳನ್ನು ಬಗೆಹರಿಸಲು ಸಭೆಗ ಳನ್ನು ಕರೆದಾಗ ಸಭೆಯ ನಡುವಳಿಯನ್ನು ದಾಖಲಿಸಿದ್ದಲ್ಲಿ ಮುಂದಿನ ಸಭೆಗಳಲ್ಲಿ ನಡುವಳಿ ಆಧಾರದ ಮೇಲೆ ಸಭೆಯನ್ನು ಮುಂದುವರಿಸಲು ಅನುಕೂಲವಾಗುತ್ತದೆ. ಆದರೆ ಕಳೆದ ಸಭೆಯ ನಡುವಳಿಯನ್ನು ದಾಖಲಿಸದೇ ಇರುವ ಬಗ್ಗೆ ಕಾರ್ಕಳ ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು.
ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಕರಾವಳಿ ಭಾಗದ ಜಿಲ್ಲೆ ಗಳಲ್ಲಿ ಗ್ರಾಮ ಠಾಣೆಗಳು ಇಲ್ಲದೇ ಇರುವುದರಿಂದ ಸಮಸ್ಯೆಗಳು ಉದ್ಭವವಾಗುತ್ತಿವೆ. ಲೋಕೋಪಯೋಗಿ ಇಲಾಖೆ ರಸ್ತೆಯ ಅಂಚಿನಿಂದ ಗೃಹ ನಿರ್ಮಾಣಕ್ಕೆ 6ಮೀ. ಬಿಟ್ಟು ಏಕವಿನ್ಯಾಸ ನಕ್ಷೆಗೆ ಅನುಮೋದನೆ ನೀಡಬೇಕು. ಇದರಿಂದ ಜನರಿಗೆ ಸಮಸ್ಯೆ ಉಂಟಾಗುತ್ತಿದೆ ಎಂದರು.
ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ನಗರ ಯೋಜನಾ ಪ್ರಾಧಿಕಾರದಲ್ಲಿ ನಮ್ಮ ಕೆಲಸಗಳು ಆಗುವುದಿಲ್ಲ ಎಂದು ಜನರ ಮನಸ್ಸಿನಲ್ಲಿ ಇದೆ. ಸಲ್ಲಿಕೆಯಾಗುವ ಅರ್ಜಿಗಳಲ್ಲಿ ಕಂಡು ಬರುವ ಸಮಸ್ಯೆ ಗಳನ್ನು ತಾಳ್ಮೆಯಿಂದ ಆಲಿಸಿ, ಪರಿಹಾರ ಕಂಡುಕೊಳ್ಳಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಶಾಸಕರಾದ ಯಶ್‌ಪಾಲ್ ಸುವರ್ಣ ಹಾಗೂ ಗುರುರಾಜ್ ಶೆಟ್ಟಿ ಗಂಟಿಹೊಳೆ, ನಗರಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ, ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ನಗರ ಮತ್ತು ಗ್ರಾಮಾಂತರ ಇಲಾಖೆಯ ಸಹಾಯಕ ನಿರ್ದೇಶಕಿ ರಮ್ಯಾ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.